ಮೂಲೆಗುಂಪಾದವರ ಜೀವಕ್ಕೆ ಮಹತ್ವವಿದೆ; ಅವರ ಉಸಿರುಗಟ್ಟುವಿಕೆಗೆ ಕೊನೆ ಎಂದು?

Prasthutha|

ಪ್ರೊ. ರಾಮ್ ಪುನಿಯಾನಿ

- Advertisement -

ಅಮೆರಿಕಾದಲ್ಲಿ ಮಿನಿಯಾಪೊಲೀಸ್ ನಗರದಲ್ಲಿ ಜಾರ್ಜ್ ಫ್ಲಾಯ್ಡಾ ಹೆಸರಿನ ಕಪ್ಪು ವರ್ಣೀಯ ನಾಗರಿಕನೋರ್ವನನ್ನು ಶ್ವೇತ ವರ್ಣದ ಪೊಲೀಸ್ ಸಿಬ್ಬಂದಿ ಡೆರೇಕ್ ಚೌವಿನ್ ಹತ್ಯೆ ನಡೆಸಿದ. ಚೌವಿನ್ ತನ್ನ ಮಂಡಿಯಿಂದ ಫ್ಲಾಯ್ಡಾನ ಕುತ್ತಿಗೆ ಒತ್ತಿದ ಕಾರಣದಿಂದಾಗಿ ಆತನ ಉಸಿರು ನಿಂತು ಹೋಯಿತು. ಈ ತಂತ್ರಜ್ಞಾನವನ್ನು ಇಸ್ರೇಲಿ ಪೊಲೀಸರಿಂದ ಅಭಿವೃದ್ಧಿಪಡಿಸಲಾಯಿತು. ಶ್ವೇತ ವರ್ಣದ ಪೊಲೀಸ್ ಸಿಬ್ಬಂದಿ ಒಂಬತ್ತು ನಿಮಿಷಗಳ ವರೆಗೆ ತನ್ನ ಮಂಡಿಯನ್ನು ಫ್ಲಾಯ್ಡಾನ ಕುತ್ತಿಗೆಗೆ ಒತ್ತಿ ಇಟ್ಟಿದ್ದ. ಈ ನಡುವೆ ಫ್ಲಾಯ್ಡಾ ‘‘ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ’’ ಎಂದು ನಿರಂತರವಾಗಿ ಕೂಗುತ್ತಿದ್ದ.

 ಈ ಕ್ರೂರ ಹತ್ಯೆಯನ್ನು ವಿರೋಧಿಸಿ ಅಮೆರಿಕದಲ್ಲಿ ‘‘ಕಪ್ಪು ಜನರ ಜೀವ ಮಹತ್ವ ಹೊಂದಿದೆ’’ ಎಂಬ ಘೋಷಣೆಯಡಿ ವ್ಯಾಪಕ ಪ್ರತಿಭಟನೆಗಳು ನಡೆದವು. ಪ್ರತಿಭಟನೆಗಳಲ್ಲಿ ಕರಿಯರ ಹೊರತಾಗಿ ದೊಡ್ಡ ಸಂಖ್ಯೆಯಲ್ಲಿ ಬಿಳಿಯರೂ ಪಾಲ್ಗೊಂಡಿದ್ದರು. ಅಮೆರಿಕದಲ್ಲಿನ ಉನ್ನತ ಪೊಲೀಸ್ ಅಧಿಕಾರಿಯೋರ್ವರು ಈ ಕೃತ್ಯಕ್ಕಾಗಿ ಕ್ಷಮೆ ಯಾಚಿಸಿದರು. ಕ್ಷಮೆಯಾಚನೆಯ ಮನಮಿಡಿಯುವ ಸಂಕೇತವಾಗಿ ಅಲ್ಲಿನ ಪೊಲೀಸ್ ಪಡೆಯು ಮಂಡಿಯೂರಿತು. ಈ ಕೃತ್ಯಕ್ಕೆ ಸಂಬಂಧಿಸಿದಂತೆ, ಜಗತ್ತಿನ ವಿವಿಧ ಭಾಗಗಳಲ್ಲಿ ಪ್ರತಿಧ್ವನಿ ಕೇಳಿ ಬಂತು.

