ಅಲ್ಲಾಹನು ನೋಡುತ್ತಿದ್ದಾನೆ

0
188

-ಎಂ. ಸಾದುಲ್ಲ

ಸೋಶಿಯಲ್ ಮೀಡಿಯಾದಲ್ಲಿ ಒಂದು ವಾಕ್ಯ ಗಮನಸೆಳೆಯಿತು. ‘‘ಅಲ್ಲಾಹನು ನೋಡುತ್ತಿದ್ದಾನೆ ಎಂಬ ಒಂದೇ ಒಂದು ವಾಕ್ಯ ಸಾಕು-ಮನುಷ್ಯನ ಸಂಸ್ಕರಣೆಗೆ.’’ ಪವಿತ್ರ ರಮಝಾನ್ ತಿಂಗಳಿಗೆ ಈ ವಾಕ್ಯ ಅತ್ಯಂತ ಸೂಕ್ತವಾಗಿ ಅನ್ವಯವಾಗುತ್ತದೆ. ಏಕೆಂದರೆ ರಮಝಾನ್ ತಖ್ವ್ವಾದ ತಿಂಗಳಾಗಿದೆ. ಈ ತಿಂಗಳಲ್ಲಿ ಮನುಷ್ಯನು ಅಥವಾ ವಿಶ್ವಾಸಿಯು ಪ್ರತಿಕ್ಷಣವೂ ತನ್ನನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾನೆ. ಸಮಯ ಪಾಲನೆ, ಶಿಸ್ತು, ನಾಲಗೆಯ ನಿಯಂತ್ರಣ, ಆತ್ಮ ಸಂಯಮ, ನಮಾಝ್, ಉಪವಾಸ, ದಾನ-ಧರ್ಮ, ತರಾವೀಹ್, ತಹಜ್ಜುದ್- ಇತ್ಯಾದಿ ಎಲ್ಲ ವಿಷಯಗಳಲ್ಲೂ ಸೂಕ್ಷ್ಮವಾಗಿ ಅವಲೋಕಿಸುವ ಮೂಲಕ ತನ್ನಲ್ಲಿ ತಖ್ವಾದ ಗುಣವನ್ನು ಬೆಳೆಸಲು ಪ್ರಯತ್ನಿಸುತ್ತಾನೆ. ಆತ್ಮಸಂಸ್ಕರಣೆಯು ವ್ಯಕ್ತಿ ಸುಧಾರಣೆಯ ಪ್ರಬಲ ಅಸ್ತ್ರವಾಗಿದೆ.

