ತಾಹಿರ್ ಹುಸೇನ್ ಮುನ್ಸಿಪಲ್ ಸದಸ್ಯತ್ವ ರದ್ದತಿ ನಿರ್ಧಾರಕ್ಕೆ ತಡೆ ನೀಡಿದ ದೆಹಲಿ ಹೈಕೋರ್ಟ್

Prasthutha|

ನವದೆಹಲಿ : ಆಮ್ ಆದ್ಮಿ ಪಕ್ಷದ ಮಾಜಿ ಮುಖಂಡ, ಕೌನ್ಸಿಲರ್ ತಾಹಿರ್ ಹುಸೇನ್ ಅವರ ಮುನ್ಸಿಪಲ್ ಸದಸ್ಯತ್ವ ರದ್ದತಿಗೊಳಿಸುವ ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ. ಫೆಬ್ರವರಿಯಲ್ಲಿ ನಡೆದಿದ್ದ ಈಶಾನ್ಯ ದೆಹಲಿ ಹಿಂಸಾಚಾರ ಘಟನೆಗೆ ಸಂಬಂಧಿಸಿ ತಾಹಿರ್ ಹುಸೇನ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.

- Advertisement -

ಜನವರಿ, ಫೆಬ್ರವರಿ, ಜೂನ್ ಮತ್ತು ಜುಲೈನಲ್ಲಿ ನಡೆದಿದ್ದ ಕಾರ್ಪೊರೇಶನ್ ಸಭೆಗಳಲ್ಲಿ ಭಾಗವಹಿಸದ ಕಾರಣ ತಾಹಿರ್ ಅವರ ಸದಸ್ಯತ್ವ ರದ್ದು ಪಡಿಸುವ ನಿರ್ಧಾರವನ್ನು ಆ.26ರಂದು ಮುನ್ಸಿಪಲ್ ಕಾರ್ಪೊರೇಶನ್ ಕೈಗೊಂಡಿತ್ತು. ಯಾವುದೇ ಸದಸ್ಯ ಸತತ ಮೂರು ಸಭೆಗಳಿಗೆ ಸೂಕ್ತ ಕಾರಣ ನೀಡದೆ ಹಾಜರಾಗದೇ ಇದ್ದಾಗ, ಅಂತಹವರನ್ನು ವಜಾ ಮಾಡಬಹುದು ಎಂಬ ನಿಯಮದಡಿ ನಿರ್ಧಾರ ಕೈಗೊಳ್ಳಲಾಗಿತ್ತು.

ಸತತ ಮೂರು ತಿಂಗಳು ಸಭೆಗಳು ನಡೆದೇ ಇಲ್ಲ, ಜನವರಿ ಫೆಬ್ರವರಿ ಸಭೆಗಳ ನಂತರ ಮಾರ್ಚ್, ಏಪ್ರಿಲ್, ಮೇನಲ್ಲಿ ಸಭೆಗಳು ನಡೆದಿರಲಿಲ್ಲ, ಆ ನಂತರ ಜೂನ್ ಮತ್ತು ಜುಲೈನಲ್ಲಿ ಮಾತ್ರ ಸಭೆ ನಡೆದಿದೆ. ಅಲ್ಲದೆ, ತಮಗೆ ಗೈರು ಹಾಜರಾಗಿರುವುದಕ್ಕೆ ಕಾರಣ ನೀಡಲು, ಯಾವುದೇ ಶೋಕಾಸ್ ನೋಟಿಸ್ ಕೊಟ್ಟಿಲ್ಲ ಎಂದು ತಾಹಿರ್ ಹುಸೇನ್ ತಮ್ಮ ನ್ಯಾಯವಾದಿ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

Join Whatsapp