- Advertisement -

 ವಾಸ್ತವದಲ್ಲಿ ಈ ಘಟನೆ ಬಿಳಿಯರ ಮನದಲ್ಲಿ ಕರಿಯರ ಕುರಿತಾಗಿರುವ ಜನಾಂಗೀಯ ದ್ವೇಷದ ಪರಿಣಾಮದಿಂದ ನಡೆದಿತ್ತು. ದ್ವೇಷ ಮತ್ತು ತಪ್ಪು ಗ್ರಹಿಕೆಗಳು ಹಿಂಸಾಚಾರದ ಈ ರೀತಿಯ ಕೃತ್ಯಗಳ ಬೇರುಗಳಾಗಿವೆ. ಈ ಘಟನೆಯಿಂದ ಅಮೆರಿಕದಲ್ಲಿ ಪ್ರಜಾಪ್ರಭುತ್ವವು ಎಷ್ಟೊಂದು ಆಳವಾಗಿದೆ ಎಂಬ ವಿಚಾರವೂ ಸ್ಪಷ್ಟವಾಯಿತು. ಅಲ್ಲಿನ ಹಲವು ರಾಜ್ಯಗಳ ಪೊಲೀಸರು ಕೂಡ ಈ ಘಟನೆಗಾಗಿ ಕ್ಷಮೆಯಾಚಿಸಿದರು ಮತ್ತು ಬಿಳಿಯರು ಮತ್ತು ಕರಿಯರು ಇದರ ವಿರುದ್ಧ ಒಂದಾಗಿ ನಿಂತರು.

 ಸಮಾಜದ ಅಂಚಿನಲ್ಲಿರುವ ವರ್ಗಗಳ ಜೊತೆಗಿನ ಹಿಂಸಾಚಾರದ ಕ್ರೂರ ಕೃತ್ಯಗಳು ಅಮೆರಿಕದಲ್ಲಷ್ಟೇ ನಡೆಯುತ್ತಿಲ್ಲ. ಭಾರತದಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳು ಈ ರೀತಿಯ ಕೃತ್ಯಗಳನ್ನು ನಿರಂತರವಾಗಿ ಎದುರಿಸಬೇಕಾಗುತ್ತದೆ. ಆದರೆ ಅದರ ಕುರಿತ ಪ್ರತಿಕ್ರಿಯೆಗಳು ಮಾತ್ರ ಭಿನ್ನವಾಗಿವೆ. ತಬ್ರೇಝ್ ಅನ್ಸಾರಿಯನ್ನು ಕಂಬವೊಂದಕ್ಕೆ ಕಟ್ಟಿ ಹಾಕಿ ಗುಂಪು ಕ್ರೂರವಾಗಿ ಥಳಿಸಿತು. ನಂತರ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆದರೆ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಲು ತುಂಬಾ ವಿಳಂಬ ಮಾಡಿದರು ಮತ್ತು ಅಷ್ಟರಲ್ಲಿಯೇ ತಬ್ರೇಝ್ ಪ್ರಾಣಬಿಟ್ಟಿದ್ದ. ಪುಣೆಯಲ್ಲಿ ಐಟಿ ಸಿಬ್ಬಂದಿಯೋರ್ವನನ್ನು ಹಿಂದು ರಾಷ್ಟ್ರ ಸೇನಾದ ಕಾರ್ಯಕರ್ತರ ಗುಂಪು ಹತ್ಯೆ ನಡೆಸಿತು. ಈ ಘಟನೆಯು 2014ರ ಮೇಯಲ್ಲಿ ಮೋದಿ ಅಧಿಕಾರಕ್ಕೇರಿದ ದಿನದಂದೇ ನಡೆದಿತ್ತು. ಅಫ್ರಾಝುಲ್‌ನನ್ನು ಹತ್ಯೆಗೈಯ್ಯುತ್ತಾ ಶಂಭುಲಾಲ್ ರೈಗರ್ ಎಂಬಾತ ತನ್ನ ವಿಡಿಯೋ ಚಿತ್ರೀಕರಿಸಿದ ಮತ್ತು ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಪ್ರಚಾರಪಡಿಸಿದ. ಮುಸ್ಲಿಮರು ಲವ್  ಜಿಹಾದ್ ನಡೆಸುತ್ತಾರೆ ಮತ್ತು ಅವರೊಂದಿಗೆ ಇದೇ ರೀತಿ ನಡೆಯಬೇಕೆಂದು ಆತ ನಂಬಿದ್ದ. ಮನೆಯಲ್ಲಿ ದನದ ಮಾಂಸ ಸಂಗ್ರಹಿಸಿಡಲಾಗಿದೆ ಎಂಬ ಸಂಶಯದಲ್ಲಿ ಮುಹಮ್ಮದ್ ಅಖ್ಲಾಕ್‌ ನನ್ನು ಗುಂಪು ಹತ್ಯೆ ನಡೆಸಲಾಗಿತ್ತು. ಈ ರೀತಿಯ ಘಟನೆಗಳ ದೊಡ್ಡ ಪಟ್ಟಿಯೇ ಇದೆ.

 ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ, ದಲಿತ ಯುವಕನೊಬ್ಬ ದೇವಸ್ಥಾನ ಪ್ರವೇಶಿಸಿದ ತಪ್ಪಿಗಾಗಿ ಗುಂಡೇಟಿಗೆ ಬಲಿಯಾದ. ಊನಾದಲ್ಲಿ ದಲಿತರನ್ನು ಸೊಂಟದ ವರೆಗೆ ಬತ್ತಲೆ ಮಾಡಿ ನಿರ್ದಯವಾಗಿ ಥಳಿಸಲಾಯಿತು. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ರಾಮ್  ವಿಲಾಸ್  ಪಾಸ್ವಾನ್, ಇದೊಂದು ಸಾಮಾನ್ಯ ಘಟನೆ ಎಂದು ಹೇಳಿದ್ದರು. ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳ ಪಟ್ಟಿ ಇನ್ನೂ ದೊಡ್ಡದಿದೆ. ಆದರೆ ಸಾಮಾನ್ಯವಾಗಿ ಇಂತಹ ಕ್ರೂರ ಹತ್ಯೆ ಮತ್ತು ಚಿತ್ರಹಿಂಸೆಗಳ ಘಟನೆಗಳ ವೇಳೆ ಪಾಸ್ವಾನ್ ನೀಡಿದ್ದ ಪ್ರತಿಕ್ರಿಯೆಗಳೇ ಕಂಡು ಬರುತ್ತಿವೆ. ಒಂದು ಕರಿ ಜೀವ ನಷ್ಟವಾದಾಗ ಅಮೆರಿಕಾದಲ್ಲಿ ಪ್ರಜಾಸತ್ತಾತ್ಮಕ ಮತ್ತು ಮಾನವೀಯ ಪ್ರತಿಕ್ರಿಯೆ ಸೃಷ್ಟಿಯಾಯಿತು. ಭಾರತದಲ್ಲಿ ಈ ರೀತಿಯ ದುಷ್ಕೃತ್ಯಕ್ಕೆ ಪ್ರತಿಕ್ರಿಯೆಯು ಸಾಮಾನ್ಯ ಮೌನವಾಗಿದೆ.

 ಆದಾಗ್ಯೂ, ಕೆಲವೊಮ್ಮೆ ದೀರ್ಘ ಮೌನದ ಬಳಿಕ ಪ್ರಧಾನ ಮಂತ್ರಿ, ಭಾರತ ಮಾತೆಯು ಓರ್ವ ಪುತ್ರನನ್ನು ಕಳೆದುಕೊಂಡಿದ್ದಾಳೆ ಎಂಬ ವಾಸ್ತವವನ್ನು ನಮ್ಮ ಗಮನಕ್ಕೆ ತರುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಕೆಲವು ಸಾಮಾಜಿಕ ಗುಂಪುಗಳು ಕೆಲವು ವೇದಿಕೆಗಳಲ್ಲಿ ಧ್ವನಿ ಎತ್ತುತ್ತವೆ. ಆದರೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮೌನವು ರೂಢಿಯಾಗಿಬಿಟ್ಟಿದೆ.

