ಅನ್ಯಾಯದ ತೀರ್ಪು;  ರಾಜಕೀಯ ಪ್ರೇರಿತ ತೀರ್ಪು

0
34

ಇ.ಎಂ. ಅಬ್ದುರ್ರಹ್ಮಾನ್

ನವಂಬರ್ 9, 1992 ನ್ಯಾಯಾಲಯದ ಆವರಣದಲ್ಲಿ, ಶತಮಾನದಷ್ಟು ಹಳೆಯ ಸುದೀರ್ಘ ಜಗ್ಗಾಟದ ಬಳಿಕ ಅಯೋಧ್ಯೆಯ ವಿವಾದಿತ ಆರಾಧನಾಲಯದ ಕುರಿತಾದ ತೀರ್ಪನ್ನು ಅಂತಿಮವಾಗಿ ನ್ಯಾಯಪೀಠ ನೀಡಲಿತ್ತು.

ರಾಮಮಂದಿರಕ್ಕೆ ಶಿಲಾನ್ಯಾಸವು ಮೂರು ವರ್ಷಗಳ ಹಿಂದೆಯೇ ಮಸೀದಿಯ ಸಮೀಪದ ಪ್ರದೇಶದಲ್ಲೆ ನಡೆದಿತ್ತು. ಬಾಬರಿ ಮಸ್ಜಿದ್ ಧ್ವಂಸಗೊಳಿಸಿ ಅಲ್ಲಿ ಶಾಶ್ವತ ಮಂದಿರವನ್ನು ಕಟ್ಟುವೆವೆಂಬ ಘೋಷಣೆ, ಬೆದರಿಕೆಗಳಿಂದ  ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಎಲ್ಲರ ಕಣ್ಣುಗಳು ನ್ಯಾಯಾಲಯದ ಮೇಲಿತ್ತು. ನ್ಯಾಯಾಲಯದ ತೀರ್ಪು ಏನಾಗಿರಬಹುದು? ಅದರ ಒಡೆತನ ಯಾರಿಗೆ ಲಭಿಸಬಹುದು?  ಮಸ್ಜಿದ್ ಮುಸ್ಲಿಮರಿಗೆ ಮರಳಿ ಸಿಗಬಹುದೆ? ಅಲ್ಲಿ ಮಂದಿರ ನಿರ್ಮಾಣಕ್ಕೆ ನ್ಯಾಯಾಲಯವೇ ವ್ಯವಸ್ಥೆ ಮಾಡಬಹುದೇ?

ಈ ವಿವರಣೆಯಲ್ಲಿ ಘಟನೆಯ ವರ್ಷ ಬಿಟ್ಟರೆ ಯಾವುದೂ ಕಾಲ್ಪನಿಕವಲ್ಲ. ಎಲ್ಲವೂ ವಾಸ್ತವವಾಗಿದೆ. 27 ವರ್ಷಗಳ ಬಳಿಕ ಮತ್ತೊಂದು ನವಂಬರ್ 9ರಂದು ಸುಪ್ರಿಂ ಕೋರ್ಟ್‌ನಿಂದ ಬಾಬರಿ ಮಸ್ಜಿದ್‌ಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬಂದಿದೆ. ಇದರ ಮಧ್ಯೆ 1992ರ ಡಿಸೆಂಬರ್ 6ರಂದು ಆರೆಸ್ಸೆಸ್, ವಿಎಚ್‌ಪಿ, ಬಿಜೆಪಿಯ ಉನ್ನತ ನಾಯಕರ ನೇತೃತ್ವದಲ್ಲಿ ಹಿಂದುತ್ವ  ಉದ್ರಿಕ್ತ ಗುಂಪಿನ ದಾಳಿಯ ಮೂಲಕ ಬಾಬರಿ ಮಸ್ಜಿದ್‌ಅನ್ನು ಧ್ವಂಸಗೊಳಿಸಲಾಯಿತು. ಇದರಿಂದಾಗಿ ಇದೀಗ ತೀರ್ಪು ಪ್ರಕಟಿಸಿದ ಪಂಚ ಸದಸ್ಯ ಪೀಠಕ್ಕೆ ಒಂದು ದೊಡ್ಡ ಅಡ್ಡಿ ನಿವಾರಣೆಯಾದಂತಾಗಿತ್ತು. ಆದರೆ ಈಗಿನ ಮುಖ್ಯ ಪ್ರಶ್ನೆಯೂ ಅದೇ ಆಗಿದೆ.   ಬಾಬರಿ ಮಸ್ಜಿದ್ ನೆಲದಲ್ಲಿ ರಾಮಮಂದಿರ ನಿರ್ಮಿಸಲು ವ್ಯವಸ್ಥೆಯನ್ನು ಒದಗಿಸಿದ ನ್ಯಾಯಾಲಯದ ತೀರ್ಪು, ಒಂದು ವೇಳೆ ಮಸ್ಜಿದ್ ಕಟ್ಟಡ ಧ್ವಂಸಗೊಂಡಿರದಿದ್ದಲ್ಲಿ ಸುಪ್ರೀಂ ಕೋರ್ಟು ಈ ಕೆಲಸವನ್ನು ನಿರ್ವಹಿಸುತ್ತಿತ್ತೆ?

