ಸಿಎಂ ಯೋಗಿ ರಾಜ್ಯದಲ್ಲಿ ಶವಪರೀಕ್ಷೆಗೂ 8,700 ಲಂಚ ಕೇಳಿದ ವೈದ್ಯ!

Prasthutha|

ಭಾಗ್ಪತ್ : ಕೊರೊನಾ ಸಂಕಷ್ಟದಿಂದ ಈಗಾಗಲೇ ದೇಶ ತತ್ತರಿಸುತ್ತಿದೆ. ಈ ನಡುವೆ, ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಸಾಕಷ್ಟು ಕೇಳುತ್ತಿದ್ದೇವೆ. ಆದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಇರುವ ಉತ್ತರ ಪ್ರದೇಶದ ಭಾಗ್ಪತ್ ನ ಆಸ್ಪತ್ರೆಯೊಂದರಲ್ಲಿ ಶವಪರೀಕ್ಷೆಗೂ ಸಾವಿರಾರು ರುಪಾಯಿ ಲಂಚ ಕೇಳುತ್ತಿರುವುದು ಬೆಳಕಿಗೆ ಬಂದಿದೆ. ಭಾಗ್ಪತ್ ಜಿಲ್ಲಾ ಆಸ್ಪತ್ರೆಯ ವೈದ್ಯ ಹಾಗೂ ಆತನ ಇಬ್ಬರು ಸಹಾಯಕರು, 16 ವರ್ಷದ ಹುಡುಗನ ಶವಪರೀಕ್ಷೆಗೆ 8,700 ರು. ಲಂಚ ಕೇಳಿರುವ ಬಗ್ಗೆ ಆರೋಪ ಕೇಳಿಬಂದಿದೆ. ಮೃತ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿ ಭಾಗ್ಪತ್ ಜಿಲ್ಲಾ ಆಸ್ಪತ್ರೆಯಿಂದ ವಿವರಣೆ ಕೋರಿದೆ.

- Advertisement -

ವೈದ್ಯರು ಕೇಳಿದ್ದ 8,700 ರು. ಹಣವನ್ನು ಮೃತ ಬಾಲಕನ ತಂದೆ ಸೋಮುದತ್ ಶರ್ಮಾ ಅವರಿಗೆ ಕೂಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಗ್ರಾಮಸ್ಥರು ರೂ.5,500 ಸಂಗ್ರಹಿಸಿ, ಮೃತದೇಹ ಪಡೆಯಲು ವೈದ್ಯಕೀಯ ಸಿಬ್ಬಂದಿಯನ್ನು ಒಪ್ಪಿಸಿದರು. ಶವ ಪರೀಕ್ಷೆ ಬಳಿಕ ಮೃತದೇಹವನ್ನು ಸರಿಯಾಗಿ ಹೊಲಿದುಕೊಡಲು ಮತ್ತೆ ಹೆಚ್ಚುವರಿ ರೂ.800 ಸಿಬ್ಬಂದಿ ಕೇಳಿದ್ದರು ಎನ್ನಲಾಗಿದೆ. ಆದರೆ, ಈ ಹಣ ನೀಡಲು ಒಪ್ಪದಕ್ಕೆ ಅರ್ಧ ಹೊಲಿದ ಮೃತದೇಹವನ್ನು ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.

ಶರ್ಮಾ ಗ್ರಾಮದಲ್ಲಿ ತನ್ನ ಮಗ ಹಾಗೂ ಮಗಳೊಂದಿಗೆ ಸಣ್ಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಯಾವುದೇ ಉದ್ಯೋಗವಿಲ್ಲದ ಕಾರಣ ಶರ್ಮಾ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದರು. ಲಾಕ್ ಡೌನ್ ಅವಧಿಯಲ್ಲಿ ಇದ್ದ ಹಣವೂ ಖಾಲಿಯಾಗಿತ್ತು.

Join Whatsapp