ಅದಾನಿಗೆ ಏಳನೇ ಬಾರಿ ಲಾಭವಾಗುವಂತಹ ತೀರ್ಪು ನೀಡಿ ನಿವೃತ್ತರಾದ ನ್ಯಾ. ಅರುಣ್ ಮಿಶ್ರಾ

Prasthutha|

ನವದೆಹಲಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ತಮ್ಮ ನಿವೃತ್ತಿಗೆ ಮೊದಲು ಕೊನೆಯದಾಗಿ ನೀಡಿರುವ ತೀರ್ಪು, ದೇಶದ ಎರಡನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯ ಮಾಲಕತ್ವದ ಅದಾನಿ ಗ್ರೂಪ್ ಕಂಪೆನಿಗೆ 5,000 ಕೋಟಿ ಲಾಭ ತಂದುಕೊಡುತ್ತಿದೆ ಎಂದು ‘ಗೌರಿ ಲಂಕೇಶ್ ನ್ಯೂಸ್’ ವೆಬ್ ವಾಹಿನಿ ವರದಿ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ನ್ಯಾ. ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಅದಾನಿ ಗ್ರೂಪ್ ಗೆ ಸಂಬಂಧಿಸಿದ ಏಳು ಪ್ರಕರಣಗಳಲ್ಲಿ ತೀರ್ಪು ನೀಡಿದ್ದು, ಅವು ಆ ಕಂಪೆನಿಯ ಪರವಾಗಿವೆ.

- Advertisement -

2019ರ ಆಗಸ್ಟ್ ನಲ್ಲಿ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಆಗಿನ ಸಿಜೆಐ ರಂಜನ್ ಗೊಗೊಯಿಗೆ ಪತ್ರ ಬರೆದು, ನ್ಯಾ. ಅರುಣ್ ಮಿಶ್ರಾ ಆಲಿಸಿದ ಅದಾನಿ ಗ್ರೂಪ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹಲವಾರು ಅಸಮರ್ಪಕತೆಗಳಿರುವುದರ ಬಗ್ಗೆ ಗಮನ ಸೆಳೆದಿದ್ದರು. ನ್ಯಾ. ಅರುಣ್ ಮಿಶ್ರಾ ತಮ್ಮ ಯಾವೆಲ್ಲಾ ತೀರ್ಪುಗಳಲ್ಲಿ ಅದಾನಿ ಗ್ರೂಪ್ ಪರ ಇದ್ದರು ಎಂಬ ಕುರಿತ ಮಾಹಿತಿಯುಳ್ಳ ವರದಿಯನ್ನು ‘ನ್ಯೂಸ್ ಕ್ಲಿಕ್’ ನಲ್ಲಿ ಅಬೀರ್ ದಾಸ್ ಗುಪ್ತಾ ಮತ್ತು ಪ್ರಾಂಜೊಯ್ ಗುಜಾ ವರದಿ ಮಾಡಿದ್ದಾರೆ.

ಈ ವರದಿಯಲ್ಲಿ ಪ್ರಕಟವಾದ ಅಂಶಗಳಿಂದ, ನ್ಯಾ. ಅರುಣ್ ಮಿಶ್ರಾ ತೀರ್ಪುಗಳು ಅದಾನಿ ಗ್ರೂಪ್ ಗೆ ಸಾವಿರಾರು ಕೋಟಿ ರೂ. ಸಾರ್ವಜನಿಕ ನಿಧಿಯಿಂದ ಲಾಭವಾಗಿರುವ ಬಗ್ಗೆ ಗಮನ ಸೆಳೆಯಲಾಗಿದೆ.

- Advertisement -

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿ ‘ನ್ಯೂಸ್ ಕ್ಲಿಕ್’ ವರದಿಯಲ್ಲಿ, ಅಬೀರ್ ದಾಸ್ ಗುಪ್ತಾ ಮತ್ತು ಪ್ರಾಂಜೊಯ್ ಗುಜಾ ವಿವರಗಳನ್ನು ನೀಡಿದ್ದಾರೆ. ಅದಾನಿ ಪವರ್ ರಾಜಸ್ಥಾನ್ ಲಿಮಿಟೆಡ್ (ಎಪಿಆರ್ ಎಲ್) ಅಲ್ಲಿನ ಸಾರ್ವಜನಿಕ ಮಾಲಕತ್ವದ ವಿದ್ಯುತ್ ವಿತರಣಾ ಕಂಪೆನಿಗಳಿಂದ ನಷ್ಟ ಪರಿಹಾರ ಕೋರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅದಾನಿ ಕಂಪೆನಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಬಿಡ್ಡಿಂಗ್ ಮೂಲಕ ವಿದ್ಯುತ್ ಪೂರೈಕೆಯ ಗುತ್ತಿಗೆ ರಾಜಸ್ಥಾನ ಸರಕಾರದಿಂದ ಎಆರ್ ಪಿಎಲ್ ಗೆ ಲಭ್ಯವಾಗಿದೆ.

ನ್ಯಾ. ಅರುಣ್ ಮಿಶ್ರಾ ಮತ್ತು ಬಿಜೆಪಿ : ಮಾಜಿ ಸಿಜೆಐಗಳ ಭ್ರಷ್ಟಾಚಾರ ಮತ್ತು ಬಿಜೆಪಿ ಹಾಗೂ ಸಿಜೆಐ ನಡುವಿನ ನಂಟಿನ ಕುರಿತಂತೆ ವಿವಾದಿತ ಟ್ವೀಟ್ ಮಾಡಿದ್ದ ಪ್ರಶಾಂತ್ ಭೂಷಣ್ ರನ್ನು ದೋಷಿ ಎಂದು ಘೋಷಿಸಿದ್ದ ನ್ಯಾಯಪೀಠದ ನೇತೃತ್ವ ನ್ಯಾ. ಅರುಣ್ ಮಿಶ್ರಾ ಹೊಂದಿದ್ದರು.
2014ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ. ಅರುಣ್ ಮಿಶ್ರಾ, ಬಿಜೆಪಿ ನಂಟಿರುವ ಹಲವಾರು ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದರು. 2015ರಲ್ಲಿ, 2002ರ ಗುಜರಾತ್ ಗಲಭೆಗೆ ಸಂಬಂಧಿಸಿ ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಪೀಠದಲ್ಲಿ ನ್ಯಾ. ಅರುಣ್ ಮಿಶ್ರಾ ಕೂಡ ಇದ್ದರು. ಹಿಂಸಾತ್ಮಕ ದಾಳಿಗಳು ನಡೆಯಲು ಅವಕಾಶ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಗಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ನಿರ್ದೇಶಿಸಿದ್ದರು ಎಂದು ಸಂಜೀವ್ ಭಟ್ ಆಪಾದಿಸಿದ್ದರು. 2017ರಲ್ಲಿ ‘ಸಹರಾ ಬಿರ್ಲಾ’ ಪೇಪರ್ ಗಳಿಗೆ ಸಂಬಂಧಿಸಿದ ಅರ್ಜಿಯನ್ನು ನ್ಯಾ. ಮಿಶ್ರಾ ವಜಾಗೊಳಿಸಿದ್ದರು. ವಿವಿಧ ಸಾರ್ವಜನಿಕ ಸೇವಕರಿಗೆ ಹಣ ಪಾವತಿ ಮಾಡಿದ್ದ ಬಗ್ಗೆ ಮತ್ತು ಅದರಲ್ಲಿ ಮುಖ್ಯವಾಗಿ ಸಹರಾ ಗ್ರೂಪ್ ನ ಹಿರಿಯ ಅಧಿಕಾರಿಯೊಬ್ಬರು ಗುಜರಾತ್ ಸಿಎಂ ಆಗಿದ್ದಾಗ ನರೇಂದ್ರ ಮೋದಿಗೆ 25 ಕೋಟಿ ರೂ. ನೀಡಿದ್ದ ಬಗ್ಗೆಯೂ ಈ ಪೇಪರ್ ಒಳಗೊಂಡಿತ್ತು.

ಫೋಟೊ ಕೃಪೆ : ಗೌರಿ ಲಂಕೇಶ್ ನ್ಯೂಸ್

Join Whatsapp