ಸುಸೈಡ್ ನೋಟ್ ನುಂಗಿ ಕೈದಿ ಆತ್ಮಹತ್ಯೆ!

Prasthutha|

ಮುಂಬೈ: ದೋಷ ಸಾಬೀತುಗೊಂಡ 31ರ ಹರೆಯದ ಕೈದಿಯೊಬ್ಬ ನಾಶಿಕ್ ಜೈಲಿನಲ್ಲಿ ನೇಣುಬಿಗಿದು ಸಾವನ್ನಪ್ಪಿದ್ದಾನೆ. ಸಂತ್ರಸ್ತನನ್ನು ಹತ್ಯಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಮಾರು 14 ವರ್ಷಗಳಿಂದ ಜೈಲಿನಲ್ಲಿದ್ದ ಅಸ್ಗರ್ ಅಲಿ ಮನ್ಸೂರಿ ಎಂದು ಗುರುತಿಸಲಾಗಿದೆ. ಮಾಸ್ಕ್ ಗಳಲ್ಲಿ ಕಾಣಸಿಗುವ ಹಲವು ಹಿಗ್ಗು (Elastic) ಪಟ್ಟಿಗಳನ್ನು ಒಟ್ಟು ಸೇರಿಸಿ ಜೈಲು ಕೋಣೆಯ ಮೇಲ್ಛಾವಣಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -

ಹಲವು ಜೈಲು ಸಿಬ್ಬಂದಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದನೆನ್ನಲಾದ ಮನ್ಸೂರಿ ತನ್ನ ಸಾವಿನ ನಿಜವಾದ ಕಾರಣವನ್ನು ಪೊಲೀಸರು ಮುಚ್ಚಿಹಾಕಬಹುದೆಂದು ಭಾವಿಸಿದ್ದ. ಹಾಗಾಗಿ ಆತ್ಮಹತ್ಯೆಗೆ ಮೊದಲು ಎರಡು ಪುಟಗಳ ವಿವರಣೆಯಿರುವ ಸುಸೈಡ್ ನೋಟನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಸುತ್ತಿ ನುಂಗಿದ್ದಾನೆ. ಮರಣೋತ್ತರ ಪರೀಕ್ಷೆಯ ವೇಳೆ ಅವರ ಉದರದಲ್ಲಿ ಸುಸೈಡ್ ನೋಟ್ ಪತ್ತೆಯಾಗಿದೆ.

ಮನ್ಸೂರಿ ಸುಸೈಡ್ ನೋಟ್ ನಲ್ಲಿ ಐವರು ಜೈಲು ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದ ಎಂದು ಪೊಲೀಸ್ ಇನ್ ಸ್ಪೆಕ್ಟರ್ ಮನೀಶಾ ರಾವತ್ ತಿಳಿಸಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.

- Advertisement -

ಜೈಲಾಧಿಕಾರಿಗಳಾದ ಬವಿಸ್ಕರ್, ಚಾವಣ್, ಸರ್ಪದೆ, ಗೀತೆ ಮತ್ತು ಕರ್ಕರ್ ಹೆಸರುಗಳನ್ನು ಸುಸೈಡ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ದೂರು ಸಲ್ಲಿಸುವಂತೆ ಕುಟುಂಬವನ್ನು ಕೇಳಲಾಗಿದೆಯೆಂದು ರಾವುತ್ ಹೇಳಿದ್ದಾರೆ.

“ಪತ್ರವನ್ನು ಮರಾಠಿಯಲ್ಲಿ ಬರೆಯಲಾಗಿದೆ. ಆದರೆ ಆತನಿಗೆ ಓದು-ಬರಹ ತಿಳಿದಿರಲಿಲ್ಲವೆಂದು ಕುಟುಂಬ ಹೇಳ್ದಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ರಾವುತ್ ಹೇಳಿದ್ದಾರೆ.

ಮನ್ಸೂರಿ ಸಾವಿನ ಕುರಿತು ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಅವರು ನಾಶಿಕ್ ತಲುಪುವಷ್ಟರಲ್ಲಿ ಮನ್ಸೂರಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. “ನಾವು ಕಳೆದ ಆರು ತಿಂಗಳುಗಳಿಂದ ಆತನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ವೀಡಿಯೊ ಕರೆಯಲ್ಲಿ ಅವನೊಂದಿಗೆ ಸಂಪರ್ಕದಲ್ಲಿದ್ದೆವು” ಎಂದು ಮನ್ಸೂರಿ ಸಹೋದರಿ ರುಬೀನಾ ತಿಳಿಸಿದ್ದಾರೆ.

ಮನ್ಸೂರಿಗೆ ಪತ್ರವನ್ನು ಬರೆಯಲು ಯಾರೋ ನೆರವಾಗಿರಬೇಕೆಂದು ಆಕೆಯ ಸಹೋದರಿ ಅಭಿಪ್ರಾಯಿಸಿದ್ದಾರೆ. “ಸುಸೈಡ್ ನೋಟನ್ನು ಸಿದ್ಧಪಡಿಸಲು ಯಾರೋ ಅವನಿಗೆ ಸಹಾಯ ಮಾಡಿದ್ದಾರೆ. ಆದರೆ ಸಾಯುವುದನ್ನು ತಡೆಯುವುದಕ್ಕೆ ಹೋಗಲಿಲ್ಲ” ಎಂದು ರುಬೀನಾ ದು:ಖ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯೋರ್ವನ ಹತ್ಯೆಯಲ್ಲಿ ಆರೋಪ ಸಾಬೀತುಗೊಂಡು ಮನ್ಸೂರಿ ಕಳೆದ ಹಲವು ವರ್ಷಗಳಿಂದ ನಾಶಿಕ್ ಜೈಲಿನಲ್ಲಿದ್ದ. ಅಪರಾಧವನ್ನು ಮಾಡುವಾಗ ಆತ ಅಪ್ರಾಪ್ತನಾಗಿದ್ದ ಎಂದು ಸಹೋದರಿ ತಿಳಿಸಿದ್ದಾಳೆ.

”ಪ್ರಕರಣದಲ್ಲಿ ಪೊಲೀಸರು ತಂದೆಯನ್ನು ಬಂಧಿಸಿದಾಗ ಮನ್ಸೂರಿ ಸ್ವತ: ತಪ್ಪೊಪ್ಪಿಕೊಂಡು 14 ವರ್ಷಗಳ ಕಾಲ ಜೈಲಿನಲ್ಲುಳಿದ. ಅವನ ಒಳ್ಳೆಯ ಗುಣಕ್ಕಾಗಿ ಶೀಘ್ರದಲ್ಲೇ ಅವನು ಬಿಡುಗಡೆಗೊಂಡು ಕುಟುಂಬವನ್ನು ಸೇರಲಿದ್ದಾನೆಂದು ನಾವು ಭಾವಿಸಿದ್ದೆವು” ಎಂದು ರುಬೀನಾ ಹೇಳಿದ್ದಾರೆ.

ಸಹ ಕೈದಿಗಳು ಹೇಳುವುದೇನು?

ಜೈಲಾಧಿಕಾರಿಗಳ ಕಿರುಕುಳದ ಕುರಿತು ಮನ್ಸೂರಿಯ ಆರೋಪಗಳನ್ನು ಸಹಕೈದಿಗಳು ದೃಢೀಕರಿಸಿದ್ದಾರೆ. ಮನ್ಸೂರಿಯನ್ನು ಬೆಂಬಲಿಸಿ ಆರು ದೋಷಿ ಕೈದಿಗಳು ಬರೆದ ಪತ್ರಗಳು ‘ದಿ ವೈರ್’  ಪಡೆದಿದೆ.

“ಅಸ್ಗರ್ ಯಾವಾಗಲೂ ಸಂತಸದಿಂದಿರುತ್ತಿದ್ದ. ಸುಬೆದಾರ್ ಬಾವಿಸ್ಕರ್ ಹಲವು ಸಮಯಗಳಿಂದ ಅವನಿಗೆ ಕಿರುಕುಳ ನೀಡುತ್ತಿದ್ದರು. ಬಾವಿಸ್ಕರ್ ಜೈಲಿಗೆ ಗಾಂಜಾ ಮತ್ತು ಸೆಲ್ ಫೋನ್ ಗಳನ್ನು ಸಾಗಿಸುತ್ತಿದ್ದರು.  ಅಸ್ಗರ್ ಉನ್ನತಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡುತ್ತಿದ್ದನೆಂದು ಅವರು ಅನುಮಾನಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಸ್ಗರ್ ನನ್ನು ಇತರ ಕೈದಿಗಳಿಂದ ಬೇರ್ಪಡಿಸಿ ಪ್ರತ್ಯೇಕ ಸೆಲ್ ಗೆ ವರ್ಗಾವಣೆಯಾಗುವಂತೆ ನೋಡಿಕೊಂಡಿದ್ದರು” ಎಂದು ಕೈದಿಯೊಬ್ಬ ಹೇಳಿದ್ದಾನೆ.

ಕೈದಿಗಳು ತಮಗೆ ಬೆದರಿಕೆಯಿರುವುದಾಗಿ ಹೇಳಿದ್ದಾರೆ. “ನಾನು ಪತ್ರವನ್ನು ಬರೆದಿದ್ದೇನೆಂದು ಅವರು ತಿಳಿದರೆ, ಅವರು (ಆರೋಪಿ ಅಧಿಕಾರಿಗಳು) ನನ್ನನ್ನು ಕೊಲ್ಲುತ್ತಾರೆ ಅಥವಾ ನನ್ನ ಮೇಲೆ ದಾಳಿ ನಡೆಸುವಂತೆ ಕೈದಿಗಳಿಗೆ ಸೂಚಿಸುತ್ತಾರೆ” ಎಂದು ಇನ್ನೋರ್ವ ಕೈದಿ ಬರೆದಿದ್ದಾರೆ.
ಬಾಂಬೆ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ, ಜೈಲುಗಳ ಮಹಾನಿರೀಕ್ಷಕ, ನಾಶಿಕ್ ಜಿಲ್ಲೆಯ ಪ್ರಧಾನ ನ್ಯಾಯಾಧೀಶ ಮತ್ತು ಇತರರಿಗೆ ಕೈದಿಗಳು ಪತ್ರವನ್ನು ಬರೆದಿದ್ದಾರೆ. ಮನ್ಸೂರಿ ಸುಸೈಡ್ ನೋಟ್ ನಲ್ಲಿ ಉಲ್ಲೇಖಿಸಿದ ಎಲ್ಲಾ ಜೈಲಾಧಿಕಾರಿಗಳ ವಿರುದ್ಧ ಕ್ರಮವಾಗಬೇಕೆಂದು ಪ್ರತಿಯೊಬ್ಬ ಕೈದಿಗಳು ಕೋರಿದ್ದಾರೆ.

ಜೈಲಾಧಿಕಾರಿ ಬಾವಿಸ್ಕರ್ ತನ್ನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಕೈದಿಗಳನ್ನು ಬೆಂಬಲಿಸುತ್ತಾರೆ ಮತ್ತು ಇತರರನ್ನು ಶಿಕ್ಷಿಸುತ್ತಾರೆ ಎಂದು ಇನ್ನೋರ್ವ ಕೈದಿ ಪತ್ರ ಬರೆದಿದ್ದಾನೆ. ಹಲವು ಸಂದರ್ಭಗಳಲ್ಲಿ ಬಾವಿಸ್ಕರ್ ಅಸ್ಗರ್ ನನ್ನು ಸಾರ್ವಜನಿಕವಾಗಿ ನಿಂದಿಸಿದ್ದರು ಮತ್ತು ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿದ್ದರು ಎಂದು ಆತ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

Join Whatsapp