ಅಲ್ಲಾಹನು ವಿಶ್ವಾಸಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾನೆ. ಒಂದು, ಮುತ್ತಕೀನ್. ಇನ್ನೊಂದು ಮುಹ್ಸಿನೀನ್-ಕಡ್ಡಾಯ ಕರ್ಮಗಳನ್ನು ಅದರ ನಿಯಮ-ನಿಬಂಧನೆಗಳೊಂದಿಗೆ ನಿರ್ವಹಿಸುವವರು ಮುತ್ತಕೀಗಳಾಗಿದ್ದಾರೆ. ನಿಷಿದ್ಧ ಕಾರ್ಯಗಳಿಂದ ಅವರು ದೂರವಿರುತ್ತಾರೆ. ಇದು ತಕ್ವಾದ ಪ್ರಥಮ ಮೆಟ್ಟಿಲಾಗಿದೆ.ಪ್ರವಾದಿ ಮುಹಮ್ಮದ್(ಸ) ಹೇಳಿದರು- ನಿಷಿದ್ಧ ಕಾರ್ಯಗಳಿಂದ ದೂರವಿರಿ. ವಿಧೇಯ ದಾಸರಾಗುವಿರಿ. ಮನಸ್ಸಿಗೆ ಸಮಾಧಾನವಿಲ್ಲದ ವಸ್ತುಗಳಿಂದ ದೂರವಿರುವುದು ತಕ್ವಾದ ಉನ್ನತ ಪದವಿಯಾಗಿದೆ.ಪ್ರವಾದಿ(ಸ) ಹೇಳಿದರು- ಮನಸ್ಸಿಗೆ ಚುಚ್ಚುವಂತಹ ವಿಷಯಗಳನ್ನು ತೊರೆಯುವ ತನಕ, ದಾಸನು ನೈಜ ತಕ್ವಾದ ತನಕ ತಲುಪಲಾರ. ಇನ್ನು ತಖ್ವ್ವಾದ ಅತ್ತ್ಯುನ್ನತ ಪದವಿಯೊಂದಿದೆ. ತಾನೆಲ್ಲಾದರೂ ಸ್ಪಷ್ಟವಾದ ನಿಷಿದ್ಧ ಕಾರ್ಯದಲ್ಲಿ ಬಿದ್ದು ಬಿಡುವೆನೋ ಎಂಬ ಭೀತಿಯಿಂದ ಮಾಡಬಹುದಾದ ಒಂದು ಕಾರ್ಯವನ್ನು ಮಾಡದೆ ಇರುವುದಾಗಿದೆ.ಪ್ರವಾದಿ(ಸ) ಹೇಳಿದರು- ದೋಷವಿಲ್ಲವೆಂದು ತೋರುವ ಒಂದು ಕಾರ್ಯವನ್ನು ಮಾಡಿಬಿಟ್ಟಿರೆ ತಾನೆಲ್ಲಾದರೂ ಪಾಪ ಕಾರ್ಯದಲ್ಲಿ ಬಿದ್ದು ಬಿಡುವೆನೋ ಎಂಬ ಭೀತಿಯಿಂದ ಅದನ್ನು ತೊರೆಯದಿರುವ ತನಕ ಒಬ್ಬ ದಾಸನು ನಿಜಾರ್ಥದಲ್ಲಿ ಮುತ್ತಕೀ ಆಗಲಾರ.

