ಇಸ್ರೇಲ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಫೆಲೆಸ್ತೀನ್ ಹೋರಾಟಗಾರ ಮಹೆರ್ ಅಖ್ರಾಸ್ ಬಿಡುಗಡೆ

Prasthutha|

ತನ್ನ ವಿರುದ್ಧದ ಆಡಳಿತಾತ್ಮಕ ಬಂಧನವನ್ನು ವಿರೋಧಿಸಿ ಇಸ್ರೇಲಿನ ವಿರುದ್ಧ ಪ್ರತಿಭಟಿಸುತ್ತಾ 103 ದಿನಗಳ ಉಪವಾಸ ಸತ್ಯಾಗ್ರಹದಲ್ಲಿ ಕಳೆದ ಫೆಲೆಸ್ತೀನ್ ನ ಹೋರಾಟಗಾರ ಕೈದಿ ಮಹೇರ್ ಅಲ್-ಅಖ್ರಾಸ್ ನನ್ನು ಇಸ್ರೇಲ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ನಾಲ್ಕು ತಿಂಗಳ ಅವಧಿಯ ನಂತರ ಅಖ್ರಾಸ್ ಅವರ ಬಂಧನ ಕೊನೆಗೊಳ್ಳಬೇಕೆಂದು ನವೆಂಬರ್ 8ರಂದು ಇಸ್ರೇಲ್ ನ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.  ಇಂದು ಅಖ್ರಾಸ್ ಅವರ ಬಂಧನ ವಾಧಿ ಮುಕ್ತಾಯಗೊಂಡಿದ್ದು, ಅವರು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

- Advertisement -

ಬಿಡುಗಡೆಯ ನಂತರ ಮಾತನಾಡಿದ ಅಖ್ರಾಸ್, “ನನ್ನ ಸ್ವಾತಂತ್ರ್ಯವೇ ನಮ್ಮ ಜನರ ಸ್ವಾತಂತ್ರ್ಯ ಮತ್ತು ನಮ್ಮ ದೃಢ ಸಂಕಲ್ಪ ಅಕ್ರಮಿಗಳ ವಿರುದ್ಧ ನಮಗೆ ಗೆಲುವು ತಂದು ಕೊಟ್ಟ್ಟಿದೆ” ಎಂದು ಹೇಳಿದ್ದಾರೆ.

‘ಆಡಳಿತಾತ್ಮಕ ಬಂಧನ’ವು ಇಸ್ರೇಲಿನ ಅತ್ಯಂತ ವಿವಾದಾತ್ಮಕ ಪದ್ಧತಿಯಾಗಿದೆ. ಫೆಲೆಸ್ತೀನಿಯರ ವಿರುದ್ಧ ಹೆಚ್ಚು ಕಡಿಮೆ ಬಳಸಲಾಗುವ ಈ ಪ್ರಕರಣದಲ್ಲಿ, ಮೂರರಿಂದ ಆರು ತಿಂಗಳವರೆಗೆ ಯಾವುದೇ ಆರೋಪವಿಲ್ಲದೆ ಬಂಧನ ಅಥವಾ ವಿಚಾರಣೆ ನಡೆಸಲು ಅವಕಾಶ ನೀಡುತ್ತದೆ. ಯಾವುದೇ ಮೇಲ್ಮನವಿ ಅಥವಾ ಬಂಧಿತರ ವಿರುದ್ಧ ಯಾವ ಆರೋಪಗಳನ್ನು ಹೊರಿಸಲಾಗಿದೆ ಎನ್ನುವುದರ ಕುರಿತು ಮಾಹಿತಿ ನೀಡದೆಯೇ ಬಂಧಿತರನ್ನು ಜೈಲಿನಲ್ಲಿಡಬಹುದಾಗಿದೆ.

- Advertisement -

ಗುರುವಾರ ಮುಂಜಾನೆ, ಅಕ್ರಮಿತ ವೆಸ್ಟ್ ಬ್ಯಾಂಕ್ ನ ಉತ್ತರ ಭಾಗದಲ್ಲಿರುವ ನಬ್ಲಸ್ ನ ಅಲ್ ನಜಾಹ್ ಆಸ್ಪತ್ರೆಗೆ ವೈದ್ಯಕೀಯ ಮತ್ತು ಆರೋಗ್ಯ ತಪಾಸಣೆಗಾಗಿ ಅಖ್ರಾಸ್ ರನ್ನು ಸ್ಥಳಾಂತರಿಸಲಾಯಿತು.

