ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ವೇದಿಕೆ ಸಜ್ಜು

Prasthutha|

ಸಮಕಾಲೀನ ವಿಚಾರಗಳ ಕುರಿತು ವಿಶ್ಲೇಷಿಸುವ ತಶು, ಕೊಪ್ಪಳ ಮಠ ಅವರ ಚದುರಂಗ ಅಂಕಣವು ಪ್ರತೀ ಶುಕ್ರವಾರ ಪ್ರಕಟಗೊಳ್ಳಲಿದೆ.

- Advertisement -

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ರಂಗಸಜ್ಜುಗೊಂಡಿದೆ. ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಈ ಸಂಶಯಕ್ಕೆ ಇನ್ನಷ್ಟು ಪುಷ್ಠಿ ನೀಡುವಂತಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಏಕಾಏಕಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಸಮ್ಮತಿ ಕೇಳಿಬಂದಿದ್ದರು. ದೆಹಲಿಯಿಂದ ಹೊರಡುವಾಗಲೂ, ಬೆಂಗಳೂರಿಗೆ ಬಂದು ತಲುಪಿದಾಗಲೂ ಇಂದು ಸಂಜೆಯೊಳಗೆ ಸಂಪುಟ ವಿಸ್ತರಣೆಗೆ ಸಮ್ಮತಿ ದೊರೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದರು. ಆದರೆ, ಇದಾಗಿ ನಾಲ್ಕೈದು ದಿನಗಳು ಕಳೆದರೂ ಯಾವುದೇ ಪ್ರಗತಿ ಕಾಣದಿರುವುದು ಯಡಿಯೂರಪ್ಪ ಅವರ ಬಗ್ಗೆ ಪಕ್ಷದ ವರಿಷ್ಠರು ಯಾವ ಮನೋಭಾವ ಹೊಂದಿದ್ದಾರೆ ಎಂಬುದು ಮತ್ತೊಮ್ಮೆ ಸ್ಪಷ್ಟಗೊಂಡಿದೆ.

- Advertisement -

ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ ತೆರೆಮರೆಯಲ್ಲಿ ನಾಯಕತ್ವ ಬದಲಾವಣೆಯ ಸೂತ್ರಗಳನ್ನು ಹೆಣೆಯಲಾಗುತ್ತಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರ್ಯತಂತ್ರ ರೂಪಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಲಿಂಗಾಯತ ಸಮುದಾಯದ ಏಕಮೇವ ನಾಯಕನಂತಿರುವ ಯಡಿಯೂರಪ್ಪ ಅವರನ್ನು ಅಷ್ಟು ಸುಲಭದಲ್ಲಿ ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂಬ ಅರಿವು ಕೂಡ ಇದೆ. ಯಡಿಯೂರಪ್ಪ ಅವರ ನಾಯಕತ್ವ ಬದಲಾಯಿಸಿದರೆ ರಾಜ್ಯದ ಪ್ರಮುಖ ಸಮುದಾಯವಾಗಿರುವ ಲಿಂಗಾಯತರು ತಿರುಗಿ ಬೀಳಬಹುದು ಎಂಬ ಆತಂಕದಿಂದಲೆ ಅದೇ ಸಮುದಾಯದ ಮತ್ತಿಬ್ಬರು ನಾಯಕರನ್ನು ಮುಂಚೂಣಿಗೆ ತರುವ ಪ್ರಯತ್ನ ನಡೆಯುತ್ತಲೇ ಇದೆ. ಇದಕ್ಕಾಗಿಯೇ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ದೆಹಲಿಗೆ ಕರೆಸಿ ಮಾತುಕತೆ ನಡೆಸಿರುವುದು ಎನ್ನಲಾಗುತ್ತಿದೆ. ಬಿ.ಎಲ್. ಸಂತೋಷ್ ಅವರು ಲಕ್ಷ್ಮಣ ಸವದಿ ಬೆಂಬಲಕ್ಕೆ ನಿಂತಿದ್ದು, ಒಂದು ವೇಳೆ ಯಡಿಯೂರಪ್ಪ ಅನಿವಾರ್ಯವಾಗಿ ಕೆಳಗಿಳಿಯಬೇಕಾಗಿ ಬಂದರೆ ಸವದಿಯನ್ನು ಈ ಸ್ಥಾನಕ್ಕೆ ಕೂರಿಸಲು ರಂಗ ಸಿದ್ಧಗೊಂಡಿದೆ. ಆದರೆ ಯಡಿಯೂರಪ್ಪ ಇದಕ್ಕೆ ಒಪ್ಪುತ್ತಾರೆಯೇ ಎಂಬುದು ಕಾದುನೋಡಬೇಕು.

