ಅಧಿಕಾರ ದಾಹದಲ್ಲಿ ಕೊಚ್ಚಿಹೋದ ನೆರೆಸಂತ್ರಸ್ತರು

0
53

♦ ಎನ್. ನಾಗೇಶ್

ಮತ್ತೊಂದು ರಾಜಕೀಯ ದೊಂಬರಾಟಕ್ಕೆ ವೇದಿಕೆ ಅಣಿಗೊಳ್ಳುತ್ತಿದೆ!

ಅತ್ತ ನೆರೆಯಿಂದಾಗಿ ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ; ಇತ್ತ ಜನಪ್ರತಿನಿಧಿಗಳೆನಿಸಿಕೊಂಡ ಮಹಾನುಭಾವರು ಮತ್ತೊಂದು ಚುನಾವಣೆಗೆ ಅಣಿಯಾಗುತ್ತಿದ್ದಾರೆ. ವಿಧಾನಸಭಾ ಚುನಾವಣೆ ನಡೆದು ಒಂದೂವರೆ ವರ್ಷಗಳಾಗಿವೆಯಷ್ಟೇ, ಅಷ್ಟರಲ್ಲೇ ಮಗದೊಮ್ಮೆ ಚುನಾವಣೆ ಎದುರಾಗಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸುವಂತಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ವಿರುದ್ಧ ಬಂಡೆದ್ದ ನಾಯಕರು ತಾವೆಂದು ರಾಜ್ಯದ ಜನತೆಯ ಎದುರು ತಮ್ಮನ್ನು ಬಿಂಬಿಸಿಕೊಂಡ 17 ಮಂದಿ ಬಂಡುಕೋರರು ನಂತರದ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಗುರುತಿಸಿಕೊಂಡರು.

ಇದಕ್ಕೂ ಮುನ್ನ ಮೈತ್ರಿ ಸರ್ಕಾರದ ಭಾಗವಾಗಿದ್ದ ಇವರು, ಯಡಿಯೂರಪ್ಪನವರನ್ನು ಮನಸಾರೆ ನಿಂದಿಸಿದ್ದರು. ಹಾಗೆ ತೆಗಳಿ ಏಳು ತಿಂಗಳುಗಳು ಕಳೆಯಲಿಲ್ಲ, ಅಷ್ಟರಲ್ಲಾಗಲೇ ಸದರಿ ಬಂಡುಕೋರರು ವೇಷ ಬದಲಿಸಿ ಬಿಜೆಪಿಗೆ ಜೈ ಎಂದರು. ಇವರ ವೇಷವಷ್ಟೇ ಅಲ್ಲ, ಅವರನ್ನು ಕುಣಿಸುತ್ತಿದ್ದ ಸೂತ್ರಧಾರರೂ ಬದಲಾಗಿದ್ದಾರೆ.

ಜೆಡಿಎಸ್ ನಾಯಕರ ಬದಲಿಗೆ ಈಗ ಬಿಜೆಪಿ ನಾಯಕರ ತಾಳಕ್ಕೆ ತಕ್ಕಂತೆ ಅವರು ಕುಣಿಯುತ್ತಿದ್ದ ಹಾಗೆ ಕಾಣುತ್ತಿದೆ. ಅನರ್ಹತೆಯನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ಮರುಗಳಿಗೆಯಲ್ಲಿಯೂ ಈ ಶಾಸಕರು ‘ನಾವು ವಿರೋಧಿಸುತ್ತಿರುವುದು ಮುಖ್ಯಮಂತ್ರಿಗಳನ್ನೇ ಹೊರತು ಪಕ್ಷವನ್ನಲ್ಲ’ ಎಂದೇ ಹೇಳಿದ್ದರು. ಇಷ್ಟು ಹೇಳಿದ ಗಂಟೆಗಳ ಅವಧಿಯಲ್ಲಿ ಇವರ ಮನಃಪರಿವರ್ತನೆಯಾಗಿತ್ತು.

