ಅಮೆರಿಕ ಚುನಾವಣೆ | ರಿಪಬ್ಲಿಕನ್ ಸಂಸದನಿಂದ ಕಮಲಾ ಹ್ಯಾರಿಸ್ ಹೆಸರಿನ ವ್ಯಂಗ್ಯ | ಭಾರತೀಯ ಅಮೆರಿಕನ್ನರ ಆಕ್ರೋಶ
Prasthutha: October 19, 2020

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಣ ರಂಗೇರುತ್ತಿದೆ. ಆರೋಪ-ಪ್ರತ್ಯಾರೋಪಗಳ ನಡುವೆ, ಹಲವಾರು ವಿವಾದಗಳು ದೊಡ್ಡಮಟ್ಟದ ಚರ್ಚೆಗಳನ್ನು ಹುಟ್ಟುಹಾಕುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಪ್ರಚಾರ ಸಭೆಯಲ್ಲಿ ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ, ರಿಪಬ್ಲಿಕನ್ ಸಂಸದ ಡೇವಿಡ್ ಪೆರ್ಡ್ವೆ ಡೆಮಾಕ್ರಟಿಕ್ ಉಪ ಅಧ್ಯಕ್ಷೀಯ ಅಭ್ಯರ್ಥಿ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಹೆಸರಿನ ಬಗ್ಗೆ ವ್ಯಂಗ್ಯವಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
“ಖಾ-ಮ್ಹಾ-ಲ್ಹಾ? ಕ್ಹಾ-ಮಾಹ್-ಲ್ಹಾ? ಕಮಲಾ-ಮಲಾ-ಮಲಾ?! ಏನೋ, ನನಗೆ ಗೊತ್ತಾಗುತ್ತಿಲ್ಲ’’ ಎಂದು ಡೇವಿಡ್ ಕಮಲಾ ಹ್ಯಾರಿಸ್ ಹೆಸರಿನ ಬಗ್ಗೆ ವ್ಯಂಗ್ಯವಾಡಿದ್ದರು. ಸಭೆಯಲ್ಲಿ ನೆರೆದಿದ್ದವರು, ಡೇವಿಡ್ ವ್ಯಂಗ್ಯಕ್ಕೆ ನಕ್ಕಿದ್ದರು. ಇದು ಭಾರತೀಯ ಅಮೆರಿಕನ್ನರನ್ನು ಕೆರಳಿಸಿದ್ದು, ಹಲವಾರು ಮಂದಿ ತಮ್ಮ ಹೆಸರು ಮತ್ತು ಅದರ ಅರ್ಥವನ್ನು ತಿಳಿಸಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಮಲಾ ಹ್ಯಾರಿಸ್ ಭಾರತೀಯ ಮೂಲದ ತಾಯಿ ಮತ್ತು ಆಫ್ರಿಕಾ ಮೂಲದ ತಂದೆಯ ಹಿನ್ನೆಲೆಯುಳ್ಳವರು. ದಕ್ಷಿಣ ಭಾರತದ ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ತನ್ನ ಮೂಲದ ಬಗ್ಗೆಯೂ ಹಲವು ಬಾರಿ ಹೆಮ್ಮೆಯಿಂದ ಮಾತನಾಡಿದ್ದಾರೆ. ರಿಪಬ್ಲಿಕನ್ ಸಂಸದನ ಈ ಮಾತನ್ನು ದಕ್ಷಿಣ ಏಷ್ಯಾ ಮೂಲದ ಅಮೆರಿಕನ್ನರ ಬೆಂಬಲ ಪಡೆಯಲು ಡೆಮಾಕ್ರಟಿಕ್ ಅಭ್ಯರ್ಥಿಗಳ ಪರ ಪ್ರಚಾರಕರು ಚೆನ್ನಾಗಿ ಬಳಸಿಕೊಂಡಿದ್ದಾರೆ.
