ಬೆಂಗಳೂರು ಗಲಭೆ | 263 ಮಂದಿಯ ವಿರುದ್ಧ UAPA ಅಡಿ ಪ್ರಕರಣ ದಾಖಲು! | ಸಾಮೂಹಿಕ ಆಕ್ರೋಶ ಭಯೋತ್ಪಾದನಾ ಕೃತ್ಯವೇ?

Prasthutha|

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಯವರ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿದ ಬಳಿಕ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ UAPA (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ಎಫ್.ಐ.ಆರ್ ಗಳ ಪೈಕಿ ಅಪರಾಧ ಸಂಖ್ಯೆ 195/2020ರಲ್ಲಿ 114 ಮತ್ತು ಅಪರಾಧ ಸಂಖ್ಯೆ 229/2020ರಲ್ಲಿ 149 ಮಂದಿಯ ಸೇರಿದಂತೆ ಈ ವರೆಗೆ ಒಟ್ಟು 263 ಮಂದಿಯ ವಿರುದ್ಧ ಯುಎಪಿಎ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

- Advertisement -

ಮುಸ್ಲಿಮರು ಅಪಾರವಾಗಿ ಗೌರವಿಸುವ ಪ್ರವಾದಿ ಮುಹಮ್ಮದರ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿದ ಬಳಿಕ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಆರೋಪಿಯ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಪೊಲೀಸರು ಅನುಸರಿಸಿದ ವಿಳಂಬ ನೀತಿ ಹಿಂಸಾಚಾರದ ಘಟನೆಗೆ ಕಾರಣವಾಗಿತ್ತು ಎಂಬ ಬಲವಾದ ಆರೋಪಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಬೆಂಗಳೂರಿನಲ್ಲಿ ನಡೆದ ಘಟನೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿ ಸಾಮೂಹಿಕ ಜನಾಕ್ರೋಶದಿಂದ ಉಂಟಾದ ಕೃತ್ಯವಾಗಿತ್ತು. ಆದರೆ ಇಲ್ಲಿ ಆರೋಪಿಗಳ ವಿರುದ್ಧ ಯುಎಪಿಎ ಅಡಿ ಕೇಸು ದಾಖಲಾಗಿದೆ. ಸಾಮಾನ್ಯವಾಗಿ ಯುಎಪಿಎಯನ್ನು ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿ ಹಾಕಲಾಗುತ್ತದೆ. ಇದೀಗ ಬೆಂಗಳೂರು ಹಿಂಸಾಚಾರದ ಘಟನೆಯಲ್ಲಿ ಆರೋಪಿಗಳ ಮೇಲೆ ಯುಎಪಿಎ ಅಡಿಯಲ್ಲಿ ಕೇಸು ದಾಖಲಿಸುವುದು ಎಷ್ಟು ಸರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

“ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪೋಸ್ಟ್ ನಿಂದ ಆಕ್ರೋಶಿತರಾದ ಜನರು ನಡೆಸಿರುವ ಕೃತ್ಯ”

