ಅಧಿಕಾರದ ಅರ್ಹತೆ

0
199

-ಎ.ಸಯೀದ್

‘‘ಮಣ್ಣು ತಿನ್ನಬೇಕಾಗಿ ಬಂದರೂ ಇನ್ನೊಬ್ಬರ ನಾಯಕನಾಗಬಾರದು’’ – ಇದು ಸಲ್ಮಾನುಲ್ ಫಾರಿಸಿ(ರ)ಯವರ ನಿಲುವು. ಅವರ ತಂದೆ ಪರ್ಷಿಯಾದ ಹಳ್ಳಿಯೊಂದರ ನಾಯಕರಾಗಿದ್ದರು.ಆಡಂಭರ ಜೀವನದಲ್ಲಿ ಬೆಳೆದ ಸಲ್ಮಾನ್ ಅಗ್ನಿ ಅರಾಧಕರೂ, ಪಾರ್ಸಿ ಧರ್ಮದ ಯೋಗಿಯೂ ಆದರು. ಸತ್ಯಾನ್ವೇಷಿಯಾಗಿದ್ದ ಅವರು ಕ್ರೈಸ್ತ ಧರ್ಮ ಸ್ವೀಕರಿಸಿ ನಾಡು ತೊರೆಯುತ್ತಾರೆ. ನಂತರ ಅವರಿಗೆ ವಿವಿಧ ಕ್ರೈಸ್ತ ಪುರೋಹಿತರ ಒಡನಾಟ ದೊರಕುತ್ತದೆ. ಕೊನೆಯ ಕ್ರೈಸ್ತ ಪುರೋಹಿತನ ಮರಣದ ವೇಳೆ ಅವರು ಕೇಳುತ್ತಾರೆ: ‘‘ತಮ್ಮ ಬಳಿಕ ನಾನು ಯಾರ ಬಳಿ ತೆರಳಲಿ?’’

ಪುರೋಹಿತನ ಉತ್ತರ ಹೀಗಿತ್ತು: ‘‘ಮಗನೇ, ನನ್ನಂತಹ ಒಬ್ಬ ವ್ಯಕ್ತಿಯನ್ನು ಸೂಚಿಸಲು ನನ್ನಿಂದಾಗುತ್ತಿಲ್ಲ. ಆದರೆ ಅಬ್ರಹಾಮರ ನೈಜ ಧರ್ಮದೊಂದಿಗೆ ಓರ್ವ ದೇವದೂತ ಆಗಮಿಸುವ ಸಮಯವಾಗಿದೆ. ಖರ್ಜೂರದ ಮರಗಳು ತುಂಬಿದ ಒಂದು ನಾಡಿಗೆ ಅವರು ನಿರಾಶ್ರಿತರಾಗಿ ಆಗಮಿಸುವರು. ಅವರನ್ನು ಅನುಗಮಿಸಲು ಸಾಧ್ಯವಾದರೆ ನೀನು ಹಾಗೆ ಮಾಡು’’

ಗುರುವಿನ ಮರಣದ ಬಳಿಕ ಸಲ್ಮಾನ್ ಅರೇಬಿಯಾದತ್ತ ಪ್ರಯಾಣ ಬೆಳೆಸುತ್ತಾರೆ. ದಾರಿ ಮಧ್ಯೆ ಎದುರಾದ ವರ್ತಕರ ತಂಡವೊಂದು ಸಲ್ಮಾನರನ್ನು ವಂಚಿಸಿ ಗುಲಾಮನನ್ನಾಗಿ ಮಾಡಿ ಮದೀನಾದ ಯಹೂದಿಯೋರ್ವನಿಗೆ ಮಾರಿ ಬಿಡುತ್ತಾರೆ. ಹಿಜ್ರಾದ ಪ್ರಾರಂಭ ವರ್ಷದಲ್ಲೆ ಅವರು ಇಸ್ಲಾಮ್ ಧರ್ಮವನ್ನು ಸ್ವೀಕರಿಸುತ್ತಾರೆ. ಪ್ರವಾದಿ(ಸ)ಯವರ ವಿದಾಯದ ವರೆಗೂ ಅವರೊಂದಿಗೆ ಜೀವಿಸಿದ ಸಲ್ಮಾನುಲ್ ಫಾರಿಸಿ(ರ) ಖಲೀಫರಾದ ಅಬೂಬಕರ್(ರ), ಉಮರ್(ರ) ಮೊದಲಾದವರ ಆಡಳಿತಕ್ಕೂ ಸಾಕ್ಷಿಯಾಗಿದ್ದರು. ಅರ್ಹ ವ್ಯಕ್ತಿ ದೊರಕುವ ವರೆಗೂ ಅವರು ಅಧಿಕಾರದ ಹೊಣೆಯನ್ನು ವಹಿಸಿಕೊಳ್ಳುತ್ತಿರಲಿಲ್ಲ. ಗವರ್ನರ್ ಸ್ಥಾನದೊಡನೆ ತಮಗಿರುವ ಉಪೇಕ್ಷೆಗೆ ಕಾರಣವೇನೆಂದು ಅವರೊಡನೆ ಕೇಳಿದಾಗ, ‘‘ಅದರ ಎದೆ ಹಾಲು ತುಂಬಾ ರುಚಿಕರವಾಗಿರುವುದು, ಅದು ಉಪೇಕ್ಷಿಸಿದರೆ ಬೇಸರ ಉಂಟಾಗುವುದು’’ ಎಂದು ಮರು ನುಡಿಯುತ್ತಾರೆ.

