ಅಸಹಜ ಸಾವುಗಳೂ ಆಡಳಿತ ಕ್ರೌರ್ಯವೂ

Prasthutha: June 17, 2021

-ನಾ.ದಿವಾಕರ

ಕೋವಿಡ್‌ ನಂತಹ ಒಂದು ಸಾಂಕ್ರಾಮಿಕ ಉಂಟುಮಾಡಿದ ಅನಾಹುತ ನಮ್ಮ ನಾಗರಿಕ ಸಮಾಜವನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಜಾಗೃತಗೊಳಿಸಬೇಕಿತ್ತು. ಅಧಿಕಾರ ರಾಜಕಾರಣದ ಆಟಾಟೋಪದಲ್ಲಿ ಮರೆತುಹೋಗಬಹುದಾದ ಮಾನವ ಸಂವೇದನೆಯ ಎಳೆಗಳನ್ನು ಕಿಂಚಿತ್ತಾದರೂ ಹೊರಗೆಳೆಯಬೇಕಿತ್ತು. ದಿನನಿತ್ಯ ಸಾವುಗಳನ್ನು ಎಣಿಸುವ ಅಧಿಕಾರ ಕೇಂದ್ರಗಳಲ್ಲಿ ಪ್ರತಿಯೊಂದು ಸಾವು ಮನಸನ್ನು ಪ್ರಕ್ಷುಬ್ಧಗೊಳಿಸುವ ವಿಕ್ಷಿಪ್ತತೆಯನ್ನು ಉಂಟುಮಾಡಬೇಕಿತ್ತು. ಇಡೀ ಸಮಾಜವೇ ಆರೋಗ್ಯದಿಂದಿದೆ ಎನ್ನುವ ಭ್ರಮೆಯಲ್ಲಿದ್ದ ನಮಗೆ ಒಮ್ಮಿಂದೊಮ್ಮೆಲೆ ಸರಣಿ ಸಾವುಗಳು ಎದುರಾದಾಗ ನಮ್ಮ ಸಮಾಜ ಆಘಾತಕ್ಕೊಳಗಾಗಬೇಕಿತ್ತು.

ಇದೇ ನಾಗರಿಕ ಸಮಾಜವನ್ನು ಆಡಳಿತಾತ್ಮಕವಾಗಿ ಪ್ರತಿನಿಧಿಸುವ ಒಂದು ವ್ಯವಸ್ಥೆಯ ಮನಸ್ಥಿತಿಯೂ ಭಿನ್ನವಾಗಿರಲು ಸಾಧ್ಯವಿಲ್ಲ ಅಲ್ಲವೇ? ಅಧಿಕಾರ ಪೀಠಗಳಲ್ಲಿರುವವರು, ಆಡಳಿತ ನಿರ್ವಹಣೆಯ ಹೊಣೆ ಹೊತ್ತವರು ಕನಿಷ್ಠ ತಮ್ಮ ವ್ಯಾಪ್ತಿಯಲ್ಲಿ ಉಂಟಾಗುವ ವ್ಯತ್ಯಯಗಳಿಂದ ಎಚ್ಚೆತ್ತುಕೊಳ್ಳಬೇಕು ಎಂಬ ನಿರೀಕ್ಷೆ ತಪ್ಪೇನಲ್ಲ. ಏಕೆಂದರೆ ನಾವು ಆಯ್ಕೆ ಮಾಡಿರುವುದು ಮನುಷ್ಯರನ್ನು. ಸಹಜ ಮಾನವರಲ್ಲಿ ಇರಬೇಕಾದ ಸಂಯಮ, ಸಂವೇದನೆ ಮತ್ತು ಸೂಕ್ಷ್ಮತೆಗಳೆಲ್ಲವೂ ಅಧಿಕಾರ ವಲಯವನ್ನು ಪ್ರತಿನಿಧಿಸುವ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಬಯಸುವುದು ಆಕ್ಷೇಪಾರ್ಹವೂ ಅಲ್ಲ.