- Advertisement -

“ಬಲಪಂಥೀಯ ಶಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ಬಹಳಷ್ಟು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವಂತೆ ನವೀನ್ ನನ್ನು ಪ್ರಚೋದಿಸಿದವರು ಯಾರು? ಯಾವ ಕಾರಣಕ್ಕಾಗಿ ಅದನ್ನು ಆತ ಹಾಕಿದ್ದ? ಇದರ ಬಗ್ಗೆ ತನಿಖೆಯಾಗಬೇಕು. ಇದರಿಂದ ಕೋಮು ಗಲಭೆ, ತೊಂದರೆಗಳಾಗುತ್ತವೆ ಎಂದು ತಿಳಿದಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ಹಾಕಲಾಗಿದೆ. ಪೋಸ್ಟ್ ಮಾಡಿರುವುದರಿಂದ ಇನ್ನೊಬ್ಬರ ಭಾವನೆಗಳಿಗೆ ಧಕ್ಕೆಯಾಗಿದೆ. ನೊಂದವರು ದೂರು ದಾಖಲಿಸಲು ಹೋಗಿದ್ದಾರೆ. ತಕ್ಷಣ ಪೊಲೀಸರು ದೂರು ದಾಖಲಿಸಿ, ಆತನನ್ನು ಬಂಧಿಸಿರಬಹುದು. ಆದರೆ ನಮಗೆ ದೊರಕಿರುವ ಮಾಹಿತಿ ಪ್ರಕಾರ, ಪೊಲೀಸರು ವಿಳಂಬ ಮಾಡಿದ್ದಾರೆ. ಈ ಪ್ರಕರಣದಲ್ಲಿ ನವೀನ್ ನನ್ನು ಮಾತ್ರ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಆದರೆ, ಆತ ಒಬ್ಬನೇ ಆ ಪೋಸ್ಟ್ ಏಕೆ ಹಾಕಿದ? ಆತನ ಉದ್ದೇಶ, ಆತನ ರಾಜಕೀಯ ಹಿನ್ನೆಲೆ, ಇದರ ಹಿಂದಿನ ಒಳಸಂಚು ಏನು? ಇವೆಲ್ಲವುಗಳ ಬಗ್ಗೆ ಇದುವರೆಗೂ ತನಿಖೆ ನಡೆದಿಲ್ಲ. ಬದಲಾಗಿ, ಸುಮಾರು 67 ಎಫ್.ಐ.ಆರ್ ದಾಖಲಿಸಿ ಅದರಲ್ಲಿ 400 ಮಂದಿಯನ್ನು ಬಂಧಿಸಲಾಗಿದೆ. ಅದರಲ್ಲಿ ಎರಡು ಎಫ್.ಐ.ಆರ್ ನಲ್ಲಿ ಯುಎಪಿಎ ಕೇಸು ಹಾಕಲಾಗಿದೆ. ಯುಎಪಿಎ ಅಂದರೆ ಭಯೋತ್ಪಾದನಾ ಪ್ರಕರಣಗಳಿಗೆ ಹಾಕುವ ಕೇಸು. ಆದರೆ ಈ ಘಟನೆ ನವೀನ್ ಎಂಬಾತ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪೋಸ್ಟ್ ನಿಂದ ಆಕ್ರೋಶಿತರಾದ ಜನರು ನಡೆಸಿರುವ ಕೃತ್ಯ. ಈ ಘಟನೆಗೆ ಸಂಬಂಧಿಸಿ ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಪಡಿಸಲಾಗಿದೆ. ಏನೂ ತಿಳಿಯದ ಅಮಾಯಕರನ್ನೂ ಬಂಧಿಸಲಾಗಿದೆ. ಅವರ ಒಟ್ಟು ಕುಟುಂಬವನ್ನೇ ಗುರಿಪಡಿಸಲಾಗಿದೆ. ಕೆಲವೊಂದು ನಿರ್ದಿಷ್ಟ ಮಾಧ್ಯಮಗಳಲ್ಲಿ ಅವರನ್ನು ವಿಲನ್ ಗಳಾಗಿ ತೋರಿಸಲಾಗಿದೆ. ಇದರ ಹಿಂದಿನ ರಾಜಕೀಯವನ್ನೂ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇನ್ನೊಂದು  ವಿಚಾರ, ಇಲ್ಲಿ ದಲಿತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಎಸ್ಸಿ/ಎಸ್ಟಿ ಕೇಸುಗಳು ದಾಖಲಾಗುತ್ತಿವೆ. ಇದು ಘಟನೆಯ ರಾಜಕೀಕರಣ ಮಾತ್ರವಲ್ಲ, ಕೋಮುವಾದೀಕರಣವೂ ಆಗಿದೆ. ಘಟನೆ ನಡೆದಿರುವುದು ಒಂದು ದುರಂತ. ಜೊತೆಗೆ ಖಂಡನಾರ್ಹವೂ ಆಗಿದೆ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ ಅಮಾಯಕರಿಗೆ ಅನ್ಯಾಯವಾಗದಿರಲಿ.

  -ಎಸ್.ಬಾಲನ್, ಮಾನವ ಹಕ್ಕು ಹೋರಾಟಗಾರರು ಮತ್ತು ಹೈಕೋರ್ಟ್ ವಕೀಲರು

“ಯುಎಪಿಎ ಹೇರಿಕೆ ಪೂರ್ವಾಗ್ರಹ ಪೀಡಿತ ನಡೆ”

“ಕೆ.ಜಿ .ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 250ಕ್ಕೂ ಹೆಚ್ಚು ಮಂದಿಯ ಮೇಲೆ ಯುಎಪಿಎ ಕಾಯ್ದೆಯನ್ನು ಹೇರಿರುವುದು ಪೊಲೀಸರ ತಾರತಮ್ಯ ಮತ್ತು ಪೂರ್ವಾಗ್ರಹ ಪೀಡಿತ ನಡೆಯಾಗಿದೆ. ದೇಶದ ವಿರುದ್ಧ ಸಂಘಟಿತವಾಗಿ ನಡೆಸುವ ಭಯೋತ್ಪಾದನೆಯಂತಹ ಗಂಭೀರ ಅಪರಾಧಗಳಲ್ಲಿ ಮಾತ್ರ ಯುಎಪಿಎ ಬಳಸಲಾಗುತ್ತದೆ. ಇಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿ ಜನರು ತಕ್ಷಣದಲ್ಲಿ ಜಮಾಯಿಸಿದ್ದರು ಮತ್ತು ಎಫ್.ಐ.ಆರ್. ದಾಖಲಿಸಲು ವಿಳಂಬಿಸಿದ ಕಾರಣಕ್ಕೆಆಕ್ರೋಶಗೊಂಡು ಗಲಭೆ ನಡೆಸಿದ್ದರು. ಯುಎಪಿಎ ಹೇರುವಂತಹಾ ಯಾವ ಕಾರಣವೂ ಈ ಪ್ರಕರಣದಲ್ಲಿರಲಿಲ್ಲ. ಆದರೆ ಪೊಲೀಸರು ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಯುಎಪಿಎ ಪ್ರಕರಣ ದಾಖಲಿಸಿರುವುದು ದುರದೃಷ್ಟಕರ.”

 -ತಾಹಿರ್, ಮಾನವ ಹಕ್ಕು ಹೋರಾಟಗಾರರು ಹಾಗೂ ಹೈಕೋರ್ಟ್ ವಕೀಲರು

Join Whatsapp