ಪ್ರತಿಭಟನೆಗೆ 100 ರೂ.ಗೆ ಸಿಗುತ್ತಾರೆ ಎಂದಿದ್ದ ಕಂಗನಾ ವಿರುದ್ಧ 73ರ ಹರೆಯದ ಅಜ್ಜಿ ಮೊಹಿಂದರ್ ಖಡಕ್ ನುಡಿ!

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ದೆಹಲಿ ಸುತ್ತಮುತ್ತಲ ರಾಜ್ಯಗಳ ರೈತರು ಮಾಡುತ್ತಿರುವ ತೀವ್ರ ಹೋರಾಟದಲ್ಲಿ ಪಾಲ್ಗೊಂಡಿದ್ದ 73ರ ಹರೆಯದ ಮೊಹಿಂದರ್ ಕೌರ್ (73) ಬಗ್ಗೆ ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿ ಅವಹೇಳನಕಾರಿ ಸಂದೇಶವೊಂದನ್ನು ಪ್ರಕಟಿಸಿದ್ದರು. ಆದರೆ, ಸ್ವತಃ ಮೊಹಿಂದರ್ ಕೌರ್, ಬಿಜೆಪಿ ಕಾರ್ಯಕರ್ತರಂತೆ ವರ್ತಿಸುವ ನಟಿ ಕಂಗನಾ ರಣಾವತ್ ಗೆ ಈಗ ಸರಿಯಾದ ಟಾಂಗ್ ನೀಡಿದ್ದಾರೆ.

- Advertisement -

ಮೊಹಿಂದರ್ ಕೌರ್ 100 ರೂ.ಗೆ ಪ್ರತಿಭಟನೆಗೆ ಸಿಗುತ್ತಾರೆ ಎಂಬರ್ಥದಲ್ಲಿ ಕಂಗನಾ ಟ್ವೀಟ್ ಮಾಡಿದ್ದರು. ಶಹೀನ್ ಬಾಗ್ ‘ದಾದಿ’ ಇವರೇ ಎಂದು ತಪ್ಪಾಗಿ ಬಿಂಬಿಸಿದ್ದರು. ಆದರೆ, ಸುಮಾರು 13 ಎಕರೆ ಭೂಮಿಯ ಮಾಲಕತ್ವ ಹೊಂದಿರುವ 73ರ ಹರೆಯದ ಮೊಹಿಂದರ್ ಕೌರ್ ಈಗಲೂ ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳನ್ನು ಸ್ವತಃ ಮಾಡುತ್ತಾರೆ.

“ಯಾರೊ ಒಬ್ಬರು ನಟಿ ನನ್ನ ಬಗ್ಗೆ ಬರೆದಿದ್ದಾರೆ ಎಂದು ನನಗೆ ಯಾರೋ ತಿಳಿಸಿದ್ದಾರೆ. ಆಕೆ ನನ್ನ ಮನೆಗೆ ಯಾವತ್ತೂ ಭೇಟಿ ನೀಡಿಲ್ಲ, ನಾನು ಏನೆಲ್ಲಾ ಮಾಡುತ್ತೇನೆಂದು ನೋಡಿಲ್ಲ, ಆದರೂ ನಾನು 100 ರೂ.ಗೆ ಸಿಗುತ್ತೇನೆ ಎಂದು ಆಕೆ ಹೇಳಿದ್ದಾಳೆ, ಇದು ತುಂಬಾ ತಪ್ಪು” ಎಂದು ಮೊಹಿಂದರ್ ಹೇಳಿದ್ದಾರೆ.

“ನನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಎಲ್ಲರ ಮದುವೆಯೂ ಆಗಿದೆ, ನಾನು ನನ್ನ ಮಗ ಮತ್ತು ಆತನ ಪತ್ನಿ, ಮಕ್ಕಳೊಂದಿಗೆ ಇದ್ದೇನೆ. ನಾನು ಕುಡುಗೋಲಿನಲ್ಲಿ ಕೃಷಿ ಮಾಡುತ್ತೇನೆ. ಈಗಲೂ ಹತ್ತಿ ತೆಗೆಯುತ್ತೇನೆ. ನನ್ನ ಮನೆಯಲ್ಲಿ ನನ್ನ ಕುಟುಂಬಕ್ಕೆ ಬೇಕಾದ ತರಕಾರಿ ನಾನೇ ಬೆಳೆಯುತ್ತೇನೆ ಮತ್ತು ಕೃಷಿಯ ಸಂರಕ್ಷಣೆ ಮಾಡುತ್ತೇನೆ” ಎಂದು ಮೊಹಿಂದರ್ ತಿಳಿಸಿದ್ದಾರೆ.

- Advertisement -

“ನಾನು ಕೂಡ ಕೃಷಿ ಮಾಡುವವಳು. ರೈತರ ಕಷ್ಟ ಏನೆಂದು ನನಗೆ ಗೊತ್ತಿದೆ. ನನ್ನ ವಯಸ್ಸಿನ ಕಾರಣಕ್ಕೆ ನಾನು ಬರುವುದು ಬೇಡ ಎಂದು ಹಲವು ಮುಖಂಡರು ನನ್ನನ್ನು ಹಿಂದಕ್ಕೆ ಕಳುಹಿಸಲು ನೋಡಿದರು. ನಾನು ಈಗಲೂ ದೆಹಲಿಗೆ ಹೋಗಬಲ್ಲೆ ಎಂದು ಪಟ್ಟು ಹಿಡಿದೆ. ನನಗೆ ಆ ಚೈತನ್ಯ, ಉತ್ಸಾಹ ಇದೆ. ರೈತರ ಪ್ರತಿಭಟನೆಯಲ್ಲಿ ಭಾಗವಹಿಸುವಷ್ಟು ನಾನು ಸಕ್ರಿಯಳಾಗಿದ್ದೇನೆ’’ ಎಂದು ಮೊಹಿಂದರ್ ಹೇಳಿದ್ದಾರೆ.

ಇಂತಹ ವ್ಯಕ್ತಿಗಳ ಬಗ್ಗೆ ನಾವು ಏನು ಹೇಳಲು ಸಾಧ್ಯ? ಆದರೆ, ಕಾರ್ಮಿಕರ ಘನತೆಯ ಬಗ್ಗೆ ಅವರು ಅವರಿಗೆ ಅರಿವಿರಬೇಕು. ಸುಮ್ಮನೆ ಫೋಟೊ ತೆಗೆದುಕೊಂಡು, ತಮ್ಮ ಅಜೆಂಡಾಕ್ಕನುಗುಣವಾಗಿ ಏನೆಲ್ಲಾ ಬರೆಯುವುದರ ಬದಲು, ಹಳ್ಳಿಗಳಲ್ಲಿ ಎಲ್ಲಾ ವಯಸ್ಸಿನ ಜನರು ಯಾವ ರೀತಿ ಕೆಲಸಗಳನ್ನು ಮಾಡುತ್ತಾರೆ ಎಂದು ಅವರು ಬಂದು ನೋಡಬೇಕು ಎಂದು ಮೊಹಿಂದರ್ ಅವರ ಪತಿ ಲಾಭ್ ಸಿಂಗ್ ಹೇಳಿದ್ದಾರೆ.      

Join Whatsapp