ಈ ನಿರೀಕ್ಷೆ, ಅಪೇಕ್ಷೆಯ ನಡುವೆಯೇ ನಮ್ಮ ನಡುವೆ ಅಸಹಜ ಸಾವುಗಳ ಮಹಾಪೂರವೇ ಹರಿದುಬರುತ್ತಿದೆ. ದೂರದ ಗಂಗಾ ತೀರದಲ್ಲಿ ತೇಲಿಬರುತ್ತಿರುವ ಹೆಣಗಳ ಕಮಟು ಈಗಾಗಲೇ ಕನ್ಯಾಕುಮಾರಿಗೂ ಬಡಿದಿದೆ. ಆದರೂ ಆಳುವವರಿಗೆ ಅವುಗಳು ಹೆಣಗಳಾಗಿ ಕಾಣುವುದಿಲ್ಲ, ಕಂಡರೂ ಕೋವಿಡ್ ಹೆಣಗಳಾಗಿ ಕಾಣುವುದಿಲ್ಲ. ಗಂಗೆಗೂ ಅನಾಥ ಶವಗಳಿಗೂ ಚಾರಿತ್ರಿಕವಾಗಿಯೇ ಅವಿನಾಭಾವ ಸಂಬಂಧವಿರುವುದರಿಂದ ಇದು ಸಹಜ ಪ್ರಕ್ರಿಯೆ ಎಂದೇ ಭಾವಿಸಿದರೆ ಅಚ್ಚರಿಯೇನಲ್ಲ. ಕರ್ನಾಟಕದಲ್ಲೂ ಅನಾಥ ಶವಗಳಿವೆ. ಮಾನ್ಯ ಸಚಿವರೇ ಅಸ್ಥಿ ವಿಸರ್ಜನೆ ಮಾಡುವ ಮೂಲಕ ಇತಿಶ್ರೀ ಹಾಡಿದ್ದಾರೆ. ಇಲ್ಲಿ ಪ್ರಶ್ನೆ ಇರುವುದು ವೈದ್ಯಕೀಯವಾಗಿ ನಮ್ಮ ನಾಗರಿಕ ಸಮಾಜವನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಜಾಗೃತಗೊಳಿಸಬೇಕಿದ್ದ ಕೊರೋನಾ ಹೇಗೆ ಇಂತಹ ನಿಷ್ಕ್ರಿಯತೆಯನ್ನು ಸೃಷ್ಟಿಸಿದೆ?

ಕೊರೋನಾ ಎರಡನೆ ಅಲೆಯ ಸಂದರ್ಭದಲ್ಲಿ ಈ ಪ್ರಶ್ನೆ ಕನಿಷ್ಠ ಪ್ರಜ್ಞಾವಂತರನ್ನಾದರೂ ಕಾಡಲೇಬೇಕಿದೆ. ಕೊರೋನಾ ಸೋಂಕು ಕಡಿಮೆ ಮಾಡಲು ಲಾಕ್‌ ಡೌನ್ ವಿಧಿಸಿ, ಪರೀಕ್ಷೆಗಳ ಪ್ರಮಾಣವನ್ನು ತಗ್ಗಿಸಿ ಸಾವುಗಳ ಲೆಕ್ಕಾಚಾರದಲ್ಲಿ ಕೊಂಚ ವ್ಯತ್ಯಯ ಮಾಡುತ್ತಾ ನಾವು ಗೆದ್ದೆವು ಎಂದು ಬೀಗುವ ಎಲ್ಲ ಪ್ರಯತ್ನಗಳೂ ನಮ್ಮ ನಡುವೆ ನಡೆಯುತ್ತಿವೆ. ಈ ಪ್ರಯತ್ನಗಳ ನಡುವೆಯೇ ನಮ್ಮೊಳಗಿನ ಅಸೂಕ್ಷ್ಮತೆಗಳೂ ಹೊರಬರುತ್ತಿವೆ. ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಲಸಿಕೆ ನೀಡುವ ಮೂಲಕ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರು ಜಾತಿ ಮೌಢ್ಯವನ್ನು ಸಾಂವಿಧಾನಿಕ ಚೌಕಟ್ಟಿನಲ್ಲೇ ಸಮರ್ಥಿಸಿಕೊಂಡಿದ್ದರೆ, ವೈದಿಕ ಸಂಪ್ರದಾಯಗಳ ಅನುಸಾರ ಅನಾಥ ಶವಗಳ ಅಸ್ಥಿ ವಿಸರ್ಜನೆ ಮಾಡುವ ಮೂಲಕ ಮತ್ತೋರ್ವ ಸಚಿವರು ಮೌಢ್ಯದ ಸಾರ್ವತ್ರೀಕರಣಕ್ಕೆ ಪ್ರಯತ್ನಿಸಿದ್ದಾರೆ.

