ದಲಿತರು ಅಂಬೇಡ್ಕರ್ ರನ್ನು ಹೃದಯಾಳದಿಂದ ಅರ್ಥೈಸಿದರೆ RSSನಿಂದ ದೂರವಾಗುತ್ತಾರೆ : ಮಾಜಿ ದಲಿತ ಸ್ವಯಂಸೇವಕ

Prasthutha|

► RSSನ ತಾರತಮ್ಯದ ವಿರುದ್ಧ ಸಿಡಿದೆದ್ದ ‘ಮಾಜಿ ಕರಸೇವಕ’ನ ಮನದಾಳದ ಮಾತು

- Advertisement -

ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ಹೃದಯಾಂತರಾಳದಿಂದ ಒಮ್ಮೆ ಅರ್ಥೈಸಿಕೊಂಡರೆ,  ಆರೆಸ್ಸೆಸ್ ನಲ್ಲಿರುವ ದಲಿತರ ಸಹೋದರರು ಆ ಸಂಘಟನೆಯಿಂದ ದೂರವಾಗುತ್ತಾರೆ ಎಂದು ರಾಜಸ್ಥಾನದ ಭಾನ್ವಾರ್ ಮೇಘವಂಶಿ ಹೇಳಿದ್ದಾರೆ. ಒಂದು ಕಾಲದಲ್ಲಿ ಆರೆಸ್ಸೆಸ್ಸ್ ಸ್ವಯಂಸೇವಕನಾಗಿದ್ದು, ಈಗ ಮಾನವ ಹಕ್ಕುಗಳ ಹೋರಾಟಗಾರನಾಗಿ ಪರಿವರ್ತನೆಗೊಂಡಿರುವ ರಾಜಸ್ಥಾನದ ಭಾನ್ವಾರ್ ಮೇಘವಂಶಿ ‘ದಿ ಕಾರವಾನ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಈ ರೀತಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆರೆಸ್ಸೆಸ್ ನಲ್ಲಿರುವ ದಲಿತ ಸಹೋದರರಿಗೆ ಅಲ್ಲಿ ಎದುರಾಗುವ ತಾರತಮ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆರೆಸ್ಸೆಸ್ ನಲ್ಲಿ ಅಂಬೇಡ್ಕರ್ ಹೆಸರು ಕೇವಲ ಬಾಯಿಮಾತಿಗೆ ಮಾತ್ರ ಸೀಮಿತವಾಗಿರುತ್ತದೆ. ಅದು ಕ್ರಿಯಾತ್ಮಕವಾಗಿ ಎಲ್ಲೂ ಜಾರಿಗೆ ಬರುವುದಿಲ್ಲ ಎಂದು ಮೇಘವಂಶಿ ಸವಿಸ್ತಾರವಾಗಿ ನೀಡಿರುವ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

- Advertisement -

1980ರ ದಶಕದಲ್ಲಿ ಆರೆಸ್ಸೆಸ್ಸಿಗೆ ಸೇರಿದ್ದ ಮೇಘವಂಶಿ, 90ರ ದಶಕದಲ್ಲಿ ಬಾಬ್ರಿ ಧ್ವಂಸಕ್ಕಾಗಿ ಆರೆಸ್ಸೆಸ್ ಆಯೋಜಿಸಿದ್ದ ಕರಸೇವೆಗಳಲ್ಲಿ ತನ್ನ ಸಹೋದರನೊಂದಿಗೆ ಭಾಗಿಯಾಗಿದ್ದರು. ಸಂಘದ ತಾರತಮ್ಯ ನೀತಿಯಿಂದ ಬೇಸತ್ತು ಅಲ್ಲಿಂದ ವಿಮುಖರಾದ ಮೇಘವಂಶಿ, 2019 ರಲ್ಲಿ ಸಂಘದಲ್ಲಿನ ತನ್ನಅನುಭವಗಳನ್ನು ‘ಮೈ ಏಕ್ ಕರ್ ಸೇವಕ್ ಥಾ’ಎಂಬ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ಪುಸ್ತಕ ರೂಪಕ್ಕಿಳಿಸಿದ್ದರು. ನಂತರ ಅದೇ ಪುಸ್ತಕ ‘ನನಗೆ ಹಿಂದುವಾಗಿರಲು ಸಾಧ್ಯವಿಲ್ಲ; ದಲಿತನೋರ್ವನ ಆರೆಸ್ಸೆಸ್ ಕಥನ’ ಎಂದು ಇಂಗ್ಲಿಷ್ ಭಾಷೆಗೂ ಅನುವಾದಿಸಿ ಪ್ರಕಟಿಸಿದ್ದರು.

ಆ ಪುಸ್ತಕದಲ್ಲಿ ತಾನು ಯಾಕಾಗಿ ಸಂಘದಿಂದ ದೂರವಾದೆ ಎನ್ನುವುದನ್ನು ಅವರು ವಿವರಿಸಿದ್ದು, “ಮೊದಲಿಗೆ ನಾನು ಆರೆಸ್ಸೆಸ್ಸಿನ ಓರ್ವ ಪೂರ್ಣಕಾಲಿಕ ಪ್ರಚಾರಕನಾಗಲು ಬಯಸಿದ್ದೆ, ಆದರೆ ನನ್ನ ಜಾತಿಯ ಕಾರಣದಿಂದ ನಿರಾಕರಿಸಲಾಯಿತು. ಮತ್ತೊಮ್ಮೆ ಆರೆಸ್ಸೆಸ್ಸಿನ ನನ್ನ ಸಹಪಾಠಿಗಳಿಗಾಗಿ ಮನೆಯಿಂದ ಆಹಾರ ತಯಾರಿಸಿ ಕೊಂಡು ಹೋಗಿದ್ದೆ. ಅದನ್ನು ಅವರು ತಿನ್ನಲು ನಿರಾಕರಿಸಿ ಬೀದಿಗೆ ಎಸೆದಿದ್ದರು. ಇದು ಮಾತ್ರವಲ್ಲದೆ ಅವರಲ್ಲಿ ನಾನು ಹಲವಾರು ಪ್ರಶ್ನೆಗಳನ್ನು ಕೇಳುತ್ತಿದೆ. ಯಾರೂ ತಮ್ಮನ್ನು ಪ್ರಶ್ನಿಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಸಂಘದ ಪ್ರಚಾರಕರು ಏನು ಹೇಳುತ್ತಾರೋ ಅದನ್ನೇ ನಂಬಬೇಕು, ಅಲ್ಲಿ ಪ್ರಶ್ನೆಗೆ ಅವಕಾಶವಿರಲಿಲ್ಲ.  ಒಮ್ಮೆ ಇದಕ್ಕಾಗಿ ನನ್ನಲ್ಲಿ ಈ ರೀತಿ ಹೇಳಲಾಯಿತು, “ನೀವು ಆಲೋಚನೆಯಲ್ಲಿ ಬಲಿಷ್ಠರಿರಬಹುದು, ಆದರೆ ನೀವು ಸಮಾಜದಲ್ಲಿ ದುರ್ಬಲರಾಗಿದ್ದೀರಿ”.

ನಾನು ಕೊಟ್ಟ  ಆಹಾರವನ್ನು ಅವರು ಬಿಸಾಕಿದ್ದು ನನ್ನ ಜೀವನದ ಬಹುಮುಖ್ಯ ತಿರುವುದು ಆಗಿತ್ತು. ಅವರಿಗೆ ಅದು ಸಣ್ಣ ವಿಷಯವಾಗಿದ್ದರೂ, ನನಗದು ಬಹುದೊಡ್ಡ ಆಘಾತವಾಗಿತ್ತು. ಒಂದು ಕಡೆ ನಮ್ಮಂತಹವರನ್ನು ‘ಹಿಂದೂ ರಾಷ್ಟ್ರ’ಕ್ಕಾಗಿ ಹೋರಾಡುವಂತೆ ಹೇಳುತ್ತಾರೆ, ಇನ್ನೊಂದೆಡೆ ಈ ತಾರತಮ್ಯ. ಇವೆರಡು ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದನಿಸಿತು. ಇವೆಲ್ಲವೂ ಇವರು ನಮ್ಮನ್ನು ಗಲಭೆಗಾಗಿ ಅಥವಾ ಇನ್ಯಾವುದಕ್ಕೋ ಬಳಸುತ್ತಿರುವ ಅನುಭವವಾಯಿತು” ಎಂದು ತಮ್ಮ ಕರಾಳ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

“ತಾನು ಆರೆಸ್ಸೆಸ್ ನಲ್ಲಿದ್ದಾಗ ತನಗೆದುರಾದ ತಾರತಮ್ಯ, ನಿಕೃಷ್ಟ ನೋಟಗಳು ಒಂದು ಹಂತದಲ್ಲಿ ನಾನು ವಿಷ ಕುಡಿದು ಸಾಯುವ ತೀರ್ಮಾನಕ್ಕೂ ಬಂದಿದ್ದೆ. ನಾನು ಅಷ್ಟೊಂದು ಮನನೊಂದಿದ್ದೆ. ನನಗಾಗಿರುವ ಅನ್ಯಾಯಕ್ಕೆ ನ್ಯಾಯ ಕೇಳಬೇಕೆಂದರೆ, ಅಲ್ಲಿ ನಮ್ಮನ್ನು ಕೇಳುವವರೇ ಇರಲಿಲ್ಲ. ನೋವುಗಳನ್ನು ತೋಡಿಕೊಂಡಾಗ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದೇನೋ ಎಂಬ ದೂರದ ಆಸೆ ಇರುತ್ತದೆ. ಆದರೆ ಅದ್ಯಾವುದೂ ನಡೆಯದೇ ಇದ್ದಾಗ ನಾನು ಮತ್ತಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ” ಎಂದು ಮೇಘವಂಶಿ ಹೇಳುತ್ತಾರೆ.

ಸದ್ಯ ಮೇಘವಂಶಿಯವರು ರಾಜಸ್ಥಾನದಲ್ಲಿ ಮಾನವ ಹಕ್ಕು ಹಾಗೂ ದಲಿತ ಆದಿವಾಸಿಗಳ ಹಕ್ಕು ಗಳಿಗಾಗಿ ಸಂಘಟನೆಯೊಂದನ್ನು ಸ್ಥಾಪಿಸಿಕೊಂಡು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮುಂದೆ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವುದಾಗಿಯೂ ಹೇಳುತ್ತಾರೆ.

Join Whatsapp