ಪ್ರವಾದಿ(ಸ)ಯವರ ಇತರ ಹಲವಾರು ಅನುಯಾಯಿಗಳ ನಿಲುವೂ ಇದಕ್ಕೆ ಭಿನ್ನವಾಗಿರಲಿಲ್ಲ. ತನ್ನ ಗವರ್ನರ್‌ಗಳನ್ನು ಕರೆಯಿಸಿ ಆಡಳಿತ ಮತ್ತು ಲೆಕ್ಕಪತ್ರ ಪರಿಶೋಧನೆ ನಡೆಸುವುದು ಖಲೀಫ ಉಮರ್(ರ) ವಾಡಿಕೆಯಾಗಿತ್ತು. ಶ್ರೀಮಂತ ಪ್ರದೇಶವಾದ ಹಿಮ್ಸಾದ ಗವರ್ನರ್ ಉಮೈರ್ ಬಿನ್ ಸಅದ್(ರ)ರನ್ನು ಖಲೀಫ ಒಮ್ಮೆ ಮದೀನಾಗೆ ಕರೆಸಿಕೊಳ್ಳುತ್ತಾರೆ.

ಚಿಂದಿಯಾದ ಬಟ್ಟೆಗಳನ್ನು ಧರಿಸಿ, ಎಣ್ಣೆ ಕಾಣದ ತಲೆಕೂದಲು, ನಗ್ನ ಪಾದದೊಂದಿಗೆ ಓರ್ವ ವ್ಯಕ್ತಿ ಮದೀನಾ ಮಸ್ಜಿದ್‌ಗೆ ಆಗಮಿಸುತ್ತಾರೆ. ಅವರ ಭುಜದ ಮೇಲೆ ಬೆತ್ತವೊಂದನ್ನು ಇರಿಸಿಕೊಂಡು ಅದರ ತುದಿಯಲ್ಲಿ ಬಟ್ಟೆಯ ಗಂಟೊಂದನ್ನು ನೇತು ಹಾಕಿದ್ದರು. ಆಗಂತುಕನನ್ನು ಕಂಡು ಆಶ್ಚರ್ಯದಿಂದ ಎದ್ದು ನಿಂತು ಗೌರವಿಸಿದ ಖಲೀಫ ಉಮರ್(ರ) ಕುಶಲೋಪರಿಯ ಬಳಿಕ ಕೇಳುತ್ತಾರೆ: ‘‘ಉಮೈರ್!, ತಮಗೇನಾಗಿದೆ?’’

ಉಮೈರ್: ‘‘ಅಲ್ಲಾಹನ ಅನುಗ್ರಹದಿಂದ ನನಗೇನು ಆಗಿಲ್ಲ. ನಾನು ಆರೋಗ್ಯವಂತ ಮತ್ತು ಸಂತುಷ್ಟನಾಗಿದ್ದೇನೆ’’

ಖಲೀಫ: ‘‘ತಾವು ಅಲ್ಲಿಂದ ಕಾಲ್ನಡಿಗೆಯಲ್ಲೇ ಬಂದಿರಾ?’’

ಉಮೈರ್: ‘‘ಹೌದು’’

ಖಲೀಫ: ‘‘ಗವರ್ನರಾಗಿದ್ದೂ ಸಂಚರಿಸಲು ಒಂದು ಮಗವೂ ದೊರಕಲಿಲ್ಲವೇ?’’