ಮೂರು ದುರಂತ ಮೂವತ್ತೊಂದು ಸಾವು

ಇಷ್ಟರ ನಡುವೆ ರಾಜ್ಯದಲ್ಲಿ ಮೂರು ಮಹಾ ದುರಂತಗಳು ಸಂಭವಿಸಿವೆ. ಮೇ 2ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಜನರು ಸಾವಿಗೀಡಾಗಿದ್ದಾರೆ. 24 ಅಮಾಯಕ ಜನರು ಅಸಹಜ ಸಾವಿಗೀಡಾಗಿ ಒಂದು ತಿಂಗಳು ಕಳೆದಿದ್ದರೂ ಇನ್ನೂ ತನಿಖೆ ಚಾಲ್ತಿಯಲ್ಲಿದೆ. ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಜಿಲ್ಲಾಸ್ಪತ್ರೆಯೊಂದರಲ್ಲಿ ಆಮ್ಲಜನಕ ಪೂರೈಕೆ ಇಲ್ಲದೆ 24 ಜೀವಗಳು ಬಲಿಯಾಗಿರುವ ಸಂದರ್ಭದಲ್ಲೂ, ನಮ್ಮ ಆಡಳಿತ ವ್ಯವಸ್ಥೆ ಖರೀದಿ-ಪೂರೈಕೆ-ದಾಸ್ತಾನು-ಆದೇಶ ಮತ್ತಿತರ ಅಲಂಕಾರಿಕ ಪದಗಳ ಸುತ್ತ ಗಿರಕಿ ಹೊಡೆಯುತ್ತಿರುವುದನ್ನು ನೋಡಿದರೆ, ಸರ್ಕಾರ ಘೋಷಿಸಿದ ತಲಾ 2ಲಕ್ಷ ರೂ.ಗಳ ಪರಿಹಾರವೇ ಅಂತಿಮ ನ್ಯಾಯ ಎಂದು ಕಾಣುತ್ತಿದೆ.

ಜಿಲ್ಲೆಯಲ್ಲಿ ನಡೆದ ಇಂತಹ ಒಂದು ಹೃದಯವಿದ್ರಾವಕ ದುರಂತಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಅಲ್ಲಿನ ಶಾಸಕರು ಮತ್ತು ಕೊಂಚಮಟ್ಟಿಗೆ ಸಂಸದರು ಸ್ವಪ್ರೇರಣೆಯಿಂದಲೇ ಹೊಣೆ ಹೊರಬೇಕಿತ್ತು. ಆದರೆ ಜಿಲ್ಲಾಧಿಕಾರಿಗೆ ವರ್ಗಾವಣೆಯ ಶಿಕ್ಷೆಯೂ ಆಗದಂತಹ ವಜ್ರ ಕವಚವನ್ನು ಮಾನ್ಯ ಸಂಸದರು ಒದಗಿಸಿಬಿಟ್ಟಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೂ ಕಾಯೋಣ, ನಂತರ ಶಿಕ್ಷೆಯ ಬಗ್ಗೆ ಮಾತನಾಡೋಣ ಎಂದೂ ಸಂಸದರು ಹೇಳಿದ್ದಾರೆ. ಕೊನೆಗೂ ಡಿಸಿ ವರ್ಗಾವಣೆಯಾಗಿದೆ. ಸಾರ್ವಜನಿಕವಾಗಿ ಖುಲ್ಲಂಖುಲ್ಲಾ ಕಾಣುವ ಇಂತಹ ಪ್ರಮಾದದ ಬಗ್ಗೆ ತನಿಖೆ ಪೂರ್ಣಗೊಳಿಸಲು ಒಂದು ತಿಂಗಳ ಅವಧಿ ಅವಶ್ಯವೇ? ಈ ಪ್ರಶ್ನೆಗೆ ಉತ್ತರ ಶೋಧಿಸಲು ಹೊರಟರೆ, ಪಕ್ಷ, ತತ್ವ, ಸಿದ್ಧಾಂತ, ಜಾತಿ, ಅಧಿಕಾರ, ಮತಗಟ್ಟೆ, ಪಂಚಾಯತಿಯಿಂದ ವಿಧಾನಸೌಧದವರೆಗೆ ಹರಿದುಬಿಡುತ್ತದೆ. ಆದರೆ ಸಾರ್ವಜನಿಕ ಪ್ರಜ್ಞೆ ಇರುವ ಯಾರಿಗಾದರೂ ಮೂಡಲೇಬೇಕಾದ ಒಂದು ಪ್ರಶ್ನೆ ಎಂದರೆ, ಒಂದು ವೇಳೆ ಸಾವಿಗೀಡಾದ 24 ಜನರು ಯಾವುದೋ ಒಂದು ಪಕ್ಷದ, ಸಂಘಟನೆಯ ಅಥವಾ ಗುಂಪಿನ ಕಾರ್ಯಕರ್ತರೋ ಅಥವಾ ನಾಯಕರೋ ಆಗಿದ್ದಲ್ಲಿ ಪರಿಸ್ಥಿತಿ ಏನಾಗಬಹುದಿತ್ತು?