ಅಲ್ಲಾಹನ ವಿಧಿ-ನಿಷೇಧಗಳನ್ನು ಅದರ ಸರಿಯಾದ ರೂಪದಲ್ಲಿ, ಅದರ ನಿಯಮ ನಿರ್ದೇಶನಗಳ ಪ್ರಕಾರ ಪಾಲಿಸುವುದು ತಕ್ವಾದ ಗುಣವಾಗಿದೆ. ಇದರಲ್ಲಿ ಬಾಹ್ಯ ಸ್ವರೂಪ ಮಾತ್ರ ಗೋಚರಿಸುತ್ತದೆ. ಆದರೆ ಮನುಷ್ಯನ ಆಂತರಿಕ ಸ್ಥಿತಿಯು ಇದರಿಂದ ವ್ಯಕ್ತವಾಗುವುದಿಲ್ಲ. ಉದಾ: ಒಬ್ಬನು ನಮಾಝ್ ಮಾಡುವುದನ್ನು ಮತ್ತು ಅದರಲ್ಲಿ ದೀನ ಭಾವ ಹೊಂದಿರುವುದನ್ನು ನಾವು ಕಾಣಬಲ್ಲೆವು. ಆದರೆ ಅವನ ಗಮನವು ನಮಾಝ್‌ನಲ್ಲಿಯೇ ಕೇಂದ್ರೀಕತವಾಗಿದೆಯೇ, ಅವನ ಮನಸ್ಸಿನಲ್ಲಿ ಭಯ-ಭಕ್ತಿ ಇದೆಯೇ ಎಂಬುದನ್ನು ನಾವು ಗುರುತಿಸಲಾರೆವು. ಅದೇ ರೀತಿ ಒಬ್ಬನು ಉಪವಾಸವ್ರತ ಆಚರಿಸಿರುವುದು ನಮಗೆ ಕಾಣುತ್ತದೆ. ಅವನು ಏನೂ ತಿನ್ನುವುದಿಲ್ಲ, ಕುಡಿಯುವುದಿಲ್ಲವೆಂದು ತೋರುತ್ತದೆ. ಅವನ ಚಲನ-ವಲನಗಳಿಂದಲೂ ಹಾವಭಾವದಿಂದಲೂ ಅವನು ಉಪವಾಸಿಗನೆಂದು ನಾವು ಹೇಳಬಲ್ಲೆವು. ಆದರೆ ಅವನು ನಿಜವಾಗಿ ಉಪವಾಸದಿಂದಿದ್ದಾನೋ ಎಂದು ಹೇಳಲು ಸಾಧ್ಯವಿಲ್ಲ. ಮನೆಯಲ್ಲಿ ಏನಾದರೂ ತಿಂದರೆ ಕುಡಿದರೆ ಅದು ನಮಗೆ ಗೋಚರಿಸುವುದಿಲ್ಲ. ಆಂತರಿಕ ಸ್ಥಿತಿಯನ್ನು ಅವನು ಮತ್ತು ಅಲ್ಲಾಹನು ಮಾತ್ರ ತಿಳಿದಿರುವನು. ಆದ್ದರಿಂದಲೇ ಅಲ್ಲಾಹನು ಹೇಳಿರುವುದಾಗಿ ಪ್ರವಾದಿ(ಸ) ಹೇಳಿದರು- ಆದಮನ ಪುತ್ರ(ಮಾನವ)ನ ಎಲ್ಲ ಕರ್ಮಗಳೂ ಅವನಿಗಾಗಿಯೇ ಇರುತ್ತದೆ. ಆದರೆ ಉಪವಾಸ ಮಾತ್ರ ನನಗಾಗಿರುತ್ತದೆ. ಅದರ ಪ್ರತಿಫಲವನ್ನು ನಾನೇ ನೀಡುವೆನು.

