ಲಕ್ನೋ: ದಶಕಗಳ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದ ಕುರಿತ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಮಾತನಾಡದಂತೆ ಅಯೋಧ್ಯೆ ಜಿಲ್ಲಾಡಳಿತವು ಮುಸ್ಲಿಮರಿಗೆ ಬೆದರಿಕೆ ಹಾಕುತ್ತಿದೆ ಎಂದು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಆರೋಪಿಸಿದೆ.
‘‘ಅಯೋಧ್ಯೆಯಲ್ಲಿ(ಉತ್ತರಪ್ರದೇಶ) ಪೊಲೀಸ್ ಆಡಳಿತವು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಹೇಳಿಕೆಗಳನ್ನು ನೀಡದಂತೆ ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ’’ ಎಂದು ಎಐಎಂಪಿಎಲ್ಬಿ ಸದಸ್ಯ ಮತ್ತು ಯುಪಿ ಕೇಂದ್ರ ಸುನ್ನಿ ವಕ್ಫ್ ಮಂಡಳಿಯ ಅಡ್ವೊಕೇಟ್ ಝಫರ್ಯಾಬ್ ಜಿಲಾನಿ ಹೇಳಿದ್ದಾರೆ.
ಬಾಬರಿ ಮಸೀದಿ ವಿವಾದದ ದಾವೇದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿಯವರನ್ನು ತೀರ್ಪಿನ ವಿರುದ್ಧ ಪರಿಶೀಲನಾ ಅರ್ಜಿಗೆ ಹೋಗುವ ನಿರ್ಧಾರವನ್ನು ಯಾಕೆ ವಿರೋಧಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ಪ್ರಕರಣದ ಮೊದಲ ಮತ್ತು ಹಳೆಯ ದಾವೇದಾರರಾದ ಇಕ್ಬಾಲ್ ಅನ್ಸಾರಿ ಅಯೋಧ್ಯೆ ತೀರ್ಪನ್ನು ಪ್ರಶ್ನಿಸದಿರಲು ನಿರ್ಧರಿಸಿದ್ದಾರೆ. ಮತ್ತೋರ್ವ ದಾವೇದಾರ ಹಾಜಿ ಮೆಹಬೂಬ್ರವರು ಕೂಡಾ ಇದೇ ನಿರ್ಧಾರವನ್ನು ಕೈಗೊಂಡಿದ್ದಾರೆ. ಎಐಎಂಪಿಎಲ್ಬಿಗೆ ತನ್ನ ಪೂರ್ವ ನಿರ್ಧರಿತ ಸ್ಥಳದಲ್ಲಿ ಸಭೆ ನಡೆಸಲು ಲಕ್ನೋ ಜಿಲ್ಲಾಡಳಿತವು ಅನುಮತಿ ನೀಡಿಲ್ಲ ಎಂದು ಜೀಲಾನಿ ಆರೋಪಿಸಿದ್ದಾರೆ.
‘‘ಲಕ್ನೋ ಜಿಲ್ಲಾಡಳಿತವು ದಾರುಲ್-ಉಲೂಮ್ ನದ್ವತುಲ್-ಉಲಮಾ (ಪ್ರಸಿದ್ಧ ಇಸ್ಲಾಮಿಕ್ ಸೆಮಿನರಿ)ಯಲ್ಲಿ ಸಭೆ ನಡೆಸಲು ಅನುಮತಿಸಲಿಲ್ಲ. ಸೆಮಿನರಿಯಲ್ಲಿ ಸಭೆ ನಡೆಸಲು ಲಕ್ನೋ ಆಡಳಿತ ಅವಕಾಶ ನೀಡದಿದ್ದನ್ನು ನಾನು ಖಂಡಿಸುತ್ತೇನೆ. ಕ್ಯಾಂಪಸ್ನಲ್ಲಿ ಸಭೆಯನ್ನು ನಡೆಸಲು ಅವಕಾಶ ನೀಡಬಾರದೆಂದು ನದ್ವತುಲ್ ಉಲಮಾ ಕುಲಪತಿ ಮೌಲಾನಾ ರಬೆ ಹಸಾನಿ ನದ್ವಿಯವರಿಗೆ ಜಿಲ್ಲಾಡಳಿತ ಬೆದರಿಕೆ ಹಾಕಲಾಗಿದೆ’’ ಎಂದು ಜೀಲಾನಿ ಆರೋಪಿಸಿದ್ದಾರೆ.
ಮಂಡಳಿಯ ನಿರ್ಣಾಯಕ ಸಭೆ ಲಕ್ನೋದ ಓಲ್ಡ್ ಸಿಟಿ ಪ್ರದೇಶದ ಮುಮ್ತಾಝ್ ಪದವಿ ಕಾಲೇಜಿನಲ್ಲಿ ನಡೆಯಿತು. ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ನೀಡಿದ 5 ಎಕರೆ ಭೂಮಿಯನ್ನು ಸ್ವೀಕರಿಸದಿರಲು ಮಂಡಳಿ ತೀರ್ಮಾನಿಸಿದೆ.
‘‘ತೀರ್ಪಿನ 30 ದಿನಗಳೊಳಗೆ ನಾವು ಪರಿಶೀಲನಾ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದು ಮಂಡಳಿ(ಎಐಎಂಪಿಎಲ್ಬಿ) ನಿರ್ಧರಿಸಿದೆ’’ ಎಂದು ಉನ್ನತ ನ್ಯಾಯಾಲಯದ ಆದೇಶದಂತೆ ಪರ್ಯಾಯ ಸ್ಥಳವನ್ನು ತಿರಸ್ಕರಿಸುತ್ತಾ ಎಐಎಂಪಿಎಲ್ಬಿ ಸಂಚಾಲಕ ಡಾ.ಖಾಸಿಂ ರಸೂಲ್ ಇಲಿಯಾಸ್ ಹೇಳಿದ್ದಾರೆ.
ಮುಸ್ಲಿಮರ ಧಾರ್ಮಿಕ ಆಚರಣೆಗಳಿಗೆ ಮಸೀದಿಗಳು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.