 ಬಹುಶಃ ಈ ಪ್ರಶ್ನೆಗೆ ಸಂಸದರ ಮೌನ ಉತ್ತರ ನೀಡಬಹುದು. ಏಕೆಂದರೆ ಅಲ್ಲಿ ಸತ್ತವರು ಅಮಾಯಕ ಪ್ರಜೆಗಳು, ಅಸ್ತಿತ್ವವಿಲ್ಲದ ಜೀವಗಳು, ಅಸ್ಮಿತೆಗಳಿಲ್ಲದ ಜೀವಾತ್ಮಗಳು, ಯಾವುದೇ ಹಣೆಪಟ್ಟಿಯಿಲ್ಲದ ದೇಹಗಳು. ಈ ಅಮಾಯಕ ಜೀವಗಳಿಗೆ ಸರ್ಕಾರವನ್ನು ಅಲುಗಾಡಿಸುವ ಶಕ್ತಿಯೂ ಇರುವುದಿಲ್ಲ, ಅಧಿಕಾರಸ್ಥರ ಸ್ಥಾನ ಭಂಗ ಮಾಡುವ ಸಾಮರ್ಥ್ಯವೂ ಇರುವುದಿಲ್ಲ. ಇವು ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ಅನಾಥ ಶವಗಳೇ ಆಗಿಬಿಡುತ್ತವೆ. ಗಂಗೆಯಲ್ಲಿ ಹರಿದು ಬಂದ ಶವಗಳಿಗೂ, ಈ ಶವಗಳಿಗೂ ವ್ಯತ್ಯಾಸವೇನಾದರೂ ಇದ್ದರೆ ಅದು ಭೌಗೋಳಿಕ ಅಸ್ಮಿತೆಯಷ್ಟೇ. ಮಾನ್ಯ ಸಚಿವರು ಸಾಂಪ್ರದಾಯಿಕವಾಗಿ ನೆರವೇರಿಸಿದ ಅಸ್ಥಿ ವಿಸರ್ಜನೆಯಲ್ಲಿ ಈ 24 ದೇಹಗಳಿಗೆ ಸ್ಥಾನ ಇತ್ತೋ ಇಲ್ಲವೋ ತಿಳಿಯದು. ತಲಾ 2ಲಕ್ಷ ರೂ. ಕೊಟ್ಟಾಗಿದೆಯಲ್ಲವೇ?

ಮೂರು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲೇ ಮತ್ತೊಂದು ಘಟನೆ ಸಂಭವಿಸಿದೆ. ಮೂಕನಹಳ್ಳಿ ಗ್ರಾಮದಲ್ಲಿ ಒಂದು ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ಕುಟುಂಬವೇ ಕೂಲಿ ಮಾಡುವ ಮೂಲಕವೇ ಜೀವನ ನಿರ್ವಹಣೆ ಮಾಡುತ್ತಿದ್ದು, ಕುಟುಂಬದ ಮುಖ್ಯಸ್ಥ ಮಹದೇವಪ್ಪ ಅವರಿಗೆ ಕೋವಿಡ್ ಕಾರಣದಿಂದ ಕೂಲಿ ಮಾಡಲೂ ಸಾಧ್ಯವಾಗದೆ, ಬಹುಶಃ ಬಡತನದ ಬೇಗೆಗೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ. ಕುಟುಂಬದ ನಾಲ್ವರೂ ಸದಸ್ಯರು ನೇಣಿಗೆ ಶರಣಾಗಿದ್ದಾರೆ. ಒಂದೂವರೆ ಎಕರೆ ಭೂಮಿಯಲ್ಲಿ ಬೇಸಾಯ ಮಾಡಿಕೊಂಡು, ಹಸು ಸಾಕಾಣಿಕೆ ಮೂಲಕ ಹಾಲು ಮಾರಾಟ ಮಾಡುತ್ತಾ ಬದುಕು ಸವೆಸುತ್ತಿದ್ದ ಈ ಕುಟುಂಬ ಬಹುಶಃ ಕೂಲಿಯೂ ಇಲ್ಲದೆ, ಕೃಷಿ ಆದಾಯವೂ ಇಲ್ಲದೆ ಆತ್ಮಹತ್ಯೆಯ ಹಾದಿ ಹಿಡಿದಿದೆ ಎನಿಸುತ್ತದೆ. ಮಹದೇವಪ್ಪನವರಿಗೆ ಕೊರೋನಾ ಸೋಂಕು ಉಂಟಾಗಿ ಗುಣಮುಖರಾಗಿದ್ದರೂ ಅವರ ಬಳಿ ಯಾರೂ ಹಾಲು ಕೊಳ್ಳುತ್ತಿರಲಿಲ್ಲ ಎನ್ನುವ ಸಂಶಯವೂ ಇದೆ.