ರಮಝಾನಿನಲ್ಲಿ ಎಲ್ಲ ಮುಸಲ್ಮಾನರೂ ಉಪವಾಸದಿಂದಿರುತ್ತಾರೆ. ಹೊಟ್ಟೆ ಹಸಿದಾಗ ಕೆಲವೊಮ್ಮೆ ಸಹನೆ ತಪ್ಪಿ ಬಿಡುತ್ತದೆ. ಆಗ ಮಾತು ಮಾತಿಗೆ ಕೆಲವರು ಜಗಳ ಕಾಯುತ್ತಾರೆ. ಆ ಸಂದರ್ಭದಲ್ಲಿ ಸಂಯಮ ಪಾಲಿಸುವುದು ಅಗತ್ಯ. ಈ ಸಂದರ್ಭದಲ್ಲಿ ಏನು ಮಾಡಬೇಕೆಂದು ಪ್ರವಾದಿ(ಸ) ಕಲಿಸಿದ್ದಾರೆ. ಜಗಳಕ್ಕೆ ಬರುವವನಿಗೆ ಸೌಮ್ಯವಾಗಿ ಸಹೋದರಾ? ನಾನು ಉಪವಾಸದಿಂದಿದ್ದೇನೆ. ಜಗಳ ಮಾಡುವವನಲ್ಲವೆಂದು ಹೇಳುವಂತೆ ಅವರು ಹೇಳಿದ್ದಾರೆ. ರಮಝಾನಿನಲ್ಲಿ ಪರದೂಷಣೆಯೂ ಭರ್ಜರಿಯಾಗಿ ನಡೆಯುತ್ತದೆ. ವಾಸ್ತವದಲ್ಲಿ ಪರದೂಷಣೆಯನ್ನು ಮತ ಸಹೋದರನ ಮಾಂಸ ತಿನ್ನುವುದಕ್ಕೆ ಹೋಲಿಸಲಾಗಿದೆ. ಅಲ್ಲಾಹನು ಎಲ್ಲ ಸಂದರ್ಭಗಳಲ್ಲೂ ನಮ್ಮನ್ನು ನೋಡುತ್ತಿದ್ದಾನೆ ಎಂಬುದನ್ನು ಸದಾ ನೆನಪಿನಲ್ಲಿಟ್ಟು ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬಹುದು. ಆದ್ದರಿಂದ ನಾಲಗೆಯ ನಿಯಂತ್ರಣ ಮುಖ್ಯ. ಅದಕ್ಕೆ ಮೌನ ಪಾಲಿಸುವುದೇ ಅತ್ತ್ಯುತ್ತಮ ಚಿಕಿತ್ಸೆ. ಈಸಾ(ಅ)ರ ಮಾತೆ ಮರ್ಯಮ್(ಅ)ರನ್ನು ಅವರ ಜನತೆ ಮೂದಲಿಸುತ್ತಿದ್ದಾಗ, ಮೌನ ಪಾಲಿಸುವಂತೆ ಅಲ್ಲಾಹನು ಆದೇಶಿಸುತ್ತಾನೆ. ನೀವು ಮಾನವರಲ್ಲಿ ಯಾರನ್ನಾದರೂ ಕಂಡರೆ ನಾನು ಕರುಣಾನಿಧಿ(ಅಲ್ಲಾಹನಿ)ಗಾಗಿ ಉಪವಾಸ ವ್ರತದ ಹರಕೆ ಹೊತ್ತಿರುವುದರಿಂದ ಇಂದು ಯಾರೊಡನೆಯೂ ಮಾತನಾಡಲಾರೆನೆಂದು ಹೇಳಿಬಿಡಿರಿ. (ಮರ್ಯಮ್- 26) ಮೌನ ಪಾಲಿಸುವುದೂ ಉಪವಾಸದ ಒಂದು ರೂಪವಾಗಿದೆಯೆಂದು ಇದು ಸೂಚಿಸುತ್ತದೆ.

ಸದಕಾ-ಝಕಾತ್‌ಗೆ ರಮಝಾನ್‌ನೊಂದಿಗೆ ಅವಿನಾಭಾವ ಸಂಬಂಧವಿದೆ. ಮುಸಲ್ಮಾನರು ಮನಬಿಚ್ಚಿ ದಾನ-ಧರ್ಮಗಳನ್ನು ಮಾಡುತ್ತಾರೆ. ಆತ್ಮಸಂಸ್ಕರಣೆಗೆ ದಾನ ಧರ್ಮ ಅತ್ಯುತ್ತ್ತಮ ಔಷಧಿಯಾಗಿದೆ. ಪವಿತ್ರ ಕುರ್‌ಆನ್ ಹೇಳುತ್ತದೆ- ಓ ಪೈಗಂಬರರೇ! ನೀವು ಅವರ ಸಂಪತ್ತುಗಳಿಂದ ದಾನ-ಧರ್ಮಗಳನ್ನು ಪಡೆದು ಅವರನ್ನು ಶುದ್ಧೀಕರಿಸಿರಿ. ಮತ್ತು ಅವರನ್ನು (ಸನ್ಮಾರ್ಗದಲ್ಲಿ) ಮುಂದುವರಿಸಿರಿ ಮತ್ತು ಅವರಿಗಾಗಿ ಪ್ರಾರ್ಥಿಸಿರಿ. (ಅತ್ತ್‌ಬ: 103) ಎಷ್ಟೇ ಬಡವರಾದರೂ ರಮಝಾನಿನಲ್ಲಿ ತಮ್ಮ ಕೈಲಾದಷ್ಟು ದಾನ ಮಾಡುತ್ತಾರೆ. ರಮಝಾನಿನಲ್ಲಿ ಮಾಡಿದ ಪುಣ್ಯ ಕಾರ್ಯಗಳಿಗೆ 70 ಪಟ್ಟು ಪ್ರತಿಫಲ ಸಿಗುತ್ತದೆ ಎಂಬ ವಿಶ್ವಾಸವೇ ಇದಕ್ಕೆ ಕಾರಣ. ಸಿರಿವಂತರೂ ತಮ್ಮ ಝಕಾತ್‌ಗಳನ್ನು ಈ ಪುಣ್ಯ ಮಾಸದಲ್ಲಿ ಕೊಡಲು ಗರಿಷ್ಠ ಪ್ರಯತ್ನಿಸುತ್ತಾರೆ. ಆದ್ದರಿಂದಲೇ ಝಕಾತ್ ಕೊಡಲು ಹೆಚ್ಚಿನ ಮುಸಲ್ಮಾನರು ರಮಝಾನ್ ತಿಂಗಳನ್ನೇ ಆಯ್ಕೆ ಮಾಡುತ್ತಾರೆ.

