ಶಿವಮೊಗ್ಗದ ಲಕ್ಷಾಂತರ ಹೆಕ್ಟೇರ್ ಎಂಪಿಎಂ ನೆಡುತೋಪು ಭೂಮಿ ಖಾಸಗೀಕರಣಕ್ಕೆ ಸಿಎಂ ಆಸಕ್ತಿ : ನಿಯೋಗದಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ

Prasthutha|

ಬೆಂಗಳೂರು : ಶಿವಮೊಗ್ಗ ಜಿಲ್ಲೆಯಲ್ಲಿರುವ ಎಂಪಿಎಂ ಒಡೆತನದ ಲಕ್ಷಾಂತರ ಹೆಕ್ಟೇರ್ ನೆಡುತೋಪು ಭೂಮಿಯನ್ನು ಖಾಸಗಿಯವರಿಗೆ ನೀಡಲು ಸಿಎಂ  ಯಡಿಯೂರಪ್ಪ ಮತ್ತು ಅವರ ಮಗ ರಾಘವೇಂದ್ರ ಆಸಕ್ತರಾಗಿದ್ದಾರೆ ಎಂದು ಜಿಲ್ಲಾ ಅಕೇಶಿಯಾ ವಿರೋಧಿ ಹೋರಾಟ ಒಕ್ಕೂಟದ ನಿಯೋಗ ಆಪಾದಿಸಿದೆ.

- Advertisement -

ಈ ಸಂಬಂಧ ನಿಯೋಗದ ಸದಸ್ಯರು ಬೆಂಗಳೂರಿನಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರನ್ನು ಭೇಟಿಯಾಗಿ, ನೆಡುತೋಪು ಖಾಸಗೀಕರಣವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ನಲವತ್ತು ವರ್ಷಗಳಿಂದ ಮಲೆನಾಡಿನ ದಟ್ಟ ಅರಣ್ಯವನ್ನು ನಾಶ ಮಾಡಿ, ಅಲ್ಲಿ ಮಾರಕ ಏಕಜಾತಿಯ ಅಕೇಶಿಯಾ ಮತ್ತು ನೀಲಗಿರಿ ಬೆಳೆಸಿ ಇಡೀ ಮಲೆನಾಡಿನ ಪರಿಸರ ಮತ್ತು ಜನಜೀವನ ಪರಿತಪಿಸುವಂತಾಗಿದೆ. ಇದೀಗ ನೆಡುತೋಪು ಲೀಸ್ ಮುಗಿದಿರುವುದರಿಂದ ಇನ್ನಾದರೂ ಅಲ್ಲಿ ಸಹಜ ಕಾಡು ಬೆಳೆಯಲು ಅವಕಾಶ ನೀಡಿ ಎಂದು ನಿಯೋಗ ಒತ್ತಾಯಿಸಿದೆ.

- Advertisement -

ರಾಜಕಾರಣಿಗಳು ಮತ್ತು ಖಾಸಗಿ ಕಂಪೆನಿಗಳ ಲಾಭಕ್ಕೆ ಈ ಅಪಾರ ಅರಣ್ಯ ಭೂಮಿಯನ್ನು ಖಾಸಗೀಕರಣ ಮಾಡಲು ಹೊರಟಿರುವುದು ಜನದ್ರೋಹಿ ಕೃತ್ಯವಾಗಿದೆ ಎಂದು ಒಕ್ಕೂಟ ಪ್ರತಿಪಾದಿಸಿದೆ.

ನಿಯೋಗದ ಸದಸ್ಯರ ಆಕ್ರೋಶಕ್ಕೆ ಮಣಿದು, ಈ ಸಂಬಂಧ ಅರಣ್ಯ ಸಚಿವರ ಗಮನಕ್ಕೆ ತರುವುದಾಗಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯವರು ಭರವಸೆ ನೀಡಿದರು ಎಂದು ನಿಯೋಗದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಪ್ರೊ. ರಾಜೇಂದ್ರ ಚೆನ್ನಿ, ರೈತ ನಾಯಕ ಕೆ.ಟಿ. ಗಂಗಾಧರ, ಪ್ರಗತಿಪರ ಹೋರಾಟಗಾರರಾದ ಕೆ.ಪಿ. ಶ್ರೀಪಾಲ್, ಎಚ್.ಬಿ. ರಾಘವೇಂದ್ರ, ಶಶಿ ಸಂಪಳ್ಳಿ, ಅಖಿಲೇಶ್ ಚಿಪ್ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Join Whatsapp