ಈ ಸಾವಿಗೆ ಯಾರು ಹೊಣೆ? ನಾಲ್ಕು ಲಕ್ಷ ರೈತರ ಆತ್ಮಹತ್ಯೆಯನ್ನೇ ಗಂಭೀರವಾಗಿ ಪರಿಗಣಿಸದೆ, ಕ್ಷುಲ್ಲಕ ಎಂದು ಭಾವಿಸುವ ಆತ್ಮನಿರ್ಭರ ಭಾರತದಲ್ಲಿ ಮೂಕನಹಳ್ಳಿಯ ನಾಲ್ಕು ಅನಾಥ ಶವಗಳು ಗಣನೆಗೇ ಬರುವುದಿಲ್ಲ. ಏಕೆಂದರೆ ಬಡತನ, ಹಸಿವು, ದಾರಿದ್ರ ಮತ್ತು ಜೀವನೋಪಾಯದ ಸಂಕಷ್ಟಗಳಿಂದ ಸಾವಿನ ಹಾದಿ ಹಿಡಿಯುವ ಬಡ ಕುಟುಂಬಗಳ ಬಗ್ಗೆ ನಮ್ಮ ಆಳುವ ವರ್ಗಗಳು ಯಾವುದೇ ಸಂದರ್ಭದಲ್ಲೂ ಕಾಳಜಿ ವಹಿಸಿಲ್ಲ. ಇಂತಹ ಅನಾಥ ಶವಗಳು ಗಂಗೆಯಲ್ಲಿ ತೇಲದೆ ಇರಬಹುದು ಆದರೆ ಭಾರತದ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಲೇ ಇವೆ. ವಿದರ್ಭದ ಕಬ್ಬು ಬೆಳೆಗಾರನೋ, ಪಂಜಾಬಿನ ಗೋಧಿ ಬೆಳೆಯುವವನೋ, ಮೂಕನಹಳ್ಳಿಯ ಕೃಷಿ ಕೂಲಿಯೋ, ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ನಿಕೃಷ್ಟವಾಗಿಬಿಡುತ್ತಾರೆ.

ಹಾಗಾಗಿಯೇ ಈ ನಾಲ್ಕು ಸಾವುಗಳು ನಮ್ಮ ಜನಪ್ರತಿನಿಧಿಗಳಿಗೆ ಗಂಭೀರ ಪ್ರಕರಣ ಎನಿಸಿಯೇ ಇಲ್ಲ. ನಿತ್ಯ ಸಾವುಗಳಿಗೆ ದುಃಖಿಸುವವರೇ ಇರುವುದಿಲ್ಲ, ಕೊರೋನಾ ಸಂದರ್ಭದಲ್ಲಿ ಇಂತಹ ಅಸಹಜ ಸಾವುಗಳೂ ನಿತ್ಯಸಾವುಗಳೇ ಆಗಿಬಿಟ್ಟಿವೆ. ಈ ಘಟನೆಯ ಕುರಿತು ಮತ್ತೊಂದು ತನಿಖೆ ನಡೆಯುತ್ತದೆ. ಇನ್ನು ಕೆಲವು ದಿನ ಮೃತರ ಕುಟುಂಬದಲ್ಲಿ ಪರಿಹಾರ ಪಡೆಯಲೂ ಯಾರೂ ಉಳಿದಿಲ್ಲ ಓರ್ವ ಮಗಳು ಮದುವೆಯಾಗಿ ದೂರದಲ್ಲಿದ್ದಾರೆ. ಹಾಗಾಗಿ ನ್ಯಾಯಾಂಗದ ಬಾಗಿಲು ಬಡಿಯುವ ಕೈಗಳೂ ಬಹುಪಾಲು ಇಲ್ಲವಾಗಿವೆ. ಇವೂ ಸಹ ಅಸ್ತಿತ್ವ ಇಲ್ಲದ, ಅಸ್ಮಿತೆ ಇಲ್ಲದ, ಹಣೆಪಟ್ಟಿ ಇಲ್ಲದ ಅನಾಥ ಶವಗಳು. ಜನಪ್ರತಿನಿಧಿಗಳು ಮೌನ ವಹಿಸುತ್ತಾರೆ. ಶಾಸಕರು, ಸಂಸದರು ಸಂತಾಪದ ಕಂಬನಿಯಲ್ಲೇ ಕೈತೊಳೆದುಕೊಳ್ಳುತ್ತಾರೆ. ಮತ್ತೊಂದು ಬಡತನ, ಮತ್ತೊಂದು ದಾರಿದ್ರ್ತ, ಮತ್ತೊಂದು ಕುಟುಂಬದ ಸಾವು ಈ ನಿರೀಕ್ಷೆಯಲ್ಲಿ ನಾಗರಿಕ ಸಮಾಜ ಕೊರೋನಾ ನಡುವೆ ಬದುಕಲು ಕಲಿಯುತ್ತದೆ.

