ಅಮೆರಿಕ | ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ನೇಮಕ

Prasthutha|

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಸೆನೆಟರ್, ಭಾತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ನೇಮಕ ಮಾಡಲಾಗಿದೆ.

“ದೇಶದ ಅತ್ಯುತ್ತಮ ಸಾರ್ವಜನಿಕ ಸೇವಕರಲ್ಲಿ ಒಬ್ಬರಾಗಿರುವ, ನಿರ್ಭೀತ ಹೋರಾಟಗಾರ್ತಿ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇನೆ ಎಂದು ಘೋಷಿಸುವುದು ನನಗೆ ಗೌರವದ ವಿಚಾರವಾಗಿದೆ’’ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಟ್ವೀಟ್ ಮಾಡಿದ್ದಾರೆ.  

- Advertisement -

ಈ ಪ್ರಚಾರ ಅಭಿಯಾನದಲ್ಲಿ ಹ್ಯಾರಿಸ್ ಅವರು ನನ್ನ ಸಹವರ್ತಿಯಾಗಿರುವುದು ನನಗೆ ಹೆಮ್ಮೆಯ ವಿಚಾರ ಎಂದೂ ಅವರು ಹೇಳಿದ್ದಾರೆ. ಹ್ಯಾರಿಸ್ ಅವರನ್ನು ಬಿಡೆನ್ ಈ ಹಿಂದೆಯೂ ಸಾಕಷ್ಟು ಬಾರಿ ಪ್ರಶಂಸಿಸಿದ್ದರು.

ಹ್ಯಾಡೆನ್ ಅವರಿಂದ ತಮ್ಮ ನಾಮನಿರ್ದೇಶನವಾದ ಬಳಿಕ ಕಮಲಾ ಹರ್ಷ ವ್ಯಕ್ತಪಡಿಸಿದ್ದಾರೆ. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಬಿಡೆನ್ ಅವರು ನಾಮ ನಿರ್ದೇಶನ ಮಾಡಿರುವುದು ನನಗೆ ಸಂದ ಗೌರವ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಬಿಡೆನ್ ವಿರೋಧಿಯಾಗಿದ್ದ ಕಮಲಾ, ಚುನಾವಣಾ ಪ್ರಚಾರ ಆರಂಭವಾದ ಬಳಿಕ ವಿಶ್ವಾಸಾರ್ಹ ವ್ಯಕ್ತಿ ಎನಿಸಿದರು. ಅವರೊಂದಿಗೆ ಆನ್ ಲೈನ್ ನಿಧಿ ಸಂಗ್ರಹ ಕಾರ್ಯದಲ್ಲೂ ಅವರು ಪಾಲ್ಗೊಂಡಿದ್ದರು.

ಭಾರತೀಯ ಮೂಲ : ಕಮಲಾ ಹ್ಯಾರಿಸ್ ಅವರು ಅಮೆರಿಕ ಉಪಾಧ್ಯಕ್ಷ ಚುನಾವಣೆಗೆ ಅಭ್ಯರ್ಥಿಯಾಗುತ್ತಿರುವ ಪ್ರಥಮ ಏಷ್ಯನ್ ಅಮೆರಿಕನ್ ಮತ್ತು ಆಫ್ರಿಕನ್ ಅಮೆರಿಕನ್ ಮಹಿಳೆ. ಕಮಲಾ ಅವರ ಹೆತ್ತವರು ಭಾರತ ಮತ್ತು ಜಮೈಕಾ ಮೂಲದವರು. ಸೆನೆಟರ್ ಆಗಿ ಆಯ್ಕೆಯಾದ ದಕ್ಷಿಣ ಏಷ್ಯಾ ಮೂಲದ ಪ್ರಥಮ ಮಹಿಳೆ ಕೂಡ ಅವರಾಗಿದ್ದಾರೆ.

ಕಮಲಾ ದೇವಿ ಹ್ಯಾರಿಸ್ 1964, ಅ.20ರಂದು ಕ್ಯಾಲಿಫೋರ್ನಿಯಾದ ಓಕ್ಲಾಂಡ್ ನಲ್ಲಿ ಜನಿಸಿದರು. ಅವರ ತಾಯಿ ಭಾರತದ ತಮಿಳುನಾಡು ಮೂಲದವರು. ಖ್ಯಾತ ಸ್ಥನ ಕ್ಯಾನ್ಸರ್ ವಿಜ್ಞಾನಿಯಾಗಿರುವ ಅವರ ತಾಯಿ ಶ್ಯಾಮಲಾ ಗೋಪಾಲನ್ 1960ರಲ್ಲಿ ಯುಸಿ ಬರ್ಕ್ಲಿಯಲ್ಲಿ ಡಾಕ್ಟರೇಟ್ ಶಿಕ್ಷಣ ಪಡೆಯುವುದಕ್ಕಾಗಿ ವಲಸೆ ಬಂದಿದ್ದರು. ಅವರ ತಂದೆ ಡೊನಾಲ್ಡ್ ಹ್ಯಾರಿಸ್ ಅರ್ಥಶಾಸ್ತ್ರ ಪ್ರೊಫೇಸರ್. ಅರ್ಥಶಾಸ್ತ್ರದ ಪದವಿ ಅಧ್ಯಯನಕ್ಕಾಗಿ ಡೊನಾಲ್ಡ್ ಹ್ಯಾರಿಸ್ 1961ರಲ್ಲಿ ಯುಸಿ ಬರ್ಕ್ಲಿಗೆ ಆಗಮಿಸಿದ್ದರು. ಕಮಲಾ ಅವರ ಬಾಲ್ಯ ಹಾಗೂ ಶಿಕ್ಷಣ ಎಲ್ಲ ಅಮೆರಿಕದಲ್ಲೇ ನಡೆದಿದೆ. 

- Advertisement -