ಯೋಗಿ ಆದಿತ್ಯನಾಥ್ ಸಿಎಎ ಹೇಳಿಕೆಗೆ ನಿತೀಶ್ ಕುಮಾರ್ ಗರಂ | ಮುಸ್ಲಿಮರ ಓಲೈಕೆಗೆ ಬಿಹಾರ ಸಿಎಂ ಕಸರತ್ತು

Prasthutha|

ಪಾಟ್ನಾ : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೆ ಟಾಂಗ್ ನೀಡಿದ್ದಾರೆ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ಮೈತ್ರಿಯೊಂದಿಗೆ ಚುನಾವಣೆ ಸ್ಪರ್ಧಿಸುತ್ತಿರುವ ನಿತೀಶ್ ಕುಮಾರ್, ಮುಸ್ಲಿಮರ ಓಲೈಕೆಗೆ ಈ ಹೇಳಿಕೆ ನೀಡಿದ್ದಾರೆ.

- Advertisement -

“ಯಾರು ಈ ಎಲ್ಲಾ ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ? ಯಾರು ಇಂತಹ ಮೂರ್ಖತನದ ಮಾತುಗಳನ್ನಾಡುತ್ತಿದ್ದಾರೆ? ಜನರನ್ನು ಯಾರು ಹೊರಗೆ ಹಾಕುತ್ತಾರೆ? ಯಾರೊಬ್ಬರಿಗೂ ಅದನ್ನು ಮಾಡಲು ಧೈರ್ಯವಿಲ್ಲ. ಪ್ರತಿಯೊಬ್ಬರು ಈ ದೇಶಕ್ಕೆ ಸೇರಿದವರೇ ಆಗಿದ್ದಾರೆ, ಪ್ರತಿಯೊಬ್ಬರೂ ಭಾರತೀಯರೇ ಆಗಿದ್ದಾರೆ’’ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ನಿತೀಶ್ ಈ ಮಾತುಗಳನ್ನಾಡುವಾಗ ಯಾರೊಬ್ಬರ ಹೆಸರನ್ನು ಉಲ್ಲೇಖಿಸದೇ ಇದ್ದರೂ, ಅವರು ಯೋಗಿ ಆದಿತ್ಯನಾಥ್ ಅವರ ಮಂಗಳವಾರದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದಂತಿತ್ತು.  

- Advertisement -

ಕಂಟಿಹಾರ್ ನಲ್ಲಿ ನಡೆದ ಪಕ್ಷದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, “ನುಸುಳುವಿಕೆಗೆ ಪ್ರಧಾನಿ ಮೋದಿ ಪರಿಹಾರ ಕಂಡುಕೊಂಡಿದ್ದಾರೆ. ಸಿಎಎ ಮೂಲಕ ಅವರು ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರಿಗೆ ಭದ್ರತೆಯ ಭರವಸೆ ನೀಡಿದ್ದಾರೆ. ದೇಶದ ಭದ್ರತೆಗೆ ಧಕ್ಕೆಯುಂಟು ಮಾಡಲು ಯತ್ನಿಸುವವರನ್ನು ದೇಶದಿಂದ ಹೊರಹಾಕಲಾಗುತ್ತದೆ ಎಂದೂ ಕೇಂದ್ರ ಹೇಳುತ್ತಿದೆ. ದೇಶದ ಭದ್ರತೆ ಮತ್ತು ಪರಮಾಧಿಕಾರದ ವಿಚಾರದಲ್ಲಿ ಯಾರೇ ಗೊಂದಲ ಸೃಷ್ಟಿಸಿದರೂ ನಾವು ಅದನ್ನು ಸಹಿಸುವುದಿಲ್ಲ’’ ಎಂದು ಹೇಳಿದ್ದರು.

ಬಿಜೆಪಿ ಮತ್ತು ನಿತೀಶ್ ಅವರ ಜೆಡಿಯು ಮೈತ್ರಿಕೂಟ ರಚಿಸಿಕೊಂಡು ಚುನಾವಣೆ ಎದುರಿಸುತ್ತಿದ್ದರೂ, ಎರಡು ರಾಜ್ಯಗಳ ಸಿಎಂಗಳ ದ್ವಂದ್ವ ನಿಲುವಿನ ಹೇಳಿಕೆಗಳು ಕುತೂಹಲ ಮೂಡಿಸಿವೆ.  

Join Whatsapp