ಇದಕ್ಕೆ ಕಾರಣಗಳೇನು? ಈ ಏಳು ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯವರಲ್ಲಿ ಅವರು ಕಂಡ ಬದಲಾವಣೆಗಳೇನು? ಎಂಬುದನ್ನು ಕೇಳುವ ಹಕ್ಕು ಈ ರಾಜ್ಯದ ಜನರಿಗಿದೆ. ಅದನ್ನು ತಿಳಿಸುವ ಜವಾಬ್ದಾರಿ ಈ ಶಾಸಕರ ಮೇಲಿದೆ.

ಅನೈತಿಕ ಕೂಡಾವಳಿ:

ಇವರು ಬಂಡೆದ್ದ ನಂತರದ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಗಳು ಕೇಳಿಬಂದಿವೆ. ಹಿಂದಿನ ಆರೋಪಗಳಿಂದ ಅವರನ್ನು ಯಾವ ನ್ಯಾಯಾಲಯವೂ ಖುಲಾಸೆಗೊಳಿಸಿಲ್ಲ.

ಹೀಗಿದ್ದಾಗ ಅಂದಿನ ಬಂಡಾಯ ಮತ್ತು ಇಂದಿನ ಶರಣಾಗತಿಗೆ ಈ ಶಾಸಕರು ಹಿಂದೆ ಮಾಡಿದ್ದ ಆರೋಪಗಳಾಗಲಿ, ಈಗ ನೀಡುತ್ತಿರುವ ಸಮರ್ಥನೆಗಳಾಗಲಿ ಕಾರಣ ಅಲ್ಲ ಎನ್ನುವುದು ಸ್ಪಷ್ಟ. ನಿಜವಾದ ಕಾರಣಗಳೇನು ಎಂಬುದನ್ನು ಅರಿಯಲಾರದಷ್ಟು ಜನ ಮೂರ್ಖರಲ್ಲ.

ರಾಜ್ಯದ ರಾಜಕಾರಣ ಇಂತಹ ಅಧೋಗತಿಗೆ ಹಿಂದೆಂದೂ ತಲುಪಿರಲಿಲ್ಲ. ಇವೆಲ್ಲವೂ ಪ್ರಾರಂಭವಾಗಿದ್ದು ‘ಆಪರೇಷನ್ ಕಮಲ’ ಎಂಬ ಅನೈತಿಕ ರಾಜಕಾರಣದಿಂದ. ಇದನ್ನು ಪ್ರಜಾಸತ್ತಾತ್ಮಕ ಹೋರಾಟದ ಮೂಲಕವೇ ಎದುರಿಸಬೇಕಾಗಿದ್ದ ವಿರೋಧಪಕ್ಷಗಳು ಕೂಡಾ ಅನುಸರಿಸಿದ್ದು ಅದೇ ಅನೈತಿಕ ಹಾದಿಯನ್ನು.

ಈ ಪಕ್ಷಾಂತರಿಗಳಿಗೆ ಚುನಾವಣೆಯಲ್ಲಿ ಬುದ್ಧಿ ಕಲಿಸಲಾಗದ ವಿರೋಧಪಕ್ಷಗಳು ಬಿಜೆಪಿಗಿಂತ ತಾವೇನೂ ಕಡಿಮೆ ಇಲ್ಲ ಎಂಬಂತೆ ತಾವೂ ಅವರನ್ನು ಖರೀದಿಸಲು ಹೊರಟರು. ಇದರಿಂದಾಗಿಯೇ ಇವರೆಲ್ಲ ಹೆಚ್ಚು ಬೆಲೆ ಕೊಟ್ಟವರಿಗೆ ಮಾರಾಟವಾಗಿ ಹೋಗಿರಬಹುದು ಎಂಬ ಅನುಮಾನ ಹುಟ್ಟಲು ಕಾರಣವಾಗಿರುವುದು.