 ಭಾರತವನ್ನು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಲಾಗುತ್ತದೆ. ಪ್ರಜಾತಂತ್ರದಲ್ಲಿ ಕಾನೂನಿನ ಆಡಳಿತವಿರಲೇಬೇಕು. ಇದೇ ಕಾನೂನುಗಳ ಆಧಾರದಲ್ಲಿ ಅನ್ಯಾಯಗಳನ್ನು ಎದುರಿಸಲಾಗುತ್ತದೆ. ಅಮೆರಿಕದಲ್ಲಿರುವ ಪ್ರಸ್ತುತ ಅಧ್ಯಕ್ಷ, ವಿವೇಚನೆಯಿಲ್ಲದ ವ್ಯಕ್ತಿಯಾಗಿರಬಹುದು. ಆದರೆ ಆ ದೇಶದಲ್ಲಿ ಪ್ರಜಾಸತ್ತಾತ್ಮಕ ಪ್ರತಿಕ್ರಿಯೆಗಳು ಮತ್ತು ಸಂಸ್ಥೆಗಳು ಅತ್ಯಂತ ಬಲಿಷ್ಠವಾಗಿವೆ. ಈ ಸಂಸ್ಥೆಗಳ ಬೇರುಗಳು ತುಂಬಾ ಬಲಿಷ್ಠವಾಗಿವೆ. ಆದಾಗ್ಯೂ, ಫ್ಲಾಯ್ಡಾ ಹತ್ಯೆ ಪ್ರಕರಣದಲ್ಲಿ ನಡೆದಂತೆ ಕೆಲವು ಪೊಲೀಸ್ ಅಧಿಕಾರಿಗಳು ಪೂರ್ವಾಗ್ರಹಪೀಡಿತರಾಗಿದ್ದರೂ, ಒಂದು ವೇಳೆ ಘಟನೆಯ ಕುರಿತು ಅರ್ಥಪೂರ್ಣವಾದ ಮಾತುಗಳನ್ನು ಆಡಲು ಸಾಧ್ಯವಿಲ್ಲವೆಂದಾದರೆ ಅಧ್ಯಕ್ಷರು  ಮೌನವಾಗಿರಬೇಕೆಂದು ಹೇಳುವಂತಹ ಪೊಲೀಸ್ ಅಧಿಕಾರಿಗಳೂ ಅಲ್ಲಿದ್ದಾರೆ.

 ಅಮೆರಿಕನ್ ಸಮಾಜದಲ್ಲಿ ಕರಿಯರ ಕುರಿತಂತೆ ತಪ್ಪು ಗ್ರಹಿಕೆಗಳು ಸಾಮಾನ್ಯವಾಗಿರಬಹುದು. ಆದರೆ ಅಮೆರಿಕಾದ ದೊಡ್ಡ ವರ್ಗವೊಂದು, ಕಪ್ಪು ಜನರ ಜೀವ ಮಹತ್ವ ಹೊಂದಿದೆ ಎಂಬುದನ್ನು ನಂಬುತ್ತದೆ ಮತ್ತು ದೇಶದಲ್ಲಿ ಪ್ರಜಾತಂತ್ರ ಮತ್ತು ಮಾನವೀಯ ಮೌಲ್ಯಗಳ ಸಿದ್ಧಾಂತಗಳ ಉಲ್ಲಂಘನೆಯಾಗುವಾಗಲೆಲ್ಲಾ ಈ ವರ್ಗವು ಬಹಿರಂಗವಾಗಿ ಅದನ್ನು ವಿರೋಧಿಸುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಹಲವು ಕಾರಣಗಳಿಂದಾಗಿ ತಬ್ರೇಝ್ ಅನ್ಸಾರಿ, ಮುಹಮ್ಮದ್ ಅಖ್ಲಾಕ್ ಮತ್ತು ಊನಾದ ದಲಿತರು ಮತ್ತು ಅವರಂತಹ ಇತರರ ಜೀವಕ್ಕೆ ಯಾವುದೇ ಬೆಲೆಯಿಲ್ಲ. ಆದಾಗ್ಯೂ, ನಾವು ಒಂದು ದೊಡ್ಡ ಪ್ರಜಾಪ್ರಭುತ್ವ ಎಂದು ಪ್ರತಿಪಾದಿಸುತ್ತಿದ್ದರೂ, ಅನ್ಯಾಯದ ಕುರಿತು ನಮ್ಮ ಅಸಂವೇದನೆಯು ಹೆಚ್ಚುತ್ತಾ ಹೋಗುತ್ತಿದೆ.