ಮತ್ತೊಂದು ಘಟನೆಯಲ್ಲಿ ರಾಜಧಾನಿಯ ಸಮೀಪದಲ್ಲೇ ಇರುವ ರಾಮನಗರ ತಾಲ್ಲೂಕಿನ ಐಜೂರು ಗ್ರಾಮದಲ್ಲಿ, ನಿರ್ಮಾಣ ಹಂತದ ಮ್ಯಾನ್‌ ಹೋಲ್‌ ಗೆ ಇಳಿದ ಮೂವರು ಪೌರ ಕಾರ್ಮಿಕರು ವಿಷಾನಿಲ ಸೇವಿಸಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೊಸ ಚರಂಡಿಗೆ ಹಾಕಲಾಗಿದ್ದ ಬ್ಲಾಕ್ ತೆಗೆಯಲು 15 ಅಡಿ ಆಳದಲ್ಲಿನ ಮ್ಯಾನ್‌ ಹೋಲ್ ಗೆ ಮೂವರೂ ಇಳಿದಿದ್ದರು ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಮ್ಯಾನ್ ಹೋಲ್ ನಲ್ಲಿ ಕಾರ್ಯನಿರ್ವಹಿಸುವವರ ಬಗ್ಗೆ ಮುನ್ನೆಚ್ಚರಿಕೆಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಇದ್ದುದೇ ದುರಂತಕ್ಕೆ ಕಾರಣವಾಗಿದೆ. ಮೂರು ಕುಟುಂಬಗಳು ಅನಾಥವಾಗಿವೆ. ನಿರ್ಮಲೀಕರಣ ಕಾರ್ಯಕರ್ತರಿಗೆ ಸೂಕ್ತ ಸುರಕ್ಷತೆಯ ಉಪಕರಣಗಳನ್ನು ಒದಗಿಸಬೇಕು ಎನ್ನುವ ನಿಯಮದ ಉಲ್ಲಂಘನೆ ಈ ಮೂವರು ಅಮಾಯಕರ ಸಾವಿಗೆ ಕಾರಣವಾಗಿದೆ.

 ಇಲ್ಲಿ ಗುತ್ತಿಗೆದಾರ, ಕಾಮಗಾರಿ ಕೈಗೊಂಡ ನಗರಸಭೆಯ ಆಡಳಿತ ವ್ಯವಸ್ಥೆ, ಕಾಮಗಾರಿಯ ಮೇಲ್ವಿಚಾರಣೆ ವಹಿಸುವ ನಿರ್ವಾಹಕ ಇಂಜಿನಿಯರ್ ಮತ್ತು ಕೊರೋನಾ ಸಂದರ್ಭದ ನಿರ್ಬಂಧಗಳ ನಡುವೆಯೂ ಮುನ್ನೆಚ್ಚರಿಕೆ ವಹಿಸದೆ ಇಂತಹ ಕಾಮಗಾರಿಗಳನ್ನು ನಡೆಸುವ ಅಧಿಕಾರ ವರ್ಗಗಳು ಶಿಕ್ಷಾರ್ಹವಾಗುತ್ತವೆ. ಇಲ್ಲಿಯೂ ಮತ್ತದೇ ಮರಣೋತ್ತರ ಪರೀಕ್ಷೆ, ತನಿಖೆ, ವಿಚಾರಣೆ ಮತ್ತು ಜನಪ್ರತಿನಿಧಿಗಳ ಒತ್ತಾಸೆಗೆ ಮಣಿದು ಹಣಕಾಸಿನ ಪರಿಹಾರ ಇಷ್ಟರಲ್ಲೇ ನ್ಯಾಯ ವ್ಯವಸ್ಥೆ ತಪ್ತಿಪಟ್ಟುಕೊಳ್ಳುತ್ತದೆ. ಮ್ಯಾನ್ ಹೋಲ್ ಗಳಲ್ಲಿ ಉಸಿರುಗಟ್ಟಿ ಸಾಯುವ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಇದ್ದರೂ ಈ ರೀತಿಯ ನಿರ್ಲಕ್ಷ್ಯವೂ ಸಹ ಮುಂದುವರೆಯುತ್ತಲೇ ಇದೆ. ಮೃತಪಟ್ಟ ಮೂವರು ಕೂಲಿ ಕಾರ್ಮಿಕರು ಮತ್ತೊಂದು ಅಸ್ಮಿತೆ ಇಲ್ಲದ, ಅಸ್ತಿತ್ವ ಇಲ್ಲದ ಅನಾಥ ಶವಗಳಾಗಿಬಿಡುತ್ತಾರೆ. ಪರಿಹಾರದ ಚೆಕ್ ನೀಡುವ ಮೂಲಕ ಜನಪ್ರತಿನಿಧಿಗಳು ಮತ್ತು ಸರ್ಕಾರ ನ್ಯಾಯ ವ್ಯವಸ್ಥೆಯ ಬಾಗಿಲಿಗೆ ಬೀಗ ಜಡಿಯುತ್ತದೆ.