ಇನ್ನು ಆರಾಧನೆಗಳ ಕುರಿತು ಹೇಳುವುದಾದರೆ, ರಮಝಾನ್ ತಿಂಗಳಲ್ಲಿ ಮಸೀದಿಗಳು ಕಿಕ್ಕಿರಿದು ತುಂಬಿರುತ್ತದೆ. ಈ ಸಂದರ್ಭದಲ್ಲಿ ಮರ್ಹೂಮ್ ಎಸ್. ಅಬ್ದುಲ್ ಗಫ್ಫಾರ್ ಸುಳ್ಯ ಅವರ ಒಂದು ಕವನದ ಕೆಲವು ಸಾಲುಗಳು ನೆನಪಿಗೆ ಬರುತ್ತದೆ. ರಮಝಾನಿನ ವಾತಾವರಣವನ್ನು ಅವರು ಅದರಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.

ರಮಝಾನ್ ಚಂದಿರ ತೋರಿದನಂದೇ
ಮಸೀದಿ ತುಂಬಿತ್ತು
ಅಂಗಣದಿಂದಾ ಮಿಂಬರ್ ವರೆಗೂ
ಜನಸಾಗರವಿತ್ತು
ಭಕುತರ ಸೇನೆಯು ನುಗ್ಗುತ ಬರುತಿದೆ
ಕೂರಲು ಸ್ಥಳವಿಲ್ಲ
ಮಿಂಬರ್ ಬಳಿಯಲು ಹೌದಿನ ಬಳಿಯಲು
ನಮಾಝಿಗಳೆ ಎಲ್ಲ
ಕೂರುವುದೆಲ್ಲಿ, ನಿಲ್ಲುವುದೆಲ್ಲಿ
ಚಪ್ಪಲಿ ಇಡಲೆಲ್ಲಿ?

ಫರ್ಝ್ ನಮಾಝ್‌ನಲ್ಲಿ ಸ್ಥಳಾವಕಾಶ ನಷ್ಟವಾಗದಿರಲೆಂದು ಮುಸಲ್ಮಾನರು ಮೊದಲೇ ಬಂದು ಮಸೀದಿಯಲ್ಲಿ ಪವಡಿಸುತ್ತಾರೆ. ಕುರ್‌ಆನ್ ಪಾರಾಯಣ ಮಾಡುತ್ತಾರೆ. ದಿಕ್ರ್-ತಸ್ಬೀಹ್‌ಗಳಲ್ಲಿ ನಿರತರಾಗಿರುತ್ತಾರೆ. ದೀರ್ಘ ದುಆಗಳನ್ನು ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ರಮಝಾನಿನ ಪ್ರತಿಕ್ಷಣವನ್ನೂ ಪುಣ್ಯ ಸಂಪಾದನೆಯಲ್ಲಿ ಕಳೆಯಲು ಗರಿಷ್ಠ ಪ್ರಯತ್ನಿಸುತ್ತಾರೆ.

