ಬಿಹಾರ | AIMIM ಅಭ್ಯರ್ಥಿಗಳಿಗೆ 5 ಕ್ಷೇತ್ರಗಳಲ್ಲಿ ಭರ್ಜರಿ ಜಯ | ಕಾಂಗ್ರೆಸ್ ಗೆ ಕಂಟಕವಾಯಿತೇ ಒವೈಸಿ ಪಕ್ಷದ ಸ್ಪರ್ಧೆ?

Prasthutha|

ಪಾಟ್ನಾ : ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಬಿಹಾರದಲ್ಲಿ 5 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅದ್ಭುತ ಸಾಧನೆ ಪ್ರದರ್ಶಿಸಿದೆ. ಬೈಸಿ, ಅಮೌರ್, ಕೊಚಧಾಮನ್, ಬಹಾದೂರ್ ಗಂಜ್ ಮತ್ತು ಜೋಕಿಹತ್ ನಲ್ಲಿ ಎಐಎಂಐಎಂ ಅಭ್ಯರ್ಥಿಗಳು ವಿಜಯದ ಮಾಲೆ ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ.

- Advertisement -

ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆಯಾಗಿದ್ದರೆ, ಬಹುಷಃ ಎಐಎಂಐಎಂ ಮುಂಚೂಣಿಯಲ್ಲಿ ನಿಂತು ಸರಕಾರ ರಚನೆಗೆ ನೆರವಾಗುತಿತ್ತು ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರುವುದನ್ನು ತಡೆಯುತಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಫಲಿತಾಂಶ ಮ್ಯಾಜಿಕ್ ಸಂಖ್ಯೆಯ ಆಸುಪಾಸಿನಲ್ಲಿ ಎನ್ ಡಿಎ ಮತ್ತು ಮಹಾಮೈತ್ರಿ ನಡುವೆ ಜಿದ್ದಾಜಿದ್ದಿಯಲ್ಲಿದ್ದಾಗಲೇ, ಬಿಜೆಪಿಯು ಅಧಿಕಾರಕ್ಕೆ ಬರುವುದನ್ನು ತಡೆಯಲು ಮಹಾಘಟಬಂಧನ್ ಗೆ ಬೆಂಬಲಿಸುವುದಾಗಿ ಒವೈಸಿ ಘೋಷಿಸಿದ್ದರು.

- Advertisement -

ಆದರೂ, ತನ್ನ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ತನ್ನ ಸೋಲಿನ ಹೊಣೆಯನ್ನು ಒವೈಸಿ ಪಕ್ಷದ ಮೇಲೆ ಹೊರಿಸಲು ಮುಂದಾಗಿರುವುದು ವಿಷಾಧನೀಯ. ಈ ಹಿಂದಿನ ಚುನಾವಣೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೂಲದ ಬಿಎಸ್ ಪಿ, ಕರ್ನಾಟಕದಲ್ಲಿ ಎಸ್ ಡಿಪಿಐ ಮೇಲೆ ಕಾಂಗ್ರೆಸ್ ಇಂತಹುದೇ ಆರೋಪಗಳನ್ನು ಮಾಡಿತ್ತು.

ಒವೈಸಿ ನೇತೃತ್ವದ ಪಕ್ಷ ಕೇವಲ 20 ಸೀಟುಗಳಲ್ಲಿ ಸ್ಪರ್ಧಿಸಿತ್ತು. ಬಿಎಸ್ ಪಿ, ಆರ್ ಎಲ್ ಎಸ್ ಪಿ ಪಕ್ಷದ ಜೊತೆಗಿನ ಮೈತ್ರಿಕೂಟದಲ್ಲಿ ಸಹಭಾಗಿತ್ವದೊಂದಿಗೆ ಎಐಎಂಐಎಂ ಚುನಾವಣೆಯಲ್ಲಿ ಕಣದಲ್ಲಿತ್ತು. ಆದರೆ, ಪಟ್ಟು ಹಿಡಿದು 70 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19 ಸೀಟುಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಎಐಎಂಐಎಂ 20 ಸ್ಪರ್ಧಿಸಿದ್ದ ಸ್ಥಾನಗಳಲ್ಲೂ ಒಂದು ಸ್ಥಾನವನ್ನು ಹೊರತುಪಡಿಸಿ, ಉಳಿದ ಎಲ್ಲಾ ಸ್ಥಾನಗಳಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲ್ಲುವ ಸ್ಥಿತಿಯಲ್ಲಿರಲಿಲ್ಲ. ಈ ಕ್ಷೇತ್ರಗಳಲ್ಲಿ ಎಐಎಂಐಎಂ ಪಡೆದ ಮತಗಳು ಕಾಂಗ್ರೆಸ್ ಸೋಲಿನ ಅಂತರದ ಮತಗಳ ಪ್ರಮಾಣದಷ್ಟಿರಲಿಲ್ಲ.

