ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವಿಳಂಬ, ಪಿಎಚ್ ಡಿ, ಎಂಫಿಲ್ ಫೆಲೊಶಿಪ್ ಕಡಿತಕ್ಕೆ ಕ್ಯಾಂಪಸ್ ಫ್ರಂಟ್ ಖಂಡನೆ

Prasthutha|

ಶಿವಮೊಗ್ಗ : ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾತಿಯಲ್ಲಿ ವಿಳಂಬ ಮತ್ತು ಪಿಎಚ್ ಡಿ, ಎಂಫಿಲ್ ಫೆಲೊಶಿಪ್ ಕಡಿತಗೊಳಿಸಿರುವ ಸರಕಾರದ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದೆ. ಈ ನಿಟ್ಟಿನಲ್ಲಿ ‘ವಿದ್ಯಾರ್ಥಿ ವೇತನ ನೀಡಿ’ ಎಂಬ ಆಂದೋಲನವನ್ನು ರಾಜ್ಯಮಟ್ಟದಲ್ಲಿ ನಡೆಸಲಿದ್ದೇವೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಕರ್ನಾಟಕ ಇದರ ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್ ತಿಳಿಸಿದ್ದಾರೆ.   

- Advertisement -

ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ಶೀಘ್ರದಲ್ಲೇ ಆರಂಭವಾಗಲಿವೆ. ಕೊರೊನ ಪರಿಣಾಮ ಜನರ ಆರ್ಥಿಕ ಸ್ಥಿತಿಯೂ ತೀರಾ ಹದಗೆಟ್ಟಿದೆ. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಶುಲ್ಕ ಪಾವತಿಸಲು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಿಸಿರುವುದಲ್ಲದೆ, ಒಂದೇ ಕಂತಿನಲ್ಲಿ ಕಟ್ಟುಂತೆ ಒತ್ತಾಯಿಸುತ್ತಿವೆ. ಸರಕಾರವು ಈ ಬಗ್ಗೆ ಒಂದು ಸ್ಪಷ್ಟ ಮಾರ್ಗಸೂಚಿ ತರುವಲ್ಲಿ ವಿಫಲವಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿ ವೇತನವನ್ನು ಅವಲಂಬಿಸಿದ್ದಾರೆ. ಆದರೆ, ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಅವ್ಯವಸ್ಥೆ ಇರುವುದರಿಂದ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ.

- Advertisement -

ವಿದ್ಯಾರ್ಥಿ ವೇತನ ವಿತರಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಬರುವಲ್ಲಿ ಪ್ರತಿ ವರ್ಷವೂ ಅಲ್ಪಸಂಖ್ಯಾತ ಇಲಾಖೆಯು ವಿಫಲವಾಗುತ್ತಿದೆ. ಇದು ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮೇಲೆ ಸರಕಾರಕ್ಕಿರುವ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದ್ದಾರೆ.

ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರಿಮೆಟ್ರಿಕ್, ಪೋಸ್ಟ್ ಮೆಟ್ರಿಕ್, ವಿದ್ಯಾಸಿರಿ, ಅರಿವು ಸಾಲ ಮುಂತಾದ ವಿದ್ಯಾರ್ಥಿ ಯೀಜನೆಗಳಿವೆ. ಆದರೆ, ಕಳೆದ 2-3 ವರ್ಷಗಳಿಂದ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ಇಲಾಖೆಯು ಕ್ಷುಲ್ಲಕ ಕಾರಣಗಳನ್ನು ನೀಡಿ, ಅವರ ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿಯಿಟ್ಟಿವೆ. ಇನ್ನು ಕೆಲವರಿಗೆ ವಿದ್ಯಾರ್ಥಿ ವೇತನ ಮಂಜೂರಾಗಿದ್ದರೂ, ಖಾತೆಗೆ ಹಣ ವರ್ಗಾವಣೆ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನ ಬಗ್ಗೆ ವಿದ್ಯಾರ್ಥಿಗಳು ಕಚೇರಿಗಳಿಗೆ ಓಡಾಡುತ್ತಿದ್ದರೆ, ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳು, ಕಳೆದ ವರ್ಷದ ಶುಲ್ಕ ಪಾವತಿಸದೆ ಈ ವರ್ಷಕ್ಕೆ ದಾಖಲಾತಿ ನೀಡುತ್ತಿಲ್ಲ. ಹೀಗಾಗಿ ಸರಕಾರದ ಈ ವಿಳಂಬ ನೀತಿ ಮತ್ತು ಅವ್ಯವಸ್ಥೆಯನ್ನು ಕ್ಯಾಂಪಸ್ ಫ್ರಂಟ್ ಕಟು ಶಬ್ದಗಳಿಂದ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಲ್ಪ ಸಂಖ್ಯಾತ ಇಲಾಖೆಯಿಂದ ಪಿಎಚ್ ಡಿ ಮತ್ತು ಎಂಫಿಲ್ ಅಧ್ಯಯನ ನಡೆಸುವ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಮಾಸಿಕ 25,000 ಪ್ರೋತ್ಸಾಹ ಧನ ಮತ್ತು ವಾರ್ಷಿಕ 10,000 ನಿರ್ವಹಣ ವೆಚ್ಚವನ್ನು ನೀಡಲಾಗುತಿತ್ತು. ಆದರೆ, ಕೊರೊನ ಸಂಕಷ್ಟದ ಈ ಕಾಲದಲ್ಲಿ ಅದನ್ನು 10,000 ರೂ.ಗೆ ಇಳಿಕೆ ಮಾಡಲಾಗಿದೆ. ಸರಕಾರದ ಈ ನಿರ್ಧಾರದಲ್ಲಿ ಹಲವು ದುರುದ್ದೇಶಗಳಿದ್ದು, ಈ ನಿರ್ಧಾರ ಕೈಬಿಟ್ಟು, ಪಿಎಚ್ ಡಿ ಮತ್ತು ಎಂಫಿಲ್ ಫೆಲೊಶಿಪ್ ಮುಂದುವರಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ ವಿದ್ಯಾರ್ಥಿಗಳ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ಆಂದೋಲನ ನಡೆಸಲಿದೆ. ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಈ ಆಂದೋಲನದಲ್ಲಿ ಕೈ ಜೋಡಿಸುವಂತೆ ಅವರು ವಿನಂತಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಶ್ರಫ್ ದಾವಣಗೆರೆ, ಶಿವಮೊಗ್ಗ ಜಿಲ್ಲಾಧ್ಯಕ್ಷ ಮುಜಾಹಿದ್ ಶಿವಮೊಗ್ಗ ಮುಂತಾದವರು ಉಪಸ್ಥಿತರಿದ್ದರು.

Join Whatsapp