November 9, 2020

ಬಾಬರಿ ತೀರ್ಪಿಗೆ ಒಂದು ವರುಷ: ಇಂದು ಮೌನವಹಿಸಿರುವ ಪತ್ರಿಕೆಗಳು 1992ರಲ್ಲಿ ಹೇಳಿರುವುದೇನು?

ಬೆಂಗಳೂರು: 1992ರಲ್ಲಿ ಬಾಬರಿ ಧ್ವಂಸಗೊಂಡಾಗ ದೇಶದ ಪತ್ರಿಕೆಗಳು ಮತ್ತು ಅಂದಿನ ಆಡಳಿತಗಾರರು ಧ್ವಂಸವನ್ನು ತೀವ್ರವಾಗಿ ಖಂಡಿಸಿದ್ದು, ಬಾಬರಿ ಮಸ್ಜಿದ್ ಅದೇ ಸ್ಥಳದಲ್ಲಿ ಪುನರ್ ನಿರ್ಮಾಣವಾದಾಗ ಮಾತ್ರವೇ ನ್ಯಾಯದ ಸ್ಥಾಪನೆಯಾಗುವುದೆಂದು ಬರೆದಿದ್ದವು. ಇದೀಗ ಬಾಬರಿ ಮಸ್ಜಿದ್ ನ ವಿವಾದಿತ ಸ್ಥಳವನ್ನು ಧ್ವಂಸಕೋರರಿಗೆ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿಗೆ ಇಂದಿಗೆ ಒಂದು ವರುಷ. ಯಾವ ಪತ್ರಿಕೆಗಳೂ ಈ ಅನ್ಯಾಯದ ತೀರ್ಪನ್ನು ನೆನಪಿಸುವ, ಅದನ್ನು ಸರಿಪಡಿಸಬೇಕಾದ ಅಗತ್ಯವನ್ನು ಒತ್ತಿಹೇಳುವ ವರದಿ ಅಥವಾ ಸಂಪಾದಕೀಯಗಳನ್ನು ಪ್ರಕಟಿಸುವುದು ಕಾಣುತ್ತಿಲ್ಲ. ಆದರೆ ಧ್ವಂಸದ ಕರಾಳ ದಿನದ ಬಳಿಕ ಈ ಪತ್ರಿಕೆಗಳು ಏನು ಹೇಳಿದ್ದವು ಎಂಬುದನ್ನು ತಿಳಿದಿರುವುದು ಅಗತ್ಯವಾಗಿದೆ. ಏಕೆಂದರೆ ಅದು ಬಾಬರಿ ಇತಿಹಾಸದ ಒಂದು ಭಾಗವೂ ಆಗಿದೆ.

ಇಂಡಿಯನ್ ಎಕ್ಸ್ ಪ್ರೆಸ್:
‘ ಅಯೋಧ್ಯೆಯಲ್ಲಿ ನಡೆದ ಅತ್ಯಾಚಾರವು ನಮ್ಮ ರಾಷ್ಟ್ರೀಯ ಗೌರವಕ್ಕೆ ಅಪಮಾನವಾಗಿದೆ. ಭಾರತದ ಪ್ರಮುಖ ವಿರೋಧ ಪಕ್ಷವು ಧಾರ್ಮಿಕ ಗುರಿಯ ಹುಚ್ಚು ಸಾಧನೆಗಾಗಿ ಮೋಸ ಹಾಗೂ ಹೇಡಿತನವನ್ನು ಆಶ್ರಯಿಸಲು ಅತಿಯಾಗಿ ಬಯಸುವ ಪಕ್ಷವಾಗಿದೆಯೆಂದು ಈಗ ಬಯಲಾಗಿದೆ” ಎಂದು ಬರೆದಿತ್ತು.

ತನ್ನ ಸಂಪಾದಕೀಯದಲ್ಲಿ, ರಾಜಕೀಯ ಪುಕ್ಕಲುತನದಿಂದಾಗಿ ಭಾರತದ ಆಡಳಿತ ಪಕ್ಷವು ಹೊಸ ಅಧ್ಯಾಯವನ್ನು ಬರೆದಿದೆ ಎಂಬುದಾಗಿ ಪತ್ರಿಕೆ ಹೇಳಿತ್ತು. “ ಕಾಂಗ್ರೆಸ್ ಪೂರ್ವಯೋಜಿತ ಅಸಮಂಜಸತನವನ್ನು ನಿಷ್ಕ್ರಿಯತೆಯ ನಾಚಿಕೆಗೇಡಿನ ತಂತ್ರವಾಗಿ ಬದಲಾಯಿಸದೇ ಇದ್ದರೆ, ನೆವನ ಮತ್ತು ಅದ:ಪತನದ ಮೂಲಕ ಬಿಜೆಪಿಯು ರಾಜಕೀಯ ದುರ್ಲಾಭ ಪಡೆಯುವ ಇಚ್ಛೆ ತೋರದೆ ಇದ್ದಿದ್ದರೆ ಕಳೆದ ಹಲವು ವರ್ಷಗಳಿಂದ ಮಂದಿರ ಮತ್ತು ಮಸ್ಜಿದ್ ಹೆಸರಿನಲ್ಲಿ ನಡೆಯುತ್ತಿದ್ದ ಅನಿಷ್ಟಕರ ಪತನಗಳಿಂದ ಭಾರತವು ದೂರವುಳಿಯುತ್ತಿತ್ತು” ಎಂದು ಪತ್ರಿಕೆ ಬರೆದಿತ್ತು. ದೇಶದಲ್ಲಿ ಅಸ್ಥಿರಗೊಂಡ ಆತ್ಮವಿಶ್ವಾಸವನ್ನು ಪುನರ್ ನಿರ್ಮಿಸಬೇಕಾದರೆ ಮಸ್ಜಿದ್ ಅದೇ ಸ್ಥಳದಲ್ಲಿ ನಿರ್ಮಾಣಗೊಳ್ಳಬೇಕೆಂದು ಅದು ಅಭಿಪ್ರಾಯಿಸಿತ್ತು.

ಟೈಮ್ಸ್ ಆಫ್ ಇಂಡಿಯಾ:

“ಮತಾಂಧ ಶಕ್ತಿಗಳನ್ನು ಎದುರಿಸುವ ಉದ್ದೇಶವನ್ನು ತಾನು ಹೊಂದಿದ್ದೇನೆ ಎನ್ನುವ ಕೇಂದ್ರ ಸರಕಾರವು ಅದನ್ನು ಕೃತಿಗಿಳಿಸುವುದನ್ನು, ಮುಸ್ಲಿಮ್ ಅಲ್ಪಸಂಖ್ಯಾತರಿಗಾದ ಗಾಯವನ್ನು ವಾಸಿಗೊಳಿಸುವುದನ್ನು ಮತ್ತು ಸಂವಿಧಾನದ ಚೌಕಟ್ಟಿಗೆ ಅನುಗುಣವಾಗಿ ರಾಮನಿಗೆ ಸರಿಯಾದ ಗೌರವ ಅರ್ಪಿಸುವುದನ್ನು ರಾಷ್ಟ್ರವು ಕಾಯುತ್ತಿದೆ” ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಕಲ್ಯಾಣ್ ಸಿಂಗ್ ಸರಕಾರವನ್ನು ವಜಾಗೊಳಿಸುವುದು ಕೇಂದ್ರ ಸರಕಾರದ ಸಂಕಲ್ಪದ ಮೊದಲ ಸೂಚನೆಯಾಗಲಿದೆ ಎಂದು ಪತ್ರಿಕೆ ಹೇಳಿತ್ತು. “ಶಾಂತಿಯನ್ನು ಪಾಲಿಸುವಂತೆ ತನ್ನ ಸ್ವಧರ್ಮೀಯರಿಗೆ ಜಾಮಾ ಮಸ್ಜಿದ್ ನ ಶಾಹಿ ಇಮಾಮ್ ಮಾಡಿದ ಮನವಿಯನ್ನು ಇಲ್ಲಿ ಗಮನಿಸಬೇಕಾಗಿದೆ. ಮಸ್ಜಿದ್ ಧ್ವಂಸದ ನೈತಿಕ ಹೊಣೆ ಹೊತ್ತು ಬಿಜೆಪಿ ನೀಡಿದ ಹೇಳಿಕೆಗಳೇ ಅಂತಿಮವಾಗಿ ಅಯೋಧ್ಯೆಯಲ್ಲಿ ಮಹಾಪಾತಕತನ ಪ್ರಕಟವಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ದ್ವೇಷ ಮತ್ತು ಅಸಹಿಷ್ಣುತೆಯಿಂದ ರಕ್ಷಿಸುವುದಕ್ಕಾಗಿ ಮುಂದಿನ ದಿನಗಳಲ್ಲಿ ಅತ್ಯಂತ ಕಠಿಣ ಹಾಗೂ ಬಲವಾದ ಹೆಜ್ಜೆಯನ್ನಿಡುವ ಅವಶ್ಯಕತೆಯಿದೆ” ಎಂದು ದಿ ಟೈಮ್ಸ್ ಆಫ್ ಇಂಡಿಯಾ ಬರೆದಿತ್ತು.

ದಿ ಸ್ಟೇಟ್ಸ್ ಮ್ಯಾನ್

“ರಾಷ್ಟ್ರಪಿತ (ಮಹಾತ್ಮಾ ಗಾಂಧೀಜಿ) ಈಗ ಜೀವಿಸಿರುತ್ತಿದ್ದರೆ ಧ್ವಂಸಗೊಳಿಸಿದ ಹಿಂದೂಗಳಿಂದಲೇ ಬಾಬ್ರಿ ಮಸ್ಜಿದ್ ಪುನರ್ ನಿರ್ಮಿಸಲ್ಪಡಬೇಕೆಂದು ಹೇಳುತ್ತಿದ್ದರು. ಮತ್ತು ಸಮೀಪದಲ್ಲೇ ರಾಮನ ಮಂದಿರವನ್ನು ಕಟ್ಟುವಂತೆ ಹಾಗೂ ಅದಕ್ಕೆ ಮುಸ್ಲಿಮರು ನೆರವಾಗುವಂತೆ ಕರೆ ಕೊಡುತ್ತಿದ್ದರು” ಎಂದು ದಿ ಸ್ಟೇಟ್ಸ್ ಮ್ಯಾನ್ ಬರೆದಿತ್ತು. “1948ರ ಜನವರಿ 30ರಂದು ಮಹಾತ್ಮಾಗಾಂಧಿ ಹತ್ಯೆಗೈಯ್ಯಲ್ಪಟ್ಟಿದ್ದರು. ಡಿಸೆಂಬರ್ 6ರ ರವಿವಾರದಂದು ಭಾರತದ ಕನಸಿನ ಭಾಗವೊಂದು ಕೊನೆಯುಸಿರೆಳೆಯಿತು” ಎಂದು ಪತ್ರಿಕೆ ಬಣ್ಣಿಸಿತ್ತು.

ದಿ ಹಿಂದೂ

ಮಧ್ಯಕಾಲೀನ ಯುಗದ ಮೃಗೀಯ ಪ್ರತೀಕಾರದ ಸಂಪ್ರದಾಯವನ್ನು ಬಿಂಬಿಸುವ ಅನಾಗರಿಕತೆ ಮತ್ತು ಕ್ರೌರ್ಯದೊಂದಿಗೆ ವಿವಾದಿತ ಮಸ್ಜಿದನ್ನು ನೆಲಸಮಗೊಳಿಸಲಾಯಿತು. ಮಸ್ಜಿದ್ ಧ್ವಂಸವು ಭಾರತದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗುರುತಿಗೆ ಪ್ರಾಣಾಂತಕ ಹೊಡೆತವಾಗಿದೆ” ಎಂದು ದಿ ಹಿಂದೂ ಅಭಿಪ್ರಾಯಿಸಿತ್ತು. “ಭಾರತದ ಪ್ರಜಾಸತ್ತೆಯ ಬದ್ಧತಯನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಪರಮತ ವೈರತ್ವದಿಂದ ಭಾರತ ಮುಕ್ತವೆಂಬ ಸೂಚನೆಯಾಗಿ, ಮೊದಲ ಹೆಜ್ಜೆಯಾಗಿ ಧ್ವಂಸಗೈಯ್ಯಲ್ಪಟ್ಟ ಮಸ್ಜಿದ್ ಪುನರ್ ನಿರ್ಮಾಣವಾಗಬೇಕು” ಎಂದು ಪತ್ರಿಕೆ ಸಲಹೆ ನೀಡಿತ್ತು.

ದಿ ಹಿಂದುಸ್ತಾನ್ ಟೈಮ್ಸ್:

ಅಯೋಧ್ಯೆಯಲ್ಲಿ ಏನು ನಡೆದಿದೆಯೋ ಅದಕ್ಕಾಗಿ ರಾಷ್ಟ್ರವು ನಾಚಿಕೆಯಿಂದ ತಲೆತಗ್ಗಿಸಬೇಕಾಗಿದೆ” ಎಂದು ದಿ ಹಿಂದುಸ್ತಾನ್ ಟೈಮ್ಸ್ ಪ್ರಕಟಿಸಿತ್ತು.

ಟಾಪ್ ಸುದ್ದಿಗಳು