ಹಂತಕ ವ್ಯವಸ್ಥೆಯ ಕ್ರೌರ್ಯ

ಈ ಮೂರೂ ಘಟನೆಗಳು ಮೇಲ್ನೋಟಕ್ಕೆ ಯಾವುದೋ ಮೂಲೆಗಳಲ್ಲಿ ಘಟಿಸಿದ ಪ್ರತ್ಯೇಕ ಘಟನೆಗಳಂತೆ ಕಾಣುವುದು ಸಹಜ. ಈ ರೀತಿಯ ಅಸಹಜ ಸಾವುಗಳು ರಾಜ್ಯದ ಅಥವಾ ದೇಶದ ಯಾವುದೇ ಮೂಲೆಯಲ್ಲಿ ಸಂಭವಿಸಿದರೂ ನಾಗರಿಕ ಸಮಾಜದಲ್ಲಿ ಒಂದು ಕ್ಷಣದ ಆಘಾತ ವ್ಯಕ್ತವಾಗುತ್ತದೆ. ಏಕೆ ಹೀಗಾಗುತ್ತಿದೆ ಎನ್ನುವ ಪ್ರಶ್ನೆ ಹಲವರಲ್ಲಾದರೂ ಮೂಡುತ್ತದೆ. ಛೆ ಹೀಗಾಗಬಾರದಿತ್ತು ಹೀಗಾಗಕೂಡದು ಎಂಬ ದೃಢ ನುಡಿಗಳೂ ಕೇಳಿಬರುತ್ತವೆ. ಈ ಎಲ್ಲ ಅಲ್ಪ ಸಾಂತ್ವನದ ಭಾವನೆಗಳು ಏನ್ಮಾಡೋಕಾಗುತ್ತೆ ಎನ್ನುವ ಆಡಳಿತ ವ್ಯವಸ್ಥೆಯ ಭಾವನೆಯ ನದಿಯಲ್ಲಿ ಬೆರೆತು ಇಲ್ಲವಾಗಿಬಿಡುತ್ತವೆ. ಏಕೆಂದರೆ ನಮ್ಮ ಪ್ರಭುತ್ವ, ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಈ ಅಸಹಜ ಸಾವುಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ.

ಈ ಮೂರೂ ಘಟನೆಗಳನ್ನು ಸಮಾನ ಎಳೆಯಲ್ಲಿ ಬಂಧಿಸಿ ನೋಡಿದಾಗ ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆ, ನಿರ್ದಯತೆ, ನಿರ್ಭಾವುಕತೆ ಮತ್ತು ನಿರ್ಲಕ್ಷ ಕಾಣುವುದು ಸುಲಭ. ಜೀವನ ಮತ್ತು ಜೀವನೋಪಾಯ ಎಂದರೆ ಕೇವಲ ಎರಡು ಹೊತ್ತಿನ ಕೂಳು ಮತ್ತು ಒಂದು ಸೂರು ಒದಗಿಸುವುದು ಮಾತ್ರ ಎಂದು ಭಾವಿಸುವ ಒಂದು ಮಾರುಕಟ್ಟೆ ವ್ಯವಸ್ಥೆಯಲ್ಲಿ ನಾವಿದ್ದೇವೆ. ಹಾಗಾಗಿ ಆಮ್ಲಜನಕ ಇಲ್ಲದೆ ಸತ್ತವರು, ಹಸಿವಿನಿಂದ ಸಾಯುವವರು, ಶ್ರಮದ ಬೆವರಿಗೆ ಬಲಿಯಾಗುವವರು ಈ ವ್ಯವಸ್ಥೆಯಲ್ಲಿ ಅಸ್ಮಿತೆ ಇಲ್ಲದವರಾಗಿಬಿಡುತ್ತಾರೆ. ಪ್ರತಿಯೊಬ್ಬ ಪ್ರಜೆಯ ಅನ್ನದ ಹಕ್ಕು, ಆರೋಗ್ಯದ ಹಕ್ಕು ಮತ್ತು ಜೀವನೋಪಾಯದ ಹಕ್ಕು ಭಾರತದ ಸಂವಿಧಾನ ನಮಗೆ ನೀಡಿರುವ ಅಮೂಲ್ಯ ಹಕ್ಕುಗಳು.ಈ ಮೂರರಿಂದ ವಂಚಿತರಾಗುವ ಕೋಟ್ಯಂತರ ಜನರ ನಡುವೆ ನಾವು ಸಂವಿಧಾನವನ್ನು ಗ್ರಾಂಥಿಕವಾಗಿ ಎದೆಗವುಚಿಕೊಂಡು ಸ್ತುತಿಸುತ್ತಾ ಕುಳಿತಿದ್ದೇವೆ.

