ಫ್ರಾನ್ಸ್ ವ್ಯಂಗ್ಯ ಚಿತ್ರ ಕುರಿತು ಹೇಳಿಕೆ: ಉರ್ದು ಕವಿ ವಿರುದ್ಧ ಯುಪಿ ಪೊಲೀಸರಿಂದ ಎಫ್.ಐ.ಆರ್

Prasthutha|

►► 2015ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದ ರಾಣಾ

- Advertisement -

ಲಕ್ನೊ: ಪ್ರವಾದಿ ಮುಹಮ್ಮದ್ ರವರ ಅವಮಾನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕಾಗಿ ಫ್ರಾನ್ಸ್ ನಲ್ಲಿ ಕೊಲ್ಲಲ್ಪಟ್ಟ ವ್ಯಕ್ತಿಯ ಕುರಿತ ಇತ್ತೀಚಿಗಿನ ಹೇಳಿಕೆಯೊಂದಕ್ಕಾಗಿ ಪ್ರಖ್ಯಾತ ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತನ್ನ ಹೇಳಿಕೆಯಿಂದ ಆಯ್ದ ಭಾಗವನ್ನು ತೆಗೆದುಕೊಳ್ಳಲಾಗಿದೆ ಎಂದು ಕವಿ ಹೇಳಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ.

- Advertisement -

ಲಕ್ನೊದ ಹಝ್ರತ್ಗನಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ದೂರನ್ನು ದಾಖಲಿಸಿಕೊಂಡಿದ್ದಾರೆ. ರಾಣಾ ನೀಡಿದ ಹೇಳಿಕೆಯು ಧರ್ಮದ ಆಧಾರದಲ್ಲಿ ಭಿನ್ನ ಗುಂಪುಗಳ ಮಧ್ಯೆ ದ್ವೇಷ ಮತ್ತು ಸಾರ್ವಜನಿಕ ಜೀವನಕ್ಕೆ ಹಾನಿಯುಂಟುಮಾಡುವಂತದ್ದು ಎಂದು ಪೊಲೀಸರು ಹೇಳಿದ್ದಾರೆ.

ಹಿಂದಿ ಸುದ್ದಿ ಚಾನೆಲೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಕವಿಗಳು, ಫ್ರಾನ್ಸ್ ಕೊಲೆಯನ್ನು ಸಮರ್ಥಿಸಿಕೊಂಡಿದ್ದರೆಂದು ಆರೋಪಿಸಲಾಗಿದೆ.

“ನನ್ನ ತಂದೆ, ತಾಯಿಯ ಕುರಿತು ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳನ್ನು ಯಾರಾದರೂ ರಚಿಸಿದರೆ ನಾನು ಆತನನ್ನು ಕೊಲ್ಲುತ್ತೇನೆ. ಭಾರತದಲ್ಲಿ ಇಂತಹ ವ್ಯಂಗ್ಯಚಿತ್ರವನ್ನು ಯಾವುದೇ ದೇವರು ಅಥವಾ ದೇವತೆ ಅಥವಾ ಸೀತೆ ಅಥವಾ ರಾಮ ದೇವರ ಕುರಿತು ಮಾಡಿದರೆ, ಅದು ಆಕ್ಷೇಪಾರ್ಹ, ದುರದೃಷ್ಟಕರ ಮತ್ತು ಅಶ್ಲೀಲವಾಗಿದ್ದರೆ ಮತ್ತು ಕೀಳುಮಟ್ಟದ್ದಾಗಿದ್ದರೆ, ನಾನು ಆ ವ್ಯಕ್ತಿಯನ್ನು ಕೊಲ್ಲಬೇಕೆಂದುಬಯಸುತ್ತೇನೆ” ಎಂದು ರಾಣಾ ಹೇಳಿದ್ದರು.

67ರ ಹರೆಯದ ಕವಿಯ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚುರಗೊಂಡಿತ್ತು.

ಈ ಕುರಿತು ಎನ್.ಡಿ.ಟಿ.ವಿಯೊಂದಿಗೆ ಮಾತನಾಡಿದ ಕವಿ, “ವ್ಯಂಗ್ಯಚಿತ್ರವನ್ನು ಯಾರು ಮಾಡಿದ್ದರೋ ಅವರು ಅಪರಾಧಿಗಳು, ಯಾರು ಕೊಂದಿರುವರೋ ಅವರು ಇನ್ನೂ ದೊಡ್ದ ಅಪರಾಧಿ. ಇದರಿಂದ ಜನರಿಗೇನು ಲಾಭವೆಂದು ನನಗೆ ತಿಳಿದಿಲ್ಲ. ನನ್ನ ಹೇಳಿಕೆಯ ಉದ್ದೇಶ, ಯಾರು ಧರ್ಮದ ಹೆಸರಿನಲ್ಲಿ ಈ ಧರ್ಮಾಂಧತೆಯನ್ನು ಹರಡುತ್ತಾರೋ ಅವರು ಸರಿಯಲ್ಲ ಎಂದಾಗಿತ್ತು” ಎಂದು ಹೇಳಿದ್ದಾರೆ.

2015ರಲ್ಲಿ ಕವಿಯು ರೂ.1 ಲಕ್ಷ ನಗದು ಪ್ರಶಸ್ತಿಯೊಂದಿಗೆ ದೊರೆತಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು ಮತ್ತು ಭವಿಷ್ಯದಲ್ಲಿ ಯಾವುದೇ ಸರಕಾರಿ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದಿದ್ದರು. ಸಮಕಾಲೀನ ಉರ್ದು ಸಾಹಿತ್ಯ ಲೋಕದಲ್ಲಿ ಪ್ರಖ್ಯಾತರಾಗಿರುವ ರಾಣಾ, ಇತರ ಬರಹಗಾರರು ಮತ್ತು ರಾಜಕಾರಣಿಗಳೊಂದಿಗಿನ ದೂರದರ್ಶನ ಚರ್ಚೆಯೊಂದರ ವೇಳೆ, ದೇಶದಲ್ಲಾಗುತ್ತಿರುವ ಬೆಳವಣಿಗೆಗಳಿಂದ ಬೇಸತ್ತು ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವುದಾಗಿ ತಿಳಿಸಿದ್ದರು.

Join Whatsapp