ಈ ಮಧ್ಯೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮತ್ತು ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್ ನಾಯಕರು ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪ ಹಿಂದೆ ಕೇಳಿ ಬಂದಿದ್ದರೆ ಬಿಜೆಪಿಯ ಎಲ್ಲಾ ನಾಯಕರು ಕಾಂಗ್ರೆಸ್ ವಿರುದ್ಧ ಪ್ರತಿ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಸಮರ್ಥಿಸಿಕೊಳ್ಳಲು ಮುಂದೆ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದೇ ಭ್ರಷ್ಟಾಚಾರದ ಆರೋಪ ಮುಂದಿಟ್ಟು ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ. ಹಲವು ಶಾಸಕರು, ಕೆಲವು ಸಚಿವರು ಕೊರೋನ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿರುವ ಸಂದರ್ಭವನ್ನೇ ಬಳಸಿಕೊಂಡಿರುವ ಕಾಂಗ್ರೆಸ್, ಗುರುವಾರ ಅವಿಶ್ವಾಸ ನಿರ್ಣಯವನ್ನು ಮಂಡಿಸಿಯೇ ಬಿಟ್ಟಿದೆ. ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಹೇಳಿರುವುದರಿಂದ ಅವಿಶ್ವಾಸ ನಿರ್ಣಯ ಗೆಲ್ಲಲು ಸಂಖ್ಯಾಬಲ ದೊರೆಯದಿದ್ದರೂ ಕನಿಷ್ಠ ಪಕ್ಷ ವೈದ್ಯಕೀಯ ಉಪಕರಣ ಖರೀದಿಯಲ್ಲಿ ನಡೆದ ಅವ್ಯವಹಾರ, ಕೊರೋನ ನಿಯಂತ್ರಣದಲ್ಲಿ ವೈಫಲ್ಯ, ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರ, ರೈತ ವಿರೋಧಿ ಮಸೂದೆ ಮುಂತಾದವುಗಳನ್ನು ಮುಂದಿಟ್ಟು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದು ಎಂಬ ಉದ್ದೇಶವೂ ಇದರ ಹಿಂದಿದೆ. ಸ್ಪೀಕರ್ ಯಾವ ರೀತಿ ಚರ್ಚೆಯನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್ ನ ತಂತ್ರಗಾರಿಕೆ ನಿಂತಿದೆ.

ಮೊದಲಿಂದಲೂ ಬಿಜೆಪಿ ಒಂದು ಗುಂಪಿಗೆ ವಿಜಯೇಂದ್ರ ವಿರುದ್ಧ ಅಸಮಾಧಾನವಿದ್ದು, ಅವರು ತಂದೆಯ ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿತ್ತು. ಈ ಬಗ್ಗೆ ಪಕ್ಷದ ಹೈಕಮಾಂಡ್ ಗೆ ಪತ್ರವನ್ನೂ ಬರೆದಿದ್ದು ಬಹಿರಂಗಗೊಂಡಿತ್ತು. ಬಿಜೆಪಿ ಶಾಸಕರು ಔತಣಕೂಟದ ಹೆಸರಿನಲ್ಲಿ ಹಲವು ಬಾರಿ ಸಭೆ ಸೇರಿ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಗುಟ್ಟಾಗಿ ಏನೂ ಉಳಿದಿಲ್ಲ. ವಿಜಯೇಂದ್ರ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡಬೇಕೆಂಬ ಯಡಿಯೂರಪ್ಪನವರ ಆಸೆಯನ್ನು ಅರಿತಿರುವ ಈ ಶಾಸಕರು ಅದಕ್ಕೆ ಹಿಂದಿನಿಂದಲೇ ಅಡ್ಡಿಪಡಿಸುತ್ತಿರುವುದು ಯಡಿಯೂರಪ್ಪ ಅವರಿಗೆ ತಿಳಿಯದ ವಿಚಾರವೇನಲ್ಲ. ಆದರೂ ಬಿಜೆಪಿ ಹೈಕಮಾಂಡ್ ಗೆ, ಯಡಿಯೂರಪ್ಪ ಅವರಲ್ಲಿ ನೇರಾನೇರವಾಗಿ ಅಧಿಕಾರದಿಂದ ಕೆಳಗಿಳಿಯಿರಿ ಎಂದು ಹೇಳುವಷ್ಟು ಧೈರ್ಯ ಇಲ್ಲ. ಅವರ ಆರೋಗ್ಯದ ಬಗ್ಗೆ ಮನವರಿಕೆ ಮಾಡಿ ಸಮಾಧಾನದಿಂದ ಅವರ ನಾಯಕತ್ವ ಬದಲಾಯಿಸಲು ವರಿಷ್ಠರು ಒಲವು ತೋರಿದ್ದಾರೆ ಎನ್ನಲಾಗಿದೆ. ಆದರೂ ಇನ್ನು ಆರು ತಿಂಗಳು ಅಥವಾ ಈ ಅವಧಿ ಪೂರ್ಣವಾಗುವವರೆಗೆ ಯಡಿಯೂರಪ್ಪ ನಾಯಕತ್ವ ಅವರನ್ನೇ ಮುಂದುವರಿಸಿದರೂ ಅಚ್ಚರಿಯೇನಿಲ್ಲ.

Join Whatsapp