ಹಾಗಾಗಿಯೇ ವ್ಯವಸ್ಥೆಯ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯದಿಂದಲೇ ನಡೆಯುವ ಇಂತಹ ಹತ್ಯೆಗಳು ನಮಗೆ ಸಹಜ ಸಾವುಗಳು ಎನಿಸಿಬಿಡುತ್ತವೆ. ಹಣಕಾಸಿನ ಪರಿಹಾರದಲ್ಲಿ ಕೊನೆಗೊಳ್ಳುವ ಕ್ರಿಯೆಗಳಾಗಿಬಿಡುತ್ತವೆ. ಅಸ್ಥಿ ವಿಸರ್ಜನೆಯ ಮೂಲಕ ಪವಿತ್ರ ನದಿ ನೀರಿನಲ್ಲಿ ತೊಳೆದುಹೋಗುವ ವಿದ್ಯಮಾನಗಳಾಗಿಬಿಡುತ್ತವೆ.ಈ ಅಸಹಜ ಸಾವುಗಳನ್ನು ಹೇಗೆ ತಡೆಗಟ್ಟಲು ಸಾಧ್ಯ? ಈ ಪ್ರಶ್ನೆ ಇಂದು ನಾಗರಿಕ ಸಮಾಜವನ್ನು ಕಾಡಬೇಕಿದೆ. ಜಡಗಟ್ಟಿದ ಆಳುವ ವರ್ಗಗಳಿಂದ ಉತ್ತರ ಪಡೆಯಲಾಗುವುದಿಲ್ಲ. ಸಂವಿಧಾನದಲ್ಲಿ ಉತ್ತರ ಕಂಡುಕೊಳ್ಳಬಹುದು. ನಾವು ಶೋಧಿಸಲು ಮುಂದಾಗುತ್ತಿಲ್ಲ. ಆಳುವವರಂತೆಯೇ ನಾಗರಿಕ ಸಮಾಜವೂ ಸಹ ಸಾವಿನೊಡನೆ ಬದುಕಲು ಕಲಿಯುತ್ತಿದೆ. ಬದುಕಲು ಕಲಿಯುವುದು ಎಂದರೆ ಜೀವಂತಿಕೆಯೊಡನೆ ಬದುಕುವುದು ಎಂದು ನಮಗೆ ನಾವೇ ಹೇಳಿಕೊಳ್ಳಬೇಕಿದೆ.

ಹಾಗಾದಲ್ಲಿ ಮಾತ್ರ ಈ ಹಂತಕ ಮಾರುಕಟ್ಟೆ ವ್ಯವಸ್ಥೆಯಿಂದ ವಿಮೋಚನೆ ಪಡೆಯಲು ಸಾಧ್ಯ. ಮನುಜ ಜೀವಗಳನ್ನೂ ಮಾರುಕಟ್ಟೆಯ ಸರಕುಗಳಂತೆ ಅಳೆದು ತೂಗಿ ವಿಲೇವಾರಿ ಮಾಡುವಂತಹ ಒಂದು ವ್ಯವಸ್ಥೆಯತ್ತ ಆತ್ಮನಿರ್ಭರ ಭಾರತ ದಾಪುಗಾಲು ಹಾಕುತ್ತಿದೆ. ಆಮ್ಲಜನಕ, ಲಸಿಕೆ ಮತ್ತು ಆಸ್ಪತ್ರೆ ಸೌಕರ್ಯಗಳ ಅವ್ಯವಸ್ಥೆ ಮತ್ತು ಅದನ್ನು ನಿರ್ವಹಿಸುತ್ತಿರುವ ರೀತಿಯೇ ಇದನ್ನು ಸೂಚಿಸುತ್ತದೆ. ಬಂಡವಾಳ, ಮಾರುಕಟ್ಟೆ ಮತ್ತು ಔದ್ಯಮಿಕ ಹಿತಾಸಕ್ತಿಯಿಂದಾಚೆಗೆ ಯೋಚಿಸುವ ವಿವೇಕವನ್ನೇ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆ ಇದನ್ನು ಸಮರ್ಥವಾಗಿ ಪೋಷಿಸುತ್ತದೆ. ಮುಕ್ತಿಯ ಮಾರ್ಗ ಭಾರತದ ಪ್ರಜೆಗಳಾದ ನಾವು ಎಂದು ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುವ ನಮ್ಮ ಕೈಯಲ್ಲಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