ಇನ್ನು ಸುನ್ನತ್-ನಫಿಲ್‌ಗಳ ಸ್ಥಿತಿಯಾದರೋ, ಎಲ್ಲ ನಮಾಝ್‌ಗಳನ್ನೂ ನಿರ್ವಹಿಸುತ್ತಾರೆ. ವಿಶೇಷವಾಗಿ ಕಿಯಾಮಲ್ಲೈಲ್(ರಾತ್ರಿಯ ನಮಾಝ್)ಗಳನ್ನು ಬಹಳ ಆಸ್ಥೆಯಿಂದ ನಿರ್ವಹಿಸುತ್ತಾರೆ. ತರಾವೀಹ್, ತಹಜ್ಜುದ್, ವಿತ್ರ್ ಯಾವುದನ್ನೂ ಬಿಡುವುದಿಲ್ಲ. ಅಂದರೆ ಒಬ್ಬ ಮುಸ್ಲಿಮನು ರಮಝಾನ್ ತಿಂಗಳ ಪ್ರತಿ ಕ್ಷಣದಲ್ಲೂ ಬಿಝಿಯಾಗಿರುತ್ತಾನೆ. ರಮಝಾನಿನ ಕೊನೆಯ ಹತ್ತನ್ನು ಎಲ್ಲಿಲ್ಲದ ಉತ್ಸಾಹದಿಂದ ಕಳೆಯುತ್ತಾರೆ. ಅದರಲ್ಲಿ ವಿಶೇಷವಾಗಿ ಇಆ್ತಿಕಾಫ್‌ನಲ್ಲಿ ಕಳೆಯುವವರೂ ಇದ್ದಾರೆ. ಲೈಲತುಲ್ ಕದ್ರ್‌ನ ರಾತ್ರಿ ಸ್ಪಷ್ಟವಾಗಿ ತಿಳಿಯದೆ ಇರುವುದರಿಂದ ಎಲ್ಲ 5 ರಾತ್ರಿಗಳನ್ನೂ ಜಾಗರಣೆಯೊಂದಿಗೆ ಕಳೆಯುತ್ತಾರೆ. ಪುಣ್ಯ ಗಳಿಸಲು ಸಿಕ್ಕಿದ ಅವಕಾಶವನ್ನು ಹಾಳು ಮಾಡದೆ ಕಾಯ್ದುಕೊಳ್ಳುತ್ತಾರೆ.

ರಮಝಾನಿನ ಪ್ರತಿಕ್ಷಣದಲ್ಲೂ ಅಲ್ಲಾಹನು ನಮ್ಮನ್ನು ನೋಡುತ್ತಿದ್ದಾನೆಂದು ಖಾತ್ರಿ ಪಡಿಸುವ ಒಬ್ಬ ಮುಸ್ಲಿಮನು ರಮಝಾನ್ ಕಳೆಯುವಾಗ ಅಪ್ಪಟ ಅಪರಂಜಿಯಾಗಿ ಹೊರಬಂದು ಶೋಭಿಸುತ್ತಾನೆ. ಅನಂತರ 11 ತಿಂಗಳೂ ಅವನು ಮುತ್ತಕೀ ಮತ್ತು ಮುಹ್ಸಿನ್ ಆಗಿಯೇ ಬದುಕುತ್ತಾನೆ. ಅಂತಹ ಪುಣ್ಯವಂತರ ಸಾಲಿನಲ್ಲಿ ಅಲ್ಲಾಹನು ನಮ್ಮೆಲ್ಲರನ್ನೂ ಸೇರಿಸಲಿ ಅಮೀನ್.

(ಲೇಖಕರು ಸನ್ಮಾರ್ಗ ವಾರಪತ್ರಿಕೆಯ ಪ್ರಕಾಶಕರಾಗಿದ್ದಾರೆ.)

***

 

LEAVE A REPLY

Please enter your comment!
Please enter your name here