“ಭಾಷಾ ಅಹಂಕಾರದ ಸಂಕೇತ ಹಿಂದಿ ದಿವಸ”ಕ್ಕೆ ಕುಮಾರಸ್ವಾಮಿ ವಿರೋಧ | ನ.1ಕ್ಕೆ ದೇಶಾದ್ಯಂತ ‘ಕನ್ನಡ ದಿನ’ ಆಚರಣೆಗೆ ಒತ್ತಾಯ

Prasthutha|

ಬೆಂಗಳೂರು : ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತವೇ ಸಿಡಿದೆದ್ದಿರುವಾಗ, ಇಂದು (ಸೆ.14) ಆಚರಿಸಲಾಗುತ್ತಿರುವ ‘ಹಿಂದಿ ದಿವಸ’ಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಹಿಂದಿ ದಿವಸವನ್ನು ಭಾಷಾ ಅಹಂಕಾರದ ಸಂಕೇತ ಎಂದು ಬಣ್ಣಿಸಿದ್ದಾರೆ.

- Advertisement -

“ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆಗಳನ್ನು ಒಡಲಲ್ಲಿಟ್ಟುಕೊಂಡ ಭಾರತದಲ್ಲಿ ಕನ್ನಡಿಗರೂ ಸೇರಿದಂತೆ ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹಲವು ಮಾರ್ಗಗಳ ಮೂಲಕ ಹೇರಲಾಗುತ್ತಿದೆ. ಇಂದಿನ #HindiDiwas ಕೂಡ ಅಂಥದ್ದೇ ಅಪಮಾರ್ಗ. ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ’’ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

“ಹಿಂದಿ ರಾಷ್ಟ್ರ ಭಾಷೆಯಲ್ಲ, ರಾಷ್ಟ್ರ ಭಾಷೆ ಎಂಬ ಕಲ್ಪನೆ ಸಂವಿಧಾನದಲ್ಲಿಲ್ಲ. ಆದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವ, ಅದರಲ್ಲೂ ರಾಜಕೀಯ ಮಾಡುವ ಪ್ರಯತ್ನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದು ಈಗ ವಿಪರೀತಕ್ಕೆ ಹೋಗಿದೆ. ದೇಶದ ಇತರೇ ಭಾಷಿಕರು ಇಂಥ ಪ್ರಯತ್ನಗಳ ವಿರುದ್ಧ ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು’’ ಎಂದು ಅವರು ಹೇಳಿದ್ದಾರೆ.

- Advertisement -

“ಹಿಂದಿ ಹೇರಿಕೆಗೆ ಕಲಿಕೆ ನೆಪ ನೀಡಲಾಗುತ್ತಿದೆ. ಕಲಿಕೆ ಎಂದಿಗೂ ಆಯ್ಕೆಯೇ ಹೊರತು ಹೇರಿಕೆಯಿಂದ ಕಲಿಕೆಯಾಗಲು ಸಾಧ್ಯವಿಲ್ಲ. ಭಾಷೆಯೊಂದರ ಹೇರಿಕೆಯು ಇನ್ನೊಂದು ಭಾಷೆಯ ಅಸ್ಮಿತೆಯನ್ನು ಪ್ರಶ್ನಿಸುವಂತಿರಬಾರದು. ಭಾಷೆಯ ಹೇರಿಕೆಯು ಮತ್ತೊಂದು ಭಾಷೆಯ ಅವಸಾನಕ್ಕೆ ದಾರಿಯಾಗಬಾರದು. ದೇಶದ ಸಂಸ್ಕೃತಿ, ವೈವಿಧ್ಯತೆ, ಸಮಗ್ರತೆಗೆ ಧಕ್ಕೆ ತರಬಾರದು’’ ಎಂದು ಅವರು ತಿಳಿಸಿದ್ದಾರೆ. ಹೀಗೆ ಅವರು ಸುಮಾರು 10 ಟ್ವೀಟ್ ಗಳನ್ನು ಮಾಡಿ, ಹಿಂದಿ ಹೇರಿಕೆಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Join Whatsapp