ಉಮೈರ್: ‘‘ಅವರು ನೀಡಲಿಲ್ಲ; ನಾನು ಕೇಳಲೂ ಇಲ್ಲ’’

ಖಲೀಫ: ‘‘ಖಜಾನೆಯೊಂದಿಗೆ ಬರಬೇಕೆಂದು ಬರೆದ ಪತ್ರ ತಲುಪಿತೇ?’’

ಉಮೈರ್: ‘‘ಹೌದು ದೊರಕಿತು. ಅದಕ್ಕಾಗಿಯೇ ನಾನು ಬಂದಿರುವೆನು’’

ತನ್ನ ಬೆತ್ತದ ತುದಿಗೆ ಗಂಟು ಹಾಕಿದ್ದ ಬಟ್ಟೆಯನ್ನು ಅವರು ತೆರೆದರು. ಅದರೊಳಗಿದ್ದ ಒಂದು ತೊಗಲಿನ ಪಾತ್ರೆ, ಒಂದು ಬಟ್ಟಲು ಮತ್ತು ಒಂದು ಬೋಗುಣಿಯನ್ನು ನೆಲದಲ್ಲಿ ಹರಡುತ್ತಾರೆ.

‘‘ಈ ತೊಗಲಿನ ಪಾತ್ರೆಯಲ್ಲಿ ನಾನು ನೀರನ್ನು ಸಂಗ್ರಹಿಸುತ್ತೇನೆ. ಅದನ್ನು ಕುಡಿಯಲು ಈ ಪಾತ್ರೆಯನ್ನು ಉಪಯೋಗಿಸುತ್ತೇನೆ. ಆಹಾರವೇನಾದರೂ ಲಭಿಸಿದರೆ ಈ ಬಟ್ಟಲಿಗೆ ಸುರಿದು ತಿನ್ನುತ್ತೇನೆ. ನಾನು ನಡೆದಾಡಲು ಉಪಯೋಗಿಸುವ ಬೆತ್ತವಿದು. ದಾರಿ ಮಧ್ಯೆ ಯಾವುದೇ ಜಂತುಗಳು ತೊಂದರೆ ನೀಡಿದರೆ ಅದನ್ನು ಇದರ ಮೂಲಕ ತಡೆಯುತ್ತೇನೆ. ಇದರಲ್ಲಿ ಅಗತ್ಯಕ್ಕಿಂತ ಹೆಚ್ಚು ಏನೂ ಇಲ್ಲ. ಇದರ ಹೊರತಾದ ಬೇರಾವುದೇ ಸಂಪತ್ತು ನನ್ನಲ್ಲಿಲ್ಲ’’ – ಉಮೈರ್(ರ) ವಿವರಿಸುತ್ತಾರೆ.

ಖಲೀಫ: ‘‘ತಾವು ಸಂಗ್ರಹಿಸಿದ ಝಕಾತ್‌ನ ಲೆಕ್ಕಪತ್ರ ಎಲ್ಲಿದೆ?’’

ಉಮೈರ್: ‘‘ಮುಸ್ಲಿಮರಿಂದ ನಾನು ಝಕಾತ್ ಮತ್ತು ಮುಸ್ಲಿಮೇತರರಿಂದ ಜಿಝ್‌ಯಾ ಸಂಗ್ರಹಿಸಿದೆನು. ಅಲ್ಲಿನ ಉತ್ತಮ ಜನರೊಡನೆ ಸಮಾಲೋಚನೆ ನಡೆಸಿ ಅವೆಲ್ಲವನ್ನ್ನೂ ಅಲ್ಲಿನ ಉತ್ತಮ ಕೆಲಸಕಾರ್ಯಗಳಿಗೆ ವಿನಿಯೋಗಿಸಿದೆನು.’’

ಅವರ ಅಧಿಕಾರವಧಿಯನ್ನು ಮುಂದುವರಿಸಿದ ಆದೇಶವನ್ನು ದಾಖಲಿಸಲು ಖಲೀಫ ಉಮರ್(ರ) ತನ್ನ ಗುಮಾಸ್ತನಿಗೆ ತಿಳಿಸುತ್ತಾರೆ. ಅದನ್ನು ಕೇಳಿದಾಕ್ಷಣ ಉಮೈರ್(ರ) ‘‘ದಯವಿಟ್ಟು ನನ್ನನ್ನು ಬಿಟ್ಟು ಬಿಡಿ. ಇನ್ನೆಂದೂ ನಾನದನ್ನು ಇಚ್ಛಿಸುವುದಿಲ್ಲ’’

