November 17, 2020

ಮಧ್ಯಪ್ರದೇಶದಲ್ಲಿ ಶೀಘ್ರದಲ್ಲೇ ‘ಲವ್ ಜಿಹಾದ್’ಗೆ ಐದು ವರ್ಷದ ಜೈಲು ಶಿಕ್ಷೆಯ ಕಾನೂನು

ಭೋಪಾಲ್ : ‘ಲವ್ ಜಿಹಾದ್’ ತಡೆಗೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ಕಠಿಣ ಕಾನೂನನ್ನು ಶೀಘ್ರವೇ ಜಾರಿಗೊಳಿಸಲಿದ್ದೇವೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ‘ಲವ್ ಜಿಹಾದ್’ ವಿರುದ್ಧ ಕಾನೂನು ತರಲಿದ್ದೇವೆ ಎಂದು ಕರ್ನಾಟಕ ಮತ್ತು ಹರ್ಯಾಣ ಸರಕಾರಗಳು ಪ್ರಕಟಿಸಿದ ಬೆನ್ನಲ್ಲೇ ಮಧ್ಯಪ್ರದೇಶ ಬಿಜೆಪಿ ಸರಕಾರವೂ ಈ ತೀರ್ಮಾನ ಕೈಗೊಂಡಿದೆ.

ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ‘ಲವ್ ಜಿಹಾದ್’ ವಿರುದ್ಧ ಮಸೂದೆ ಮಂಡಿಸಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ.
‘ಲವ್ ಜಿಹಾದ್’ಗೆ ಸಹಕರಿಸುವವರನ್ನೂ ಪ್ರಮುಖ ಆರೋಪಿಗೆ ಸಮಾನ ಎಂದು ಪರಿಗಣಿಸಲಾಗುತ್ತದೆ ಮತ್ತು ಪ್ರಕರಣವನ್ನು ಜಾಮೀನು ರಹಿತ ವಿಭಾಗದಲ್ಲಿ ಸೇರ್ಪಡಿಸಲಾಗುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.

ಮದುವೆಗಾಗಿ ಸ್ವಯಂ ಪ್ರೇರಿತ ಮತಾಂತರಕ್ಕೆ ಒಂದು ತಿಂಗಳು ಮುಂಚಿತವಾಗಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

‘ಲವ್ ಜಿಹಾದ್’ ಎನ್ನುವುದು ಇಲ್ಲವೇ ಇಲ್ಲ ಎಂದು ಕೇಂದ್ರ ಸರಕಾರ ಈ ಹಿಂದೆ ಅಧಿಕೃತವಾಗಿ ಹೇಳಿಕೆ ನೀಡಿದ್ದರೂ, ರಾಜ್ಯ ಬಿಜೆಪಿ ಸರಕಾರಗಳು ರಾಜಕೀಯ ದುರುದ್ದೇಶದಿಂದ, ಮತ್ತೊಮ್ಮೆ ತಮ್ಮ ವಿಭಜನಕಾರಿ ನೀತಿಗಾಗಿ, ಕಾಲ್ಪನಿಕ ‘ಲವ್ ಜಿಹಾದ್’ ಹುಳವನ್ನು ಮತದಾರರ ತಲೆಯೊಳಗೆ ಹರಿಬಿಡುತ್ತಿವೆ.

ಟಾಪ್ ಸುದ್ದಿಗಳು

ವಿಶೇಷ ವರದಿ