 ತೀರ್ಪು ವಿಮರ್ಶೆಗೊಳಪಡುತ್ತಿದೆ 

ಅನಿರೀಕ್ಷಿತವಾದ ಅಂತಿಮ ತೀರ್ಪು ಸೃಷ್ಟಿಸಿದ ಆಘಾತ ಮತ್ತು ಭೀಕರ ಮೌನದ ಬಳಿಕ ತೀರ್ಪಿನ ವಿವರಣೆ ದೊರಕಿದ ತಕ್ಷಣ ವಿವಿಧೆಡೆಯಿಂದ ಅದರ ಅವಲೋಕನ ಹೊರ ಬರತೊಡಗಿದೆ. ವಿವಿಧ ಮಾರ್ಗಗಳ ಮೂಲಕ ಸಂಘಪರಿವಾರ, ಅವರ ಸರಕಾರವು ತಮ್ಮ ಅಧೀನದಲ್ಲಿರಿಸಿದ ಮಾಧ್ಯಮಗಳ ಮೂಲಕ ನಿರ್ಮಿಸಿದ ಭೀತಿಯ ಗೋಡೆಯನ್ನು ಕೆಡವಿ ಸತ್ಯಸಂಧವಾದ ಅವಲೋಕನಗಳು ಇದೀಗ ನಿರಂತರವಾಗಿ ಬರತೊಡಗಿದೆ. ಅಸಾಧಾರಣ ಮೇಲ್ಮೆಯ ಒಡೆಯರಾದ ಹಿಂದುತ್ವ ಶಕ್ತಿಗಳು ಶಾಂತಿ ಮತ್ತು ಕಾನೂನು ಪಾಲನೆಯ ಪಾರಿವಾಳಗಳಾಗಿ ವಿಜೃಂಭಿಸುವ ತೀರ್ಪಿಗೆ ಮೊದಲೆ ಮುಸ್ಲಿಮರನ್ನು ತಮ್ಮ ಕಡೆಗೆ ಸೆಳೆಯುವ ಪ್ರಯತ್ನಗಳು ನಡೆದಿದ್ದವು. ಆದರೆ ಮೊದಲ ಪ್ರತಿಕ್ರಿಯೆಯಾಗಿ ತೀರ್ಪನ್ನು ಸ್ವಾಗತಿಸಿದ ಕೆಲ ಮುಸ್ಲಿಮ್ ನಾಯಕರು ಸೇರಿದಂತೆ ಹಲವಾರು ರಾಜಕೀಯ ವಿಮರ್ಶಕರು, ಕಾನೂನು ತಜ್ಞರು, ಮಾನವ ಹಕ್ಕು ಕಾರ್ಯಕರ್ತರು, ಕೆಲವು ಮಾಧ್ಯಮಗಳು ನ್ಯಾಯಾಲಯದ ತೀರ್ಪಿನ ಮೂಲಕವಾದ ನ್ಯಾಯ ನಿರಾಕರಣೆಯ ವೈರುಧ್ಯವನ್ನು ಎತ್ತಿ ತೋರಿಸಿದರು. ಸುಪ್ರೀಂ ಕೋರ್ಟಿನ ನಿವೃತ ನ್ಯಾಯಾಧೀಶರುಗಳಾದ ಜಸ್ಟಿಸ್ ಗಂಗೂಲಿ, ಜಸ್ಟಿಸ್ ಖಡ್ಜು ತೀರ್ಪನ್ನು ತೀಕ್ಷ್ಣ ರೀತಿಯಲ್ಲಿ ವಿಮರ್ಶಿಸಿದರು. ಅಂತಾರಾಷ್ಟ್ರೀಯ ಮಾಧ್ಯಮಗಳು ಇಂಡಿಯಾದ  ನ್ಯಾಯಾಧೀಶರ ಪಕ್ಷಪಾತ ಮತ್ತು ನ್ಯಾಯದ ಅಧಃಪತನದ ಕುರಿತಂತೆ ಆತಂಕ ವ್ಯಕ್ತಪಡಿಸಿದವು.