ಅಧಿಕಾರ ಪಡೆಯಲು ಪೈಪೋಟಿ, ತೊಡರುಗಾಲು, ಅಪಪ್ರಚಾರ, ಚಾಕರಿ ಕೆಲಸ ಎಲ್ಲಾ ಕಾಲದಲ್ಲೂ ಸಾಮಾನ್ಯ. ಭಾರೀ ಲಂಚ, ಕಮಿಷನ್ ಹೆಚ್ಚು ಇರುವ ಇಲಾಖೆಗಳಿಗೆ ಪೈಪೋಟಿಯೂ ಕಠಿಣವಾಗಿರುತ್ತದೆ. ಸಾರ್ವಜನಿಕ ಜೀವನವನ್ನು ಸಂಕಷ್ಟಕ್ಕೊಡ್ಡಿ ಅಧಿಕಾರ ವರ್ಗವನ್ನು ಗೌರವಿಸಿ ಕೊಂಡಾಡುವ ಜನರು ಭ್ರಷ್ಟಾಚಾರ ಮತ್ತು ಅಕ್ರಮದ ಪಾಲುದಾರರು. ಒಮ್ಮೆ ಇಬ್ಬರು ಪ್ರವಾದಿ(ಸ) ಸಂದರ್ಶನಕ್ಕೆ ಬರುತ್ತಾರೆ. ಅವರಲ್ಲಿ ಓರ್ವ, ‘‘ಅಲ್ಲಾಹನ ಪ್ರವಾದಿಯವರೇ, ನನಗೆ ಆಡಳಿತಾಧಿಕಾರ ನೀಡಿದರೆ ನಿರ್ವಹಿಸಬಲ್ಲೆ’ ಅನ್ನುತ್ತಾರೆ. ಜತೆಯಲ್ಲಿದ್ದ ಮತ್ತೋರ್ವ ಅದೇ ಮಾತನ್ನು ಆಡುತ್ತಾರೆ.

ಪ್ರವಾದಿ(ಸ) ಹೇಳುತ್ತಾರೆ: ‘‘ಆಡಳಿತಾಧಿಕಾರವನ್ನು ಕೇಳಿ ಪಡೆಯುವವರಿಗೆ ನೀಡುವ ಪರಿಪಾಠವಿಲ್ಲ. ಅದೇ ರೀತಿ ಅಧಿಕಾರವನ್ನು ಪ್ರೀತಿಸುವವರಿಗೂ ನೀಡುವುದಿಲ್ಲ.’’

ಸಂಘಟನೆಗಳ ಅಂತಃಕಲಹದ ಮೂಲ, ಅಪರಾಧ ಮನೋಸ್ಥಿತಿ ಮತ್ತು ಅಧಿಕಾರ ಲಾಲಸೆಯಾಗಿದೆ. ಅದೇ ವೇಳೆ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸ್ಪರ್ಧೆ, ಚುನಾವಣೆ ಇಲ್ಲದೆ ವ್ಯವಸ್ಥೆಯನ್ನು ಕಟ್ಟಿ ಬೆಳೆಸಲು ಸಾಧ್ಯವಾಗದು. ನೈತಿಕ ಪ್ರಜ್ಞೆಯುಳ್ಳವರು ಅದರಿಂದ ದೂರ ನಿಂತರೆ ದುಷ್ಟರು ಅಧಿಕಾರವನ್ನು ಕೈವಶಪಡಿಸಿಕೊಳ್ಳುವರು. ‘‘ಅವರಲ್ಲಿನ ಅಪರಾಧಿಗಳನ್ನು ಮತ್ತು ಕತಘ್ನರನ್ನು ನೀನು ಅನುಸರಿಸಬಾರದು’’ ಎಂಬ ಈ ಕುರ್‌ಆನ್‌ನ ಆದೇಶವನ್ನು ಎಂದಿಗೂ ಮರೆಯಬಾರದು. ಅಪರಾಧಿಗಳ ರಾಜಕೀಯ ಸಂಬಂಧಗಳ ಬಗ್ಗೆ ರಾಷ್ಟ್ರದ ಪರಮಾಧಿಕಾರ ಮತ್ತು ಪರಮೋನ್ನತ ನ್ಯಾಯ ಪೀಠ ಆತಂಕ ವ್ಯಕ್ತಪಡಿಸುತ್ತಿರುವಾಗ ಅದಕ್ಕೆ ಕ್ರಿಯಾತ್ಮಕವಾಗಿ ಪ್ರತಿಕ್ರಿಯಿಸಲು ಜನಸಾಮಾನ್ಯರಿಗೆ ಮಾತ್ರ ಸಾಧ್ಯ.

***

LEAVE A REPLY

Please enter your comment!
Please enter your name here