 ಕಳೆದ ಕೆಲವು ದಶಕಗಳಲ್ಲಿ ಅಂಚಿನಲ್ಲಿರುವ ಸಮುದಾಯಗಳ ವಿರುದ್ಧ ವ್ಯಾಪಕ ಪ್ರಚಾರವು ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ, ಅವರ ವಿರುದ್ಧ ನಡೆಯುವ ಯಾವುದೇ ಹಿಂಸಾಚಾರವನ್ನು ಸಾಮಾನ್ಯ ಎಂಬಂತೆ ಭಾವಿಸಲಾಗುತ್ತದೆ. ದೊಡ್ಡ ಮಟ್ಟದ ವರ್ಗವು ಈ ಸಮುದಾಯಗಳ ಮೇಲೆ ನಡೆಯುವ ಕ್ರೌರ್ಯದಿಂದ ವ್ಯಾಕುಲರಾಗುತ್ತಾರೆ. ಆದರೂ ಅವರು ಸಂತ್ರಸ್ತರ ವಿರುದ್ಧದ ಪೂರ್ವಾಗ್ರಹಗಳಿಂದ ತುಂಬಿ ಹೋಗಿರುತ್ತಾರೆ. ಕೋಮುವಾದಿ ಶಕ್ತಿಗಳು ಪಾರಂಪರಿಕ ಮತ್ತು ಸಾಮಾಜಿಕ ಇವೆರಡೂ ಮಾಧ್ಯಮಗಳ ಮೇಲೆ ಬಿಗಿ ಹಿಡಿತವನ್ನು ಹೊಂದಿವೆ ಮತ್ತು ಅವರು ಈ ವಂಚಿತ ಸಮುದಾಯಗಳ ಕುರಿತು ಸೃಷ್ಟಿಸುವ ದ್ವೇಷ ಪ್ರಚಾರಗಳು ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತವೆ.

 ಹಾಗೆ ನೋಡಿದರೆ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಒತ್ತು ನೀಡುವ ಪ್ರಕ್ರಿಯೆ ತುಂಬಾ ದುರ್ಬಲವಾಗಿದೆ. ಪ್ರಜಾಪ್ರಭುತ್ವವು ಒಂದು ಕ್ರಿಯಾಶೀಲ ಪ್ರಕ್ರಿಯೆಯಾಗಿದ್ದು, ಇದೊಂದು ಯಾವುದೇ ಸ್ಥಿರ ವಸ್ತುವಲ್ಲ. ದಶಕಗಳಿಗೂ ಮೊದಲು ಕಾರ್ಮಿಕರು ಮತ್ತು ದಲಿತರು ತಮ್ಮ ಹಕ್ಕುಗಳಿಗಾಗಿ ಯಾವುದೇ ಸಮಸ್ಯೆಯಿಲ್ಲದೆ ಹೋರಾಟ ನಡೆಸುತ್ತಿದ್ದರು.  ಆದರೆ ಇಂದು ಒಂದು ವೇಳೆ ರೈತರು ಪ್ರತಿಭಟನೆ ನಡೆಸುವುದಾದರೆ, ಪ್ರಮುಖ ಮಾಧ್ಯಮಗಳು ಅದನ್ನು ಸಂಚಾರಕ್ಕೆ ತಡೆಯೊಡ್ಡುವುದು ಎಂಬಂತೆ ಪ್ರಸ್ತುತಪಡಿಸುತ್ತವೆ. ಸರಕಾರವು ತನ್ನ ನೀತಿಗಳನ್ನು ವಿರೋಧಿಸುವವರ ಮೇಲೆ ದೇಶವಿರೋಧಿ ಹಣೆಪಟ್ಟಿ ಕಟ್ಟುವಷ್ಟರ ಮಟ್ಟಿಗೆ ಪ್ರಜಾತಂತ್ರದ ಬೇರುಗಳು ದುರ್ಬಲಗೊಂಡಿವೆ.

 ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮೆಲ್ಲನೆ ದುರ್ಬಲಗೊಳ್ಳುತ್ತಾ ಹೋಗುತ್ತಿವೆ ಮತ್ತು ಈಗಂತೂ ಅವು ಅಂಚಿನಲ್ಲಿರುವ ಸಮುದಾಯಗಳ ರಕ್ಷಣೆಗೆ ಮುಂದೆ ಬರಲಿವೆ ಎಂದು ಯಾರೂ ಕೂಡ ಕಲ್ಪಿಸಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳನ್ನು ತುಚ್ಛವಾಗಿ ಕಾಣುವ ವಿಭಜನಕಾರಿ ಮತ್ತು ಕೋಮುವಾದಿ ವಿಚಾರಧಾರೆಯ ಪ್ರಭಾವ ಬಹಳ ವೇಗವಾಗಿ ಹೆಚ್ಚಿದೆ.

 ಭಾರತದ ಪ್ರಜಾಪ್ರಭುತ್ವವು ಟೊಳ್ಳಾಗುತ್ತಾ ಹೋಗುತ್ತಿದೆ. ಕಾನೂನಿನ ಆಡಳಿತವನ್ನು ಒಂದು ತತ್ವಸಿದ್ಧಾಂತದ ಆಡಳಿತದಲ್ಲಿ ಬದಲಾಯಿಸಲಾಗಿದೆ. ಭಾರತೀಯ ಸಂವಿಧಾನದಲ್ಲಿ ನಂಬಿಕೆ ಇಲ್ಲದಿರುವ ಈ ವಿಚಾರಧಾರೆಯು ಈ ದೇಶದ ಬಹುತ್ವ ಮತ್ತು ವಿವಿಧತೆಯ ಇತಿಹಾಸವನ್ನು ಇಷ್ಟಪಡುತ್ತಿಲ್ಲ ಮತ್ತು ಇದು ಮೇಲ್ಜಾತಿಗಳು ಮತ್ತು ಶ್ರೀಮಂತರ ಸವಲತ್ತುಗಳಿಗಾಗಿ ಹೆಚ್ಚು ಕಾಳಜಿ ವಹಿಸುತ್ತದೆ.

 ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವು ತುಂಬಾ ಬಲಿಷ್ಠವಾಗಬೇಕಾಗಿತ್ತು. ಆದರೆ 1980ರ ದಶಕದ ನಂತರದಿಂದ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿದ ಕಾರಣ ಇದು ದುರ್ಬಲವಾಯಿತು. ಇಲ್ಲಿ ಯಾವನೇ ಫ್ಲಾಯ್ಡಾನ ಹತ್ಯೆಗೆ ಕೋಲಾಹಲ ಉಂಟಾಗುವುದಿಲ್ಲ. ಜಾರ್ಜ್ ಫ್ಲಾಯ್ಡಾ ಹತ್ಯೆಗೆ ಸಂಬಂಧಿಸಿ ಅಮೆರಿಕಾದಲ್ಲಿ ಯಾವ ರೀತಿ ವಿರೋಧದ ಅಲೆ ಎದ್ದಿತೋ, ಭಾರತದಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ಅಂಥದ್ದನ್ನು ನಮಗೆ ಕಲ್ಪಿಸಲೂ ಸಾಧ್ಯವಿಲ್ಲ.

Join Whatsapp