ಇವುಗಳ್ಯಾವುದೂ ಪ್ರಜಾಪ್ರುತ್ವದ ಆಶಯಕ್ಕೆ ತಕ್ಕುದಾದ ನಡವಳಿಕೆಯಲ್ಲ. ಕ್ಷಣಕ್ಕೊಮ್ಮೆ ಬಣ್ಣಬದಲಾಯಿಸುವ ಊಸರವಳ್ಳಿ ರೀತಿಯ ಇಂತಹ ಸಮಯಸಾಧಕತನದ ರಾಜಕಾರಣ ಕೊನೆಗೊಳ್ಳಬೇಕಾದರೆ ಜನ ಜಾಗೃತರಾಗಬೇಕು.

ಭ್ರಷ್ಟರನ್ನು, ದುಷ್ಟರನ್ನು ಮಾತ್ರವಲ್ಲ ಯಾವುದೇ ಸೈದ್ಧಾಂತಿಕ ಕಾರಣಗಳಿಲ್ಲದೆ ಪಕ್ಷಾಂತರ ಮಾಡುವವರನ್ನು ಮತ್ತೆ ಮತ್ತೆ ಆರಿಸಿ ಕಳುಹಿಸುವ ತಪ್ಪನ್ನು ಮತದಾರರು ಮಾಡಬಾರದು.

ಚುನಾವಣಾ ಆಯೋಗದ ಗೊಂದಲ:

ನ್ಯಾಯಾಲಯದಲ್ಲಿ ಅನರ್ಹ ಶಾಸಕರ ವಿಚಾರಣೆ ಚಾಲ್ತಿಯಲ್ಲಿದೆ. ಈ ನಡುವೆ ಚುನಾವಣೆ ದಿನಾಂಕ ಘೋಷಣೆ ವೇಳೆ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹೇಳಲಾಗಿತ್ತು. ಆದರೆ ಏಕಾಏಕಿ ಸುಪ್ರೀಂಕೋರ್ಟ್‌ನಲ್ಲಿ ಕಾಣಿಸಿಕೊಂಡ ಆಯೋಗ ‘ಅನರ್ಹರ ಸ್ಪರ್ಧೆಗೆ ನಮ್ಮದೇನು ತಕರಾರಿಲ್ಲ ಎಂದು ಅಭಿಪ್ರಾಯ ಮಂಡಿಸಿರುವುದು ನಿಜಕ್ಕೂ ಅಚ್ಚರಿ; ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ. ಸಾಲದ್ದಕ್ಕೆ ಇದೀಗ ಸ್ಪೀಕರ್ ಕಚೇರಿಯ ಬಲವೂ ಅನರ್ಹರಿಗೆ ದೊರೆತಿದೆ. ರಾಜೀನಾಮೆಯೊಂದೇ ಅನರ್ಹತೆಗೆ ಕಾರಣವಾಗಬಾರದು ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮಹ್ತಾ ವಾದ ಮಂಡಿಸಿರುವುದು ಪ್ರಕರಣವನ್ನು ಮತ್ತಷ್ಟು ಗೋಜಲುಗೊಳಿಸಿದೆ.

ಕಾಂಗ್ರೆಸ್, ಜೆಡಿಎಸ್, ಸ್ಪೀಕರ್ ಪರ ವಕೀಲರು ಅಕ್ಷರಶಃ ಅನರ್ಹರ ರಾಜಕೀಯ ಜೀವನವನ್ನು ಆಪೋಶನ ತೆಗೆದುಕೊಳ್ಳಲು ಕಾದು ಕುಳಿತಿದ್ದರೆ, ಇತ್ತ ಬಿಜೆಪಿ ಶತಾಯಗತಾಯ ಅನರ್ಹರ ರಕ್ಷಣೆಗೆ ನಿಂತಿದೆ.