ಇನ್ನೊಂದೆಡೆ, ಹಾಗೊಂದು ವೇಳೆ ಎಐಎಂಐಎಂ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ತೊಡಕಾಗಿತ್ತೆಂದು ಒಪ್ಪಿಕೊಂಡರೂ, 20 ಸ್ಥಾನಗಳಲ್ಲಿ ಮಾತ್ರ ಎಐಎಂಐಎಂ ಇತ್ತು, ಕಾಂಗ್ರೆಸ್ ಸ್ಪರ್ಧಿಸಿದ್ದ 70 ಕ್ಷೇತ್ರಗಳಲ್ಲಿ ಇನ್ನೂ 50 ಸ್ಥಾನಗಳಲ್ಲಿ ಯಾಕೆ ಗೆಲ್ಲಲಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇನ್ನೂ ಹೇಳಬೇಕೆಂದರೆ, ಎಐಎಂಐಎಂ ಸ್ಪರ್ಧಿಸಿದ್ದ 20 ಎಲ್ಲಾ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿರಲಿಲ್ಲ. ಕೆಲವೆಡೆ ಮಹಾಘಟಬಂಧನ್ ನ ಇತರ ಅಭ್ಯರ್ಥಿಗಳಿದ್ದರು. ಕೆಲವೆಡೆ ಮಹಾಘಟಬಂಧನ್ ಅಭ್ಯರ್ಥಿಗಳೇ ಗೆದ್ದಿದ್ದಾರೆ.

ಕಾಂಗ್ರೆಸ್ ತನ್ನ ಸೋಲಿಗೆ ನಿಜವಾದ ಕಾರಣವನ್ನು ಹುಡುಕದೆ, ಇನ್ನೊಂದು ಪಕ್ಷದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿರುವ ಪಕ್ಷದ ನಾಯಕ ಒವೈಸಿ, ಚುನಾವಣೆಯಲ್ಲಿ ಸ್ಪರ್ಧಿಸುವುದು ತಮ್ಮ ಹಕ್ಕು, ಬಿಹಾರದಲ್ಲಿ ಕಾಂಗ್ರೆಸ್ ಗೆ 30 ಸ್ಥಾನಗಳನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಅದು ಯಾಕೆ ತನ್ನ ಗೆಲುವಿನ ಬಗ್ಗೆ ಗಮನ ಹರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಚುನಾವಣೆ ಗೆದ್ದು, ಸ್ಥಾನಗಳ ಕೊರತೆಯಿದ್ದಾಗ ಎಐಎಂಐಎಂನಂತಹ ಪಕ್ಷಗಳ ಬೆಂಬಲ ಪಡೆಯುವಾಗ, ಆ ಪಕ್ಷಗಳು ಬಿಜೆಪಿಗೆ ಸಹಾಯ ಮಾಡುತ್ತವೆ ಎಂದು ಕಾಂಗ್ರೆಸ್ ಬೆಂಬಲಿಗರಿಗೆ ಅನಿಸುವುದಿಲ್ಲ. ಆದರೆ, ಚುನಾವಣೆಯಲ್ಲಿ ತಮ್ಮದೇ ವೈಫಲ್ಯಗಳಿಂದಾಗಿ ಸೋತಾಗ, ಎಐಎಂಐಎಂನಂತಹ ಪಕ್ಷಗಳೇ ಕಾರಣ ಎಂದು ಅನಿಸುವುದು ಮಾತ್ರ ವಿಪರ್ಯಾಸ. ಹಾಗೆ ನೋಡಿದರೆ, ಎಡಪಕ್ಷಗಳು ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿ ಗರಿಷ್ಠ ಸಾಧನೆ ಪ್ರದರ್ಶಿಸಿವೆ ಎಂಬುದು ಇಲ್ಲಿ ಗಮನಾರ್ಹವಾದುದು.

ಒಂದು ಲೆಕ್ಕದಲ್ಲಿ 70 ಸ್ಥಾನಗಳನ್ನು ಪಟ್ಟು ಹಿಡಿದು ಪಡೆದು, ಸ್ಪರ್ಧಿಸಿ ಕೇವಲ 19 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ಸೇ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರಲು ಕಾರಣವಾಗಿದೆ ಎನ್ನಬಹುದು. ಕಾಂಗ್ರೆಸ್ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಇನ್ನೂ 20-25 ಸೀಟು ಆರ್ ಜೆಡಿಗೆ ಬಿಟ್ಟುಕೊಟ್ಟಿದ್ದರೆ, ಅದು ಇನ್ನೂ ಕನಿಷ್ಠ 10 ಸ್ಥಾನಗಳಲ್ಲಿ ಗೆಲ್ಲುತ್ತಿದ್ದರೆ, ಫಲಿತಾಂಶ ದಿಕ್ಕೇ ಬದಲಾಗುತಿತ್ತು. ಎನ್ ಡಿಎ ಅಧಿಕಾರಕ್ಕೆ ಬರುವುದು ತಪ್ಪುತಿತ್ತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಎಐಎಂಐಎಂ ಅಭ್ಯರ್ಥಿಗಳು ಪಡೆದ ಮತಗಳ ವಿವರ ಮತ್ತು ಇತರ ಅಭ್ಯರ್ಥಿಗಳು ಪಡೆದ ಮತಗಳ ವಿವರ ಹಾಗೂ ಅದರಿಂದ ಕಾಂಗ್ರೆಸ್ ಆದ ನಷ್ಟದ ಬಗ್ಗೆ ಅಂದಾಜಿಸಬಹುದಾದ ವಿವರವುಳ್ಳ ಪಟ್ಟಿ ಈ ಕೆಳಗಿನಂತಿದೆ :

AIMIM ಸ್ಪರ್ಧೆ ಮಾಡಿದ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆ

ಅಮೌರ್ ವಿಧಾನಸಭಾ ಕ್ಷೇತ್ರ

AIMIM- 94459

JDU- 41944

INC- 31863

ಬಹಾದೂರ್ ಗಂಜ್ ವಿಧಾನಸಭಾ ಕ್ಷೇತ್ರ

AIMIM-85855

VIP- 40640

INC- 30204

ಬೈಸಿ ವಿಧಾನಸಭಾ ಕ್ಷೇತ್ರ

AIMIM- 68416

BJP- 52043

RJD- 38254

ಜೋಕಿಹತ್ ವಿಧಾಸಭಾ ಕ್ಷೇತ್ರ

AIMIM – 59596

RJD- 52213

BJP- 48933

ಕೊಚಧಾಮನ್ ವಿಧಾನಸಭಾ ಕ್ಷೇತ್ರ

AIMIM – 79893

JDU- 43750

RJD – 26134

ಮೇಲೆ ತಿಳಿಸಲಾಗಿರುವ ಕ್ಷೇತ್ರಗಳೆಲ್ಲವೂ ಭಾರಿ ಅಂತರದಿಂದ ವಿಜಯಿಯಾದ ಕ್ಷೇತ್ರಗಳು…

AIMIM ಸ್ಪರ್ಧಿಸಿದ್ದ ಉಳಿದ ಕ್ಷೇತ್ರಗಳಲ್ಲಿ ಪಡೆದ ಮತಗಳು

ಕಿಶನ್ ಗಂಜ್

INC – 61078

BJP – 59697

AIMIM – 41904

ಛಾತ್ ಪುರ

BJP – 93755

RJD – 73120

AIMIM – 1990

ಠಾಕೂರ್ ಗಂಜ್

RJD – 79909

IND – 56022

AIMIM – 18925

ಸಿಕ್ತ

CPIML – 49075

IND – 46773

AIMIM – 8519

ಅರೇರಿಯಾ

INC – 103054

JDU – 55118

AIMIM – 8924

ಮಣಿಹಾರಿ

INC – 83032

JDU – 61823

AIMIM – 2475

ಬರಾರಿ

JDU – 81752

RJD – 71314

AIMIM – 6598

ಪ್ರಾಣ್ ಪುರ

BJP – 79974

INC – 77002

AIMIM – 508

ನರ್ಪತ್ ಗಂಜ್

BJP – 98397

RJD – 69787

AIMIM – 5495

ಫುಲ್ವಾಡಿ

CPIML – 91124

JDU – 77267

AIMIM – 5019

ಸಾಹೇಬ್ ಗಂಜ್

VIP – 81203

RJD – 65870

AIMIM – 4055

ಸಾಹೇಬ್ ಪುರ ಕಮಾಲ್

RJD – 64888

JDU – 50663

AIMIM – 7933

ಶೇರ್ ಘಾಟಿ

RJD – 61804

JDU – 45114

AIMIM – 14987

ಕಸ್ಬಾ

INC – 77410

LJP – 60132

AIMIM – 5316

ಮೇಲೆ ತಿಳಿಸಲಾದ ಯಾವ ವಿಧಾನಸಭಾ ಕ್ಷೇತ್ರಗಳಲ್ಲೂ AIMIM ಪಡೆದ ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿಲ್ಲ

ಕೆಳಗೆ ತಿಳಿಸಲಾದ ಒಂದು ಕ್ಷೇತ್ರದಲ್ಲಿ ಮಾತ್ರ AIMIM ಪಡೆದ ಮತದ ಅಂತರದಲ್ಲಿ NDA ಅಭ್ಯರ್ಥಿ ವಿಜಯವಾಗಿದೆ. ಅಲ್ಲಿ AIMIM ಅಲ್ಲದೆ ಇನ್ನೂ 5 ಅಭ್ಯರ್ಥಿಗಳು ಇದ್ದರು ಎಂಬುದನ್ನು ಗಮನಿಸಬೇಕು.

ರಾಣಿಗಂಜ್

JDU – 81901

RJD – 79597

AIMIM – 2412

Margin – 2304

Join Whatsapp