ಬೆಂಗಳೂರು ಗೋಲಿಬಾರ್ : ಸಂಶಯಕ್ಕೆ ಎಡೆ ಮಾಡಿದ ನಾಲ್ಕನೇ ವ್ಯಕ್ತಿಯ ಸಾವು

Prasthutha|

ವಾರದ ಹಿಂದೆ ಬೆಂಗಳೂರು ಹಿಂಸಾಚಾರದ ವೇಳೆ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದರು. ಗೋಲಿಬಾರ್ ನಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಸಾವಿನೊಂದಿಗೆ ಇದೀಗ ಮೃತರ ಸಂಖ್ಯೆ ನಾಲ್ಕಕ್ಕೇರಿದೆ. ಈ ಗಾಯಾಳು ವ್ಯಕ್ತಿಯ ಸಾವು ಆಸ್ಪತ್ರೆಯಲ್ಲಿ ನಡೆದಿದ್ದು, ಇದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

- Advertisement -

ಇದೊಂದು ಕಸ್ಟಡಿ ಸಾವಾಗಿದ್ದು, ಇದಕ್ಕೆ ಪೊಲೀಸರೇ ನೇರ ಹೊಣೆ ಎಂದು ಮುಸ್ಲಿಮ್ ಸಂಘಟನೆಗಳು ಆರೋಪಿಸಿವೆ. ವೃತ್ತಿಯಲ್ಲಿ ವೆಲ್ಡರ್ ಆಗಿರುವ ಸಯ್ಯದ್ ನದೀಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದದ ವಿಡಿಯೋ ದೃಶ್ಯಾವಳಿ ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಮುಸ್ಲಿಮ್ ಸಂಘಟನೆಗಳು ಆರೋಪಿಸಿರುವಂತೆ, ಪೊಲೀಸರು ನದೀಮ್ ನನ್ನು ಆಸ್ಪತ್ರೆಯಿಂದ ಬಂಧಿಸಿದ್ದರಾದರೂ, ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿರಲಿಲ್ಲ ಮತ್ತು ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಗುಂಡು ಆತನ ದೇಹದಲ್ಲೇ ಉಳಿದ ಕಾರಣ ಆತನ ಸಾವು ಸಂಭವಿಸಿತು.

- Advertisement -

ಆತನ ಕುಟುಂಬಸ್ಥರು ಮತ್ತು ಸಾರ್ವಜನಿಕರ ಹೇಳಿಕೆಯಂತೆ, ಆತನ ದೇಹಕ್ಕೆ ಗುಂಡು ತಗುಲಿತ್ತು ಮತ್ತು ಆತನನ್ನು ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಆ ವೇಳೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಕಾನೂನಿನ ಪ್ರಕಾರ, ಮೊದಲು ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಾಗಿತ್ತು. ಆದರೆ ಅದನ್ನು ಮಾಡಿಸಲಾಗಿಲ್ಲ.

ಘಟನೆಗೆ ಸಂಬಂಧಿಸಿದಂತೆ ಮುಸ್ಲಿಮ್ ಸಂಘಟನೆಗಳು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ರನ್ನೂ ಭೇಟಿ ಮಾಡಿದವು. ಬಂಧನ ಕಾರ್ಯಾಚರಣೆಯ ವೇಳೆ ಅಮಾಯಕರನ್ನೂ ಬಂಧಿಸಲಾಗುತ್ತಿದೆ ಎಂದು ಆರೋಪಿಸಿರುವ ಮುಸ್ಲಿಮ್ ಸಂಘಟನೆಗಳು, ಸಯ್ಯದ್ ನದೀಮ್ ಸಾವಿನ ಕುರಿತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ಗಾಯಾಳುವಾಗಿದ್ದ ಆತನನ್ನು ಪೊಲೀಸರು ಅಲ್ಲಿಂದ ಹೇಗೆ ಕರೆದುಕೊಂಡು ಹೋದರು ಮತ್ತು ವೈದ್ಯರು ಅದಕ್ಕೆ ಹೇಗೆ ಅನುಮತಿ ನೀಡಿದರು ಎಂಬ ಸಹಜ ಪ್ರಶ್ನೆಯನ್ನು ಎತ್ತಿವೆ.

ಎರಡು ಮೂರು ದಿನಗಳ ನಂತರ ಆತನ ಸಾವು ಸಂಭವಿಸಿದಾಗ ಆತನಿಗೆ ಕೊರೋನ ತಗುಲಿತ್ತು ಎಂಬ ಪ್ರತಿಕ್ರಿಯೆ ದೊರಕಿದೆ. ವಾಸ್ತವವೇನು ಎಂಬುದರ ