ಅಸ್ಸಾಂ: ತೋಟ ಕಾರ್ಮಿಕರಿಂದ ವೈದ್ಯರ ಗುಂಪು ಹತ್ಯೆ: ಓರ್ವನಿಗೆ ಮರಣ ದಂಡನೆ: 24 ಮಂದಿಗೆ ಜೀವಾವಧಿ

Prasthutha|

ಜೊರ್ಹತ್: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚಹಾ ಎಸ್ಟೇಟ್ ಒಂದರಲ್ಲಿ ವೈದ್ಯರೊಬ್ಬರ ಗುಂಪು ಹತ್ಯೆ ಮಾಡಿರುವುದಕ್ಕಾಗಿ ಅಸ್ಸಾಮ್ ನ ಜೊರ್ಹತ್ ಜಿಲ್ಲೆಯ ನ್ಯಾಯಾಲಯವೊಂದು ಒಬ್ಬನಿಗೆ ಮರಣದಂಡನೆ ಮತ್ತು ಇತರ 24 ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ ಎಂದು ಪಿಟಿಐ ವರದಿ ಮಾಡಿದೆ.

- Advertisement -

ಜೊರ್ಹತ್ ನ ಟಿಯೋಕ್ ಟೀ ಎಸ್ಟೇಟ್ ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ವೈದ್ಯಕೀಯ ವೃತ್ತಿಪರ ದೆಬೆನ್ ದತ್ತಾ ಎಂಬವರನ್ನು ಕಾರ್ಮಿಕರು 2019ರ ಆ.31ರಂದು ಬಡಿದು ಕೊಂದಿದ್ದರು. ಎಸ್ಟೇಟ್ ನ 33ರ ಹರೆಯದ ತೋಟ ಕಾರ್ಮಿಕ ಸೋಮ್ರಾ ಮಾಝಿಯನ್ನು ಗಂಭೀರ ಪರಿಸ್ಥಿತಿಯಲ್ಲಿ ದಾಖಲಿಸಲು ಕರೆತಂದಾಗ ದತ್ತಾ ಕರ್ತವ್ಯದಲ್ಲಿಲ್ಲದ ಕಾರಣ ಅವರು ಆಕ್ರೋಶಗೊಂಡಿದ್ದರು. ವೈದ್ಯರು ಮಧ್ಯಾಹ್ನ 3.30ರ ವೇಳೆಗೆ ಹಿಂದಿರುಗುವಾಗ ಮಾಝಿ ಸಾವನ್ನಪ್ಪಿದ್ದ.

ಕ್ರುದ್ಧರಾದ ಕೆಲಸಗಾರರು ದತ್ತಾರಿಗೆ ಥಳಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದರು. ಗುಂಪು ದತ್ತಾನಿಗೆ ಥಳಿಸಿರುವುದಲ್ಲದೆ ಗಾಜಿನ ಚೂರುಗಳಿಂದ ಕತ್ತರಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.  

- Advertisement -

ದಾಳಿಗೆ  ಸಂಬಂಧಿಸಿದಂತೆ 32 ಮಂದಿ ಚಹಾ ತೋಟದ ಕಾರ್ಮಿಕರನ್ನು ಬಂಧಿಸಲಾಗಿದ್ದು, ಕಳೆದ ವರ್ಷದ ಸೆಪ್ಟಂಬರ್ 24ರಂದು  ಚಾರ್ಜ್ ಶೀಟ್ ಸಲ್ಲಿಸಲಾಗಿತ್ತೆಂದು ಪೊಲೀಸರು ಹೇಳಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ. ಜೊರ್ಹಾತ್ ಜಿಲ್ಲಾ ಹಾಗೂ ಸೆಶನ್ ನ್ಯಾಯಾಧೀಶ ರಾಬಿನ್ ಫುಕಾನ್ ಅಕ್ಟೋಬರ್ 12ರಂದು 25 ಮಂದಿ ಚಹಾ ಕಾರ್ಮಿಕರನ್ನು ದೋಷಿಗಳೆಂದು ಘೋಷಿಸಿದ್ದು ಗುರುವಾರದಂದು ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

Join Whatsapp