‘ಲವ್ ಜಿಹಾದ್’ | ಪ್ರಿಯಾಂಕಾ, ಸಲಾಮತ್ ನಡುವಿನ ಬಾಂಧವ್ಯ ಹಿಂದೂ, ಮುಸ್ಲಿಂ ಎಂದು ನೋಡಲಾಗುವುದಿಲ್ಲ : ಅಲಹಾಬಾದ್ ಹೈಕೋರ್ಟ್

Prasthutha|

ಲಖನೌ : ‘ಲವ್ ಜಿಹಾದ್’ ಬಗ್ಗೆ ಕಾನೂನು ಮಾಡಲು ಹೊರಟಿರುವ ಬಿಜೆಪಿಗರಿಗೆ ಅಲಹಾಬಾದ್ ಹೈಕೋರ್ಟ್ ಮತ್ತೊಂದು ದೊಡ್ಡ ಮುಖಂಭಂಗವನ್ನು ಸೃಷ್ಟಿಸಿದೆ. ಮುಸ್ಲಿಂ ವ್ಯಕ್ತಿಯೊಂದಿಗೆ ಕಳೆದ ವರ್ಷ ಮತಾಂತರಗೊಂಡು ಮದುವೆಯಾಗಿದ್ದ ಯುವತಿಯೊಬ್ಬಳ ಹೆತ್ತವರು, ಆ ಮುಸ್ಲಿಂ ವ್ಯಕ್ತಿಯ ವಿರುದ್ಧ ಸಲ್ಲಿಸಿದ್ದ ದೂರನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.  

- Advertisement -

ಇಬ್ಬರು ವಯಸ್ಕರ ಜೋಡಿಯು ವರ್ಷದಿಂದ ಸಂತೋಷದಿಂದ, ಶಾಂತಿಯುತ ಜೀವನ ನಡೆಸುತ್ತಿರುವಾಗ, ಪ್ರಿಯಾಂಕಾ ಖಾರವಾರ್ ಮತ್ತು ಸಲಾಮತ್ ಅನ್ಸಾರಿಯನ್ನು ನಾವು ಹಿಂದೂ, ಮುಸ್ಲಿಂ ಎಂದು ನೋಡಲಾಗುವುದಿಲ್ಲ. ಸಾಂವಿಧಾನಿಕ ನ್ಯಾಯಾಲಯಗಳು ಮತ್ತು ನ್ಯಾಯಾಲಯಗಳು ಸಂವಿಧಾನದ 21ನೇ ಪರಿಚ್ಛೇದದಲ್ಲಿ ನೀಡಲಾದ ವೈಯಕ್ತಿಕ ಜೀವನದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಡುವ ಕಾರ್ಯವನ್ನು ಮುಖ್ಯವಾಗಿ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ.  

ವೈಯಕ್ತಿಕ ಸಂಬಂಧದ ವಿಷಯದಲ್ಲಿ ಮಧ್ಯಪ್ರವೇಶಿಸುವಿಕೆಯು, ಇಬ್ಬರು ವ್ಯಕ್ತಿಗಳ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯದ ಮೇಲೆ ಗಂಭೀರ ಆಕ್ರಮಣ ಮಾಡಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

- Advertisement -

ಉತ್ತರ ಪ್ರದೇಶದ ಕುಶಿನಗರ ನಿವಾಸಿ ಸಲಾಮತ್ ಅನ್ಸಾರಿ ಮತ್ತು ಪ್ರಿಯಾಂಕಾ ಖಾರವಾರ್ ಕಳೆದ ವರ್ಷ ಹೆತ್ತವರ ವಿರೋಧದ ನಡುವೆ ವಿವಾಹವಾಗಿದ್ದರು. ಪ್ರಿಯಾಂಕಾ ಮತಾಂತರಗೊಂಡು, ಮದುವೆಗೂ ಮೊದಲು ತನ್ನ ಹೆಸರನ್ನು ‘ಅಲಿಯಾ’ ಎಂದು ಬದಲಾಯಿಸಿಕೊಂಡಿದ್ದರು. ಈ ವೇಳೆ ಆಕೆಯ ಹೆತ್ತವರು ಸಲಾಮತ್ ವಿರುದ್ಧ ದೂರು ಸಲ್ಲಿಸಿದ್ದರು. ಈ ದೂರನ್ನು ರದ್ದತಿ ಮಾಡುವಂತೆ ಸಲಾಮತ್ ಹೈಕೋರ್ಟ್ ಮೊರೆ ಹೋಗಿದ್ದರು.

ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನು ಮಾಡುವುದಾಗಿ ಘೋಷಿಸಲಾಗಿದೆ. ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಕಳೆದ ಕೆಲವು ವರ್ಷಗಳಿಂದ ‘ಲವ್ ಜಿಹಾದ್’ ಪದವನ್ನು ಸೃಷ್ಟಿಸಿ, ಕಟ್ಟುಕತೆಗಳನ್ನು ಹೆಣೆದಿವೆ. ಅಲ್ಲದೆ, ‘ಲವ್ ಜಿಹಾದ್’ ಕುರಿತ ಕಪೋಲ ಕಲ್ಪಿತ ವರದಿಗಳನ್ನು ಸೃಷ್ಟಿಸಿ, ಬಿಜೆಪಿ ಸಿದ್ಧಾಂತ ಹರಡುವಲ್ಲಿ ಮುಖ್ಯವಾಹಿನಿ ಮಾಧ್ಯಮಗಳೂ ಸಾಕಷ್ಟು ಸಹಕರಿಸಿವೆ.  

Join Whatsapp