ಪತ್ರಕರ್ತ ಕಾಪ್ಪನ್ ಗೆ ಜಾಮೀನು ನಿರಾಕರಣೆ: ಬಂಧನ ಕುರಿತು ಯುಪಿ ಸರಕಾರಕ್ಕೆ ನೊಟೀಸ್

Prasthutha|

ಹೊಸದಿಲ್ಲಿ: ಹಥ್ರಾಸ್ ಗೆ ತೆರಳುತ್ತಿರುವಾಗ ಬಂಧಿತರಾದ ಕೇರಳ‌ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರಕಾರಕ್ಕೆ ನೊಟೀಸು ಜಾರಿ ಮಾಡಿದೆ ಎಂದು ಲೈವ್ ಲಾ ವರದಿ ಮಾಡಿದೆ.

- Advertisement -

ಅ.5ರಂದು 20ರ ಹರೆಯದ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ವರದಿ ಮಾಡುವುದಕ್ಕಾಗಿ ಹಥ್ರಾಸ್ ಗೆ ತೆರಳುತ್ತಿದ್ದಾಗ ಕಪ್ಪನ್ ರನ್ನು ಬಂಧಿಸಲಾಗಿತ್ತು. ಪತ್ರಕರ್ತನ ವಿರುದ್ಧ ಯು.ಎ.ಪಿ.ಎ ಪ್ರಕರಣವನ್ನು ದಾಖಲಿಸಲಾಗಿತ್ತು.

ಮೂಲಭೂತಹಕ್ಕುಗಳ ಉಲ್ಲಂಘನೆಗಾಗಿ 32ನ ವಿಧಿಯಡಿ ಸಾಂವಿಧಾನಿಕ ಪರಿಹಾರ ಕೋರಿ ಕೇರಳದ ಕಾರ್ಯ ನಿರತ ಪತ್ರಕರ್ತರ ಸಂಘ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

- Advertisement -

ಕಾನೂನು ನೆರವು ಮತ್ತು ಕುಟುಂಬದ ಸಂಪರ್ಕಕ್ಕೆ ಅವಕಾಶ ಒಳಗೊಂಡಂತೆ ಪ್ರಾಥಮಿಕ ಹಕ್ಕುಗಳ ನೆರವೇರಿಕೆಗೆ ಅರ್ಜಿ ಕೋರಿತ್ತು. ಮಥುರಾ ಜೈಲಿನೊಳಗೆ ಬಂಧಿತರಿಗಾದ ಮಾನವಹಕ್ಕುಗಳ ಉಲ್ಲಂಘನೆಯ ಕುರಿತು ತನಿಖೆ ನಡೆಸಲು ಮಥುರಾ ಜಿಲ್ಲಾ ನ್ಯಾಯಾಧೀಶರು ಅಥವಾ ಓರ್ವ ಹೈಕೋರ್ಟ್ ನ್ಯಾಯಮೂರ್ತಿಗೆ ಸೂಚಿಸಬೇಕೆಂದು ಅದು ಒತ್ತಾಯಿಸಿತ್ತು.

ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್, ಕಾಪ್ಪನ್ ಗೆ ಜಾಮೀನು ನೀಡಬೇಕೆಂದು ಕೋರಿದರು. ವಕೀಲರು ಜೈಲಿನಲ್ಲಿ  ಕಾಪ್ಪನ್ ರನ್ನು ಭೇಟಿಮಾಡಲು ಹೋಗಿದ್ದು ಅವರಿಗೆ ಅವಕಾಶ ನಿರಾಕರಿಸಲಾಗಿತ್ತು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.  “ಎಫ್.ಐ.ಆರ್ ಆತನ (ಸಿದ್ದೀಕ್ ಕಾಪ್ಪನ್) ಹೆಸರನ್ನು ಮತ್ತು ಯಾವುದೇ ಅಪರಾಧಗಳನ್ನು ಹೆಸರಿಸಿಲ್ಲ. ಅಕ್ಟೋಬರ್ 5ರಿಂದ ಆತ ಜೈಲಿನಲ್ಲಿದ್ದಾನೆ” ಎಂದು ಸಿಬಲ್ ಹೇಳಿದರು.

ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡುತ್ತಾ  ಮೊದಲು ಅಲಹಾಬಾದ್ ಹೈಕೋರ್ಟನ್ನು ಸಂಪರ್ಕಿಸುವ ಬದಲು ಯಾಕಾಗಿ ಸುಪ್ರೀಂ ಕೋರ್ಟನ್ನು ನೇರವಾಗಿ ಸಂಪರ್ಕಿಸಲಾಗಿದೆಯೆಂದು ಕೇಳಿದೆ.


“ನಾವು ಪ್ರಕರಣವನ್ನು ನೋಡಲು ಅರ್ಹರಲ್ಲ. ನೀವು ಯಾಕಾಗಿ ಹೈಕೋರ್ಟ್ ಗೆ ಹೋಗಕೂಡದು” ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಪ್ರಶ್ನಿಸಿದ್ದಾರೆ.

“ನಾವು 32ನೆ ವಿಧಿಯನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸುತ್ತಿದ್ದೇವೆ. 32ನೆ ವಿಧಿಗೆ ಸಂಬಂಧಿಸಿದ ಅರ್ಜಿಗಳ ಸರಣಿಯೇ ಇವೆ” ಎಂದು ನ್ಯಾ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣ್ಯನ್ ರನ್ನೊಳಗೊಂಡ ಪೀಠ ಹೇಳಿತು.

ಮೂಲಭೂತ ಹಕ್ಕುಗಳ ಉಲ್ಲಂಘನೆಯಾದರೆ ಪರಿಹಾರವೊದಗಿಸುವ ಅಧಿಕಾರವನ್ನು ಸಂವಿಧಾನದ 32 ನೆ ವಿಧಿ ಸುಪ್ರೀಂ ಕೋರ್ಟ್ ಗೆ ನೀಡಿದೆ.

ವಿಧಿಯನ್ನು ಬಳಸಿದ ಈ ಹಿಂದಿನ ಉದಾಹರಣೆಗಳನ್ನು ಕಪಿಲ್ ಸಿಬಲ್ ಉಲ್ಲೇಖಿಸಿದರು. ಆಗ ಮುಖ್ಯ ನ್ಯಾಯಮೂರ್ತಿಗಳು “ಸರಿ. ನಾವು ಕೇವಲ ನೊಟೀಸು ಹೊರಡಿಸುತ್ತೇವೆ. ಆದಾಗ್ಯೂ ನಾವು ನಿಮ್ಮನ್ನು ಹೈಕೋರ್ಟ್ ಗೆ ಕಳುಹಿಸಬಲ್ಲೆವು” ಎಂದರು.

ಜಾಮೀನಿಗಾಗಿ ಅಲಹಾಬಾದ್ ಹೈಕೋರ್ಟನ್ನು ಸಂಪರ್ಕಿಸುವಂತೆ ಈ ಹಿಂದೆಯೂ ಸುಪ್ರೀಂ ಕೋರ್ಟ್ ಕೇರಳ ಪತ್ರಕರ್ತನನ್ನು ಕೇಳಿತ್ತು. ಹೈಕೋರ್ಟ್ ನಲ್ಲಿ ಪರಿಹಾರ ದೊರೆಯದೇ ಇದ್ದರೆ ಇಲ್ಲಿಗೆ ಮರಳಬಹುದೆಂದು ಹೇಳಿತ್ತು.

Join Whatsapp