ಹಿಂದಿ ಬಾರದವರು ಹೊರನಡೆಯಿರಿ | ತರಬೇತಿಯಲ್ಲಿ ಆಯುಷ್ ಸಚಿವಾಲಯದ ಕಾರ್ಯದರ್ಶಿಯ ವಿವಾದಾತ್ಮಕ ಹೇಳಿಕೆ | ಎಲ್ಲೆಡೆ ಆಕ್ರೋಶ

Prasthutha|

ನವದೆಹಲಿ : “ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದೇನೆ, ಹಿಂದಿ ಅರ್ಥ ಆಗದವರು ಹೊರ ನಡೆಯಿರಿ’’ ಎಂದು ವರ್ಚುವಲ್ ತರಬೇತಿಯೊಂದರಲ್ಲಿ ಹೇಳಿರುವ ಕೇಂದ್ರ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚ ಅವರು ಈಗ ವಿವಾದಕ್ಕೆ ಸಿಲುಕಿದ್ದಾರೆ. ಆಯುಷ್ ಸಚಿವಾಲಯದ ತರಬೇತಿಯೊಂದರ ವೇಳೆ ರಾಜೇಶ್ ಈ ಮಾತುಗಳನ್ನಾಡಿದ್ದಾರೆ. ಇದು ಈಗ ದೇಶಾದ್ಯಂತ ಭಾಷಾ ಕುರಿತ ವಾದ-ವಿವಾದವನ್ನು ಮತ್ತೊಮ್ಮೆ ಹುಟ್ಟುಹಾಕಿದೆ. ರಾಜೇಶ್ ಅವರು ಮಾತನಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

- Advertisement -

“ಕಳೆದ ಎರಡು ದಿನಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವವರನ್ನು ನಾನು ಅಭಿನಂದಿಸುತ್ತಿದ್ದೇನೆ. ಕಳೆದ ಎರಡು ದಿನಗಳಿಂದ ನನಗೊಂದು ಮಾಹಿತಿ ಸಿಕ್ಕಿದೆ, ಆ ವಿಷಯಕ್ಕೆ ಸಂಬಂಧಿಸಿದ ಜನರಿದ್ದರೆ ಹೊರ ನಡೆಯಬಹುದು. ನಾನು ಚೆನ್ನಾಗಿ ಇಂಗ್ಲಿಷ್ ಮಾತನಾಡಲಾರೆ, ಹೀಗಾಗಿ ನಾನು ಹಿಂದಿ ಮಾತನಾಡುತ್ತಿದ್ದೇನೆ’’ ಎಂದು ರಾಜೇಶ್ ಹೇಳಿರುವ ವೀಡಿಯೊ ವೈರಲ್ ಆಗುತ್ತಿದೆ. ಆದರೆ, ತಾನು ಮಾತನಾಡಿರುವ ಅಂಶಗಳನ್ನು ತಿರುಚಲಾಗಿದೆ ಎಂದು ರಾಜೇಶ್ ಸ್ಪಷ್ಟಪಡಿಸಿದ್ದಾರೆ.

ಆದರೆ, ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತಮಿಳುನಾಡಿನಲ್ಲಿ ಮತ್ತೊಮ್ಮೆ ಭಾಷಾ ಜಾಗೃತಿಯ ಅಭಿಯಾನ ಆರಂಭವಾಗಿದೆ. ತನ್ನ ಹೇಳಿಕೆಗಾಗಿ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅವರನ್ನು ಅಮಾನತು ಮಾಡಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಒತ್ತಾಯಿಸಿದ್ದಾರೆ. ರಾಜೇಶ್ ಅವರ ವರ್ತನೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

Join Whatsapp