ಬ್ರಿಟಿಷ್ ಆದೇಶದ ಮೇರೆಗೆ ಫೆಲೆಸ್ತೀನ್ ನಲ್ಲಿ ಆಡಳಿತಾತ್ಮಕ ಬಂಧನವನ್ನು ಮೊದಲು ಜಾರಿಗೆ ತರಲಾಯಿತು.. ಆ ನಂತರ ಇಸ್ರೇಲ್ ಅದನ್ನು ವ್ಯಾಪಕವಾಗಿ ಬಳಸಿಕೊಂಡಿದೆ. ಈ ಪ್ರಕ್ರಿಯೆಯನ್ನು ವಿರೋಧಿಸಿ ಅನೇಕ ಫೆಲೆಸ್ತೀನ್ ಕೈದಿಗಳು ಉಪವಾಸ ಸತ್ಯಾಗ್ರಹ ವನ್ನು ಜೈಲಿನಲ್ಲಿ ನಡೆಸಿದ್ದಾರೆ.

ಫೆಲೆಸ್ತೀನಿಯನ್ ಕೈದಿಗಳ ಹಕ್ಕುಗಳ ಸಂಘಟನೆಯಾಗಿರುವ ಅಡಾಮೀರ್ ಪ್ರಕಾರ, 4,400 ಫೆಲೆಸ್ತೀನಿಯನ್ನರನ್ನು ಅಕ್ಟೋಬರ್  ವರೆಗೆ ಇಸ್ರೇಲ್ ಬಂಧಿಸಿದ್ದು, ಅವರಲ್ಲಿ 350 ಜನರನ್ನು ಆಡಳಿತಾತ್ಮಕ ಬಂಧನದಲ್ಲಿ ಇರಿಸಲಾಗಿದೆ ಎಂದಿದೆ.

49 ವರ್ಷದ ಅಖ್ರಾಸ್ ರನ್ನು ಜುಲೈನಲ್ಲಿ ಬಂಧಿಸಲಾಗಿತ್ತು. ಸೆಪ್ಟೆಂಬರ್ ನಲ್ಲಿ ಅವರನ್ನು ಕಪ್ಲಾನ್ ಮೆಡಿಕಲ್ ಸೆಂಟರ್ ನಲ್ಲಿ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಅಲ್-ನಜಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಜುಲೈ 27ರಂದು ಬಂಧನಕ್ಕೊಳಗಾದ ದಿನ ಆಹಾರ ಅಥವಾ ಪಾನೀಯವನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದರು. ಇಸ್ರೇಲಿನ ಆಂತರಿಕ ಗುಪ್ತಚರ ಸಂಸ್ಥೆಯ ಶಿನ್ ಬೆಟ್, ಅಖ್ರಾಸ್ ಇಸ್ಲಾಮಿಕ್ ಜಿಹಾದ್ ನ ಸದಸ್ಯ ಎಂದು ಹೇಳಿದ್ದರು

ಆರು ಮಕ್ಕಳ ತಂದೆಯಾಗಿರುವ ಅಖ್ರಾಸ್ ಗೆ 18 ವರ್ಷ ವಯಸ್ಸಿನಿಂದ ಕನಿಷ್ಠ ಐದು ಬಾರಿ ಜೈಲು ಶಿಕ್ಷೆ ಯಾಗಿದೆ. 1989ರಲ್ಲಿ ಏಳು ತಿಂಗಳ ಕಾಲ, 2004ರಿಂದ ಎರಡು ವರ್ಷ, 2009ರಲ್ಲಿ 16 ತಿಂಗಳು, 2018ರಲ್ಲಿ 11 ತಿಂಗಳು ಹಾಗೂ ಇತ್ತೀಚೆಗೆ ಜುಲೈನಲ್ಲಿ ಬಂಧಿಸಲಾಗಿತ್ತು.

Join Whatsapp