ಅಯೋಧ್ಯೆ | ಸಾಧುವಿನಿಂದ ಅತ್ಯಾಚಾರ ಯತ್ನ | ಪ್ರತಿರೋಧಿಸಿದ ಬಾಲಕನ ಗುಪ್ತಾಂಗ ಛೇದನಕ್ಕೆ ಪ್ರಯತ್ನ

ಇಡೀ ದೇಶವೇ ತಲೆ ತಗ್ಗಿಸುವಂತಹ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಸಾಧುವೊಬ್ಬ ಆಶ್ರಮದಲ್ಲಿ ಬಾಲಕನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಪ್ರತಿರೋಧ ತೋರಿದ ಕಾರಣಕ್ಕಾಗಿ ಆತನ ಗುಪ್ತಾಂಗವನ್ನೇ ಛೇದಿಸಲು ವಿಫಲ ಯತ್ನ ನಡೆಸಿದ್ದಾನೆ.

ಅತ್ಯಾಚಾರಿ ಸಾಧುವನ್ನು ರಾಮ್ ಸೇವಕ್ ದಾಸ್ ಎಂದು ಗುರುತಿಸಲಾಗಿದ್ದು, ಬಾಲಕನ ಸ್ಥಳೀಯ ಸಂರಕ್ಷಕರು ನೀಡಿದ ದೂರಿನ ಆಧಾರದಲ್ಲಿ ಅತ್ಯಾಚಾರಿ ಸಾಧುವನ್ನು ಬಂಧಿಸಲಾಗಿದೆ. ಆಶ್ರಮಮದಲ್ಲಿ ಸಂಸ್ಕೃತ ವಿದ್ಯಾರ್ಥಿಯಾಗಿದ್ದ ಬಾಲಕನ ಮೇಲೆ ಸಾಧು ರಾಮ್ ಸೇವಕ್ ದಾಸ್ ಅತ್ಯಾಚಾರಕ್ಕೆ ಯತ್ನಿಸಿದ್ದು, ಆತನಿಂದ ತಪ್ಪಿಸಿಕೊಂಡ ಬಾಲಕ ತನ್ನ ಸ್ಥಳೀಯ ಸಂರಕ್ಷರ ಬಳಿ ಘಟನೆಯನ್ನು ವಿವರಿಸಿದ್ದಾನೆ. ತದನಂತರ ಪೋಷಕರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದಲ್ಲಿ ಅತ್ಯಾಚಾರಿಯನ್ನು ಬಂಧಿಸಲಾಗಿದೆ.

- Advertisement -

ಅತ್ಯಾಚಾರಿ ಸಾಧು, ಬಾಲಕನನ್ನು ಆಮಿಷವೊಡ್ಡಿ ಆಶ್ರಮಕ್ಕೆ ಕರೆಸಿಕೊಂಡಿದ್ದು, ನಂತರ ತನ್ನ ಅನೈಸರ್ಗಿಕ ಲೈಂಗಿಕ ಕೃತ್ಯ ನಡೆಸಲು ಮುಂದಾಗಿದ್ದಾನೆ. ಆದರೆ ಬಾಲಕ ಪ್ರತಿರೋಧ ತೋರಿದಾಗ ಕೋಪಗೊಂಡ ಸಾಧು ರಾಮ್ ಸೇವಕ್, ಹರಿತ ಆಯುಧದಿಂದ ಬಾಲಕನ ಗುಪ್ತಾಂಗವನ್ನೇ ಛೇದಿಸುವ ಯತ್ನ ನಡೆಸಿದ್ದಾನೆ. ಗಾಯಗೊಂಡ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ನಡೆದ ಘಟನೆಯನ್ನು ತನ್ನ ಸಂರಕ್ಷಕರ ಬಳಿ ವಿವರಿಸಿದ್ದಾನೆ.

ಅಯೋಧ್ಯೆಯಲ್ಲಿ ನೂರಾರು ಆಶ್ರಮಗಳಿದ್ದು, ಅಲ್ಲಿ ಬಾಲಕರಿಗೆ ಧಾರ್ಮಿಕ ಗ್ರಂಥಗಳ ಕುರಿತು ಕಲಿಸಲಾಗುತ್ತದೆ. ಅಂತಹಾ ಒಂದು ಆಶ್ರಮದಲ್ಲಿ ಕಲಿಯುತ್ತಿದ್ದ ಬಾಲಕ ಘಟನೆ ನಡೆದ ದಿನ ಸರಯೂ ನದಿಯಿಂದ ನೀರು ತರಲೆಂದು ಹೋಗಿದ್ದಾಗ ಅಲ್ಲಿ ಆ ಸಾಧುವನ್ನು ಭೇಟಿ ಮಾಡಿದ್ದಾನೆ. ಅತ್ಯಾಚಾರಿ ಸಾಧು ಅಲ್ಲಿಂದ ಬಾಲಕನನ್ನು ಆಮಿಷಗಳನ್ನೊಡ್ಡಿ ತನ್ನ ಆಶ್ರಮಕ್ಕೆ ಕರೆತಂದು ಹೀನ ಕೃತ್ಯಕ್ಕೆ ಮುಂದಾಗಿದ್ದಾನೆಂದು ವರದಿಯಾಗಿದೆ.

- Advertisement -