ಅನರ್ಹರು ಸ್ವಾತಂತ್ರ್ಯ ಹೋರಾಟಗಾರರು ಎಂದೇ ಬಗೆದಿರುವ ಬಿಜೆಪಿ ಅವರಿಗೆ ಇನ್ನಿಲ್ಲದ ಅಕ್ಕರೆ ತೋರುತ್ತ ತಮ್ಮ ಮನೆಯ ಮಕ್ಕಳನ್ನೇ ಮರೆತಿದೆ. ಅನರ್ಹರೇನು ಬಿಜೆಪಿಯನ್ನು ಸುಮ್ಮನೆ ಬೆಂಬಲಿಸಿಲ್ಲ. ಹಣ, ಅಧಿಕಾರದ ಲಾಲಸೆ ಇಟ್ಟುಕೊಂಡೇ ಮೈತ್ರಿ ಸರ್ಕಾರವನ್ನು ಕೆಡವಿ, ಬಿಜೆಪಿ ಕೋಟೆ ಬಾಗಿಲಲ್ಲಿ ನಿಂತಿದ್ದಾರೆ.

ಬಂಡಾಯ ಶುರು:

ಈಗಾಗಲೇ 17 ಕ್ಷೇತ್ರಗಳ ಪೈಕಿ 15ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಇಷ್ಟೂ ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೇ ಮತ್ತೆ ಮಣೆ ಹಾಕಲು ಬಿಜೆಪಿ ನಿರ್ಧರಿಸಿದೆ. ಆದರೆ ಇಷ್ಟು ವರ್ಷಗಳ ಕಾಲ; ಇವರ ವಿರುದ್ಧ ಹೋರಾಡಿ, ಸೆಣಸಾಡಿ ಪಕ್ಷ ಸಂಘಟನೆಗೈದು ಕಳೆದ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಸೋಲನ್ನುಂಡ ಮೂಲ ಬಿಜೆಪಿಗರ ಸಮಾಧಿಯ ಮೇಲೆ ಅನರ್ಹರಿಗೊಂದು ವನ ನಿರ್ಮಿಸಲು ಬಿಎಸ್‌ವೈ ಸಿದ್ಧತೆ ನಡೆಸಿದ್ದಾರೆ.

ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಬಂಡೆದಿದ್ದಾರೆ. ಅನರ್ಹರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಅನೇಕರು ಸ್ವತಂತ್ರವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಮತ್ತೊಂದು ರಾಜಕೀಯ ಪಲ್ಲಟಕ್ಕೆ ಕಾರಣವಾದರೂ ಅಚ್ಚರಿಯಿಲ್ಲ. ಹಾಗೇನಾದರೂ ಆದರೆ ಮತ್ತೊಂದು ರಾಜಕೀಯ ಬೃಹನ್ನಾಟಕಕ್ಕೆ ಪರದೆ ತೆರೆದುಕೊಳ್ಳುತ್ತೆ; ಅಭಿವದ್ಧಿ ಎಂಬುದು ಮರೀಚಿಕೆಯಾಗುತ್ತೆ.

ಕೇಳೋರಿಲ್ಲ ನೆರೆ ಸಂತ್ರಸ್ತರ ಗೋಳು:

ರಾಜ್ಯಾದ್ಯಂತ ಒಂದೇ ಸಮನೆ ಮಳೆ ಹೊಯ್ಯುತ್ತಿದೆ. ಅದು ಹೊಯ್ಯುವ ಆರ್ಭಟಕ್ಕೆ ರಾಜ್ಯದ ಜನರು ಕಂಗಾಲಾಗಿದ್ದಾರೆ. ಕೆಲವೆಡೆಯಂತೂ ಜನರು ಮನೆಯನ್ನು ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದಾರೆ. ರಾಜ್ಯದ ಅವಸ್ಥೆ ಹೀಗಿರುವಾಗ, ಈ ವೇಳೆಯೂ ರಾಜಕಾರಣ ಮಾಡುವ ರಾಜಕಾರಣಿಗಳು ನಮ್ಮಂತೆಯೇ ಹೊಟ್ಟೆಗೆ ಅನ್ನವನ್ನೇ ತಿನ್ನುತ್ತಾರೋ ಇಲ್ಲವೋ ಎಂಬುದು ಖಾತ್ರಿಯಾಗಬೇಕಿದೆ.

ಹೊಣೆಗೇಡಿ ಸರ್ಕಾರ:

ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಮಾಡಿದವರು ಸಾಯುತ್ತಿರುವ ಜನರಿಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಿಲ್ಲ. 5 ಸ್ಟಾರ್ ಹೊಟೇಲ್‌ನಲ್ಲಿ ಉಳಿಸಿದವರು ಬಡಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಲಿಲ್ಲ. ಅತೃಪ್ತರನ್ನು ಜೋಪಾನವಾಗಿ ಕಣ್ಣಲ್ಲಿ ಕಣ್ಣಿಟ್ಟು ಅವರಿಗೆ ಯಾವುದೇ ಕಾಪಿಟ್ಟವರು; ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳು ತಲುಪುತ್ತಿವೆಯೇ ಎಂಬುದನ್ನು ನೋಡೋರೇ ಇಲ್ಲದಂತಾಗಿದೆ. ಕೇಂದ್ರದ ಜುಟ್ಟು ಹಿಡಿದು ಪರಿಹಾರ ಕೇಳಲು ರಾಜ್ಯದ 25 ಸಂಸದರಿಗೂ ಗಂಟಲಿನಿಂದ ದನಿಯೇ ಹೊರಡುವುದಿಲ್ಲ. ಆಳುವ ಪಕ್ಷದ ಸ್ಥಿತಿಯೇ ಹೀಗಾದರೆ ಜನತೆಯ ಪಾಡೇನು?

ರಾಜಕೀಯ ಲಾಭಕ್ಕಾಗಿ ಪರಸ್ಪರ ಆರೋಪ, ಪ್ರತ್ಯಾರೋಪ ನಡೆಸಲಾಯಿತೇ ಹೊರತು; ಯಾವುದೇ ಪಕ್ಷದಿಂದಲೂ ನೆರೆ ಸಂತ್ರಸ್ತರನ್ನು ಸಂತೈಸುವ ಕೆಲಸವಾಗಲೇ ಇಲ್ಲ. ಒಂದೆಡೆ ಜನ ಸಂಕಷ್ಟದಿಂದ ನಲುಗುತ್ತಿದ್ದರೆ ಇತ್ತ ಉಪಚುನಾವಣೆ ನೆಪದಲ್ಲಿ ಅವರ ಕಷ್ಟಗಳನ್ನೇ ರಾಜಕೀಯ ಬಂಡವಾಳವಾಗಿಸಿಕೊಳ್ಳುವ ಎಲ್ಲಾ ತಂತ್ರಗಳನ್ನು ರಾಜಕೀಯ ಪಕ್ಷಗಳು ಹೆಣೆಯುತ್ತಿವೆ. ಮೊಸಳೆ ಕಣ್ಣೀರು ಸುರಿಸಿ ಜನರಿಗಾಗಿ ದುಡಿಯುವ ಭರವಸೆಯನ್ನು ಎಲ್ಲರೂ ಕೊಡುತ್ತಾರೆ. ಆದರೆ ಎಚ್ಚರವಿರಲಿ; ಜನರು ಇನ್ನಾದರೂ ಈ ಊಸರವಳ್ಳಿಗಳ ಮಾತಿಗೆ ಮರುಳಾಗದೆ, ಆಮಿಷಕ್ಕೆ ಬಲಿಯಾಗದೆ ಹೊಣೆಗೇಡಿಗಳ ಸೋಲಿಗೆ ಟೊಂಕಕಟ್ಟಿ ನಿಲ್ಲಬೇಕಿದೆ. ಓರ್ವ ನಿಜವಾದ ನಾಯಕನನ್ನು ಆರಿಸಿಕೊಳ್ಳಬೇಕಿದೆ. ಇಲ್ಲವಾದರೆ ಈ ಕಷ್ಟ, ಕಣ್ಣೀರಿಗೆ ಕೊನೆಯೇ ಇಲ್ಲದಂತಾಗುತ್ತದೆ.!

LEAVE A REPLY

Please enter your comment!
Please enter your name here