ಪರಮೋನ್ನತ ನ್ಯಾಯಾಲಯ ಜನರ ಅಂತಿಮ ಆಶ್ರಯವಾಗಿದೆ. ಪ್ರಜೆಗಳ, ಸಂಘಟನೆಗಳ ಮತ್ತು ಸರಕಾರಗಳ ತಪ್ಪುಗಳನ್ನು ತಿದ್ದಿ ನ್ಯಾಯವನ್ನು ಜಾರಿಗೊಳಿಸುವ ಹೊಣೆಯನ್ನು ಸುಪ್ರೀಂ ಕೋರ್ಟಿಗೆ  ಸಂವಿಧಾನ ನೀಡಿದೆ. ಅದು ಪ್ರಜಾಪ್ರಭುತ್ವದ ಮೂಲ ಸ್ಥಂಭವಾಗಿದೆ. ಆದುದರಿಂದ ಅಲ್ಲಿ ಧರ್ಮ, ರಾಜಕೀಯ ಬೆರೆಸದ ಪವಿತ್ರವಾದ ನ್ಯಾಯದ ತೀರ್ಪಷ್ಟೇ ಬರಬೇಕು. ಅದೇ ವೇಳೆ ಬಾಬರಿಗೆ ಸಂಬಂಧಿಸಿದ ತೀರ್ಪನ್ನು ಅನ್ಯಾಯದ ತೀರ್ಪು ಎಂದೇ ಕರೆಯಬೇಕಾಗುತ್ತದೆ.

 ಅನ್ಯಾಯಗಳಿಗೆ ನೆಲೆ ಒದಗಿಸಿದ ತೀರ್ಪು

ಶತಮಾನದಷ್ಟು ಹಳೆಯ ಧಾರ್ಮಿಕ ವಿವಾದಕ್ಕೆ ಈ ತೀರ್ಪಿನಿಂದ ಪರಿಹಾರ ದೊರಕಿತೆಂದು ಹೇಳಿ ಕೆಲ ಜನರು ಸಮಾಧಾನಗೊಂಡರು. ವಾಸ್ತವದಲ್ಲಿ ಹಿಂದೂಗಳ ಒಂದು ವಿಭಾಗ ಜನರ ಸಾವಿರಾರು ವರ್ಷಗಳ ನಂಬಿಕೆ ಮತ್ತು ಐತಿಹ್ಯಗಳಿಗೆ ಮಾತ್ರ ಸಮಾಧಾನವಾಗಿರುವುದು. ಇಂತಹ ಜನರನ್ನು ಕೆರಳಿಸಿ ಧರ್ಮವನ್ನು ರಾಜಕೀಯ ಅಸ್ತ್ರವಾಗಿಸಿ ಅಧಿಕಾರವನ್ನು ಪಡೆದವರಿಗೆ ನಿರೀಕ್ಷೆಗಿಂತ ಹೆಚ್ಚಿನ ಸಮಾಧಾನವನ್ನು ನ್ಯಾಯಾಲಯ ಒದಗಿಸಿತು. ವಿವಾದಿತ ಭೂಮಿಯ ಒಡೆತನ ಯಾರಿಗೆ ಎಂಬ ಒಂದೇ ವಿಷಯದಲ್ಲಿ ವಾದಿಗಳು ತೀರ್ಪನ್ನು ಬಯಸಿದ್ದರು. ಆದರೆ, ಸುಪ್ರಿಂಕೋರ್ಟು ಒಂದು ಹೆಜ್ಜೆ ಮುಂದಿಟ್ಟು ಬಾಬರಿ ಮಸ್ಜಿದ್ ಧ್ವಂಸಗೊಂಡ ಜಾಗದಲ್ಲಿ ರಾಮಮಂದಿರ ನಿರ್ಮಿಸಲು ಟ್ರಸ್ಟ್ ಮಾಡಲು ನಿಗದಿತ ಸಮಯವನ್ನೂ ನೀಡಿತು.

ಅಯೋಧ್ಯೆ ವಿವಾದ ತೀರ್ಪಿನ ಕುರಿತಾದ ಅತ್ಯಂತ ಮುಖ್ಯ ವಿಮರ್ಶೆ ಅದರ ವೈರುಧ್ಯಕ್ಕೆ ಸಂಬಂಧಿಸಿದ್ದಾಗಿದೆ. 1528ರಲ್ಲಿ ಬಾಬರಿ ಮಸ್ಜಿದ್ ನಿರ್ಮಾಣವಾಗುತ್ತದೆ. 1857ರ ವರೆಗೆ ಅಲ್ಲಿ ಆರಾಧನೆ ನಡೆಸಿರುವುದಕ್ಕೆ ಯಾವುದೇ ಪುರಾವೆ ಇಲ್ಲದಿದ್ದರೂ, ಅದರ ಬಳಿಕ 1949ರ ವರೆಗೆ 2.77 ಎಕರೆ ಸ್ಥಳದಲ್ಲಿ ಮೂರು ಗುಮ್ಮಟಗಳ ಕೆಳಗೆ ಮುಸ್ಲಿಮರು ಆರಾಧನೆ ನಡೆಸಿರುವುದಕ್ಕೆ ದಾಖಲೆಯಿದೆ. ಹೊರಗೆ ಹಿಂದೂಗಳು ಪೂಜೆ ನಡೆಸಿರುವುದಕ್ಕೂ ಪುರಾವೆಗಳಿವೆ. 1949ರಲ್ಲಿ ಮಸ್ಜಿದ್‌ನೊಳಗೆ ಅತಿಕ್ರಮಿಸಿ ರಾಮನ ವಿಗ್ರಹಗಳನ್ನು ಸ್ಥಾಪಿಸಿರುವುದು ಅನ್ಯಾಯ ಮತ್ತು ಕಾನೂನು ಉಲ್ಲಂಘನೆಯಾಗಿದೆ. ಆ ಬಳಿಕ 1992ರಲ್ಲಿ ಬಾಬರಿ ಮಸ್ಜಿದ್ ಧ್ವಂಸಗೊಳಿಸಿರುವುದು ತಪ್ಪು. ಮಸ್ಜಿದ್‌ನ ಜಾಗದಲ್ಲಿ ಹಿಂದೆ ದೇವಾಲಯವಿತ್ತು ಎಂಬುದಕ್ಕೆ ಆರ್ಕಿಯೋಲಜಿಕಲ್ ಪುರಾವೆಗಳಿವೆ. ಆದರೆ ಬಾಬರಿ ಮಸ್ಜಿದ್ ನಿರ್ಮಿಸಿರುವುದು ರಾಮಮಂದಿರ ಧ್ವಂಸಗೊಳಿಸಿ ಎಂಬುದು ಆಧಾರರಹಿತ ವಾದವಾಗಿದೆ.

 ಪುರಾವೆಗಳನ್ನು ನಿರಾಕರಿಸಿದ ನಂಬಿಕೆಗಳು

ವಿವಾದಿತ ಭೂಮಿ ಶ್ರೀರಾಮನ ಜನ್ಮ ಸ್ಥಳವೆಂದು ಹಿಂದೂಗಳ ನಂಬಿಕೆ ಎಂಬುದನ್ನು ನ್ಯಾಯಾಲಯ ಕಂಡುಕೊಂಡಿದೆ. ನಾವು ಪುರಾವೆಗಳ ಆಧಾರದಲ್ಲಿ ಮಾತ್ರ ತೀರ್ಪು ನೀಡುತ್ತೇವೆಂದು ಪುನರಾವರ್ತಿಸಿ ನ್ಯಾಯಾಲಯ ತಿಳಿಸಿದೆ. ಆದರೆ ತೀರ್ಪಿನಲ್ಲಿ ಮೇಲೆ ತಿಳಿಸಿದ ಎಲ್ಲಾ ಪುರಾವೆಗಳನ್ನು ನಿರಾಕರಿಸಿ ಹಿಂದೂಗಳ ನಂಬಿಕೆ ಮತ್ತು ಐತಿಹ್ಯಗಳನ್ನು ಪರಿಗಣಿಸಿತು. ಇದರಿಂದಾಗಿ ಬಾಬರಿ ತೀರ್ಪು ಎತ್ತುವ ಮುಖ್ಯ ಪ್ರಶ್ನೆ ತೀರ್ಪು ಪುರಾವೆಗಳ ಆಧಾರದಲ್ಲಿ ನಡೆದಿದೆಯೇ ಅಥವಾ ನಂಬಿಕೆಯ ಆಧಾರದಲ್ಲಿ ನಡೆದಿದೆಯೇ? ಒಂದು ವಿವಾದಿತ ಭೂಮಿಯ ಒಡೆತನ ಹಕ್ಕು ದಾವೆಯಲ್ಲಿ ಹಿಂದೂಗಳ ನಂಬಿಕೆಗೆ ಪುರಾವೆಗಳಿಗಿಂತ ಮೇಲಿನ ಸ್ಥಾನವಿದೆ ಎಂಬ ಸಂದೇಶ ಈ ತೀರ್ಪು ನೀಡುವುದಿಲ್ಲವೇ? ಹಿಂದುತ್ವ ಬೆದರಿಕೆಯಿರುವ ಇತರ ಆರಾಧನಾ ಕೇಂದ್ರಗಳಿಗೂ ಇದೇ ಮಾನದಂಡ ಸ್ವೀಕರಿಸುವ ಸಾಧ್ಯತೆಯಿಲ್ಲವೇ?

ಮಸ್ಜಿದ್‌ನ ವಿಷಯದಲ್ಲಿ ಸಂಪೂರ್ಣ ಮೌನ

ಅಲಹಾಬಾದ್ ಹೈಕೋರ್ಟು ವಿವಾದಿತ ಭೂಮಿಯನ್ನು ವಾದಿಗಳಿಗೆ ಹಂಚಿದಾಗ ಇದರ ವಿರುದ್ಧ  ಆ ಮೂರೂ ವಿಭಾಗಗಳು ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದವು. ಇದೀಗ ವಿವಾದ ಜಾಗದ ಹೊರತಾಗಿ ಒಟ್ಟು 67 ಎಕರೆ ಭೂಮಿಯ ಹಕ್ಕಿನ ಬಗ್ಗೆ ಖಾತರಿಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮಮಂದಿರ ಕಟ್ಟಲು ಟ್ರಸ್ಟ್ ನೇಮಿಸಬೇಕು ಎಂದು ಬಹಳ ಎಚ್ಚರಿಕೆ ಪಾಲಿಸಿದ ನ್ಯಾಯಾಲಯ ಮಸ್ಜಿದ್ ವಿಚಾರದಲ್ಲಿ ಯಾವುದೇ ಸೊಲ್ಲೆತ್ತಲಿಲ್ಲ.

ದ್ವೇಷ ರಾಜಕೀಯಕ್ಕೆ ಆಶ್ರಯ ನೀಡುವ ತೀರ್ಪು

1980ರಲ್ಲಿ ರಾಜಕೀಯ ಲಾಭಕ್ಕಿರುವ ಎಲ್ಲಾ ದಾರಿ ಮುಚ್ಚಿದಾಗ ಆಯೋಧ್ಯೆ ರಾಮಜನ್ಮಭೂಮಿ ವಿವಾದವನ್ನು ಬಿಜೆಪಿ ರಾಜಕೀಯ ಅಜೆಂಡವಾಗಿಸಿತು. ಹಿಂದುತ್ವ ರಾಜಕೀಯ ಮುಸ್ಲಿಮರ ಮೇಲೆ ದ್ವೇಷ ಮತ್ತು ತಾರತಮ್ಯ ನೀತಿಯನ್ನು ಪಾಲಿಸುತ್ತಿರುವ ಈ ಕಾಲದಲ್ಲಿ ಬಾಬರಿ ತೀರ್ಪು ಅದಕ್ಕೆ ಮತ್ತಷ್ಟು ಪುಷ್ಟಿ ನೀಡುವುದರಲ್ಲಿ ಸಂಶಯವಿಲ್ಲ.

ಬಾಬರಿ ತೀರ್ಪಿನಿಂದ ದೇಶದ ಶಾಂತಿ ಸಾಮರಸ್ಯ ಪುನಃಸ್ಥಾಪನೆಯಾಗಲಿದೆ ಎಂದು ಭಾವಿಸಿದರೆ ಅದು ಮೂರ್ಖತನವಾದೀತು. ರಾಮಮಂದಿರ ತೀರ್ಪು ನ್ಯಾಯಾಲಯ ತೀರ್ಮಾನಿಸಬಾರದು, ತೀರ್ಪು ಯಾವುದೇ ಆಗಿದ್ದರೂ ಮಂದಿರ ನಿರ್ಮಿಸಿಯೇ ಸಿದ್ಧ ಎಂದೆಲ್ಲಾ ಬೆದರಿಕೆ ಒಡ್ಡುತ್ತಿದ್ದವರು ತೀರ್ಪಿಗೆ ಕೆಲ ದಿನ ಮೊದಲು ಶಾಂತಿಗೆ ಆಹ್ವಾನ ನೀಡಿರುವುದರ ಹಿನ್ನೆಲೆಯು ಅಧ್ಯಯನಕ್ಕೆ ಯೋಗ್ಯವಾಗಿದೆ. ಅಯೋಧ್ಯೆಯ ತೀರ್ಪಿನ ಬಳಿಕವೂ ಹಿಂದುತ್ವ ಶಕ್ತಿಗಳು ಮೌನವಾಗಲಾರರು ಎಂಬುದಕ್ಕೆ ನಂತರ ನೀಡಿದ ಹೇಳಿಕೆಗಳೇ ಸಾಕ್ಷಿ. ಮಥುರಾ, ಕಾಶಿಯ ಹಕ್ಕನ್ನು ತೊರೆಯಲಾರೆವೆಂದು ವಿ.ಎಚ್.ಪಿ ಹೇಳಿಕೆ ನೀಡಿದೆ.

ಕಾಕತಾಳೀಯವೋ ಏನೋ, 1989 ನವಂಬರ್ 9ರಂದು ರಾಮ ಮಂದಿರ ನಿರ್ಮಾಣಕ್ಕೆ ಸಂಘಪರಿವಾರ ಕಾನೂನು ಉಲ್ಲಂಘನೆಯ ಮೂಲಕ ಶಿಲಾನ್ಯಾಸ ಮಾಡಿತ್ತು. ಇದೀಗ 30 ವರ್ಷಗಳ ಬಳಿಕ ಮತ್ತೊಂದು ನವಂಬರ್ 9ರಂದು ಆ ಕೃತ್ಯವನ್ನು ಸಾಧುಗೊಳಿಸುವ ತೀರ್ಪು ಹೊರಬಿದ್ದಿದೆ.

***

 

LEAVE A REPLY

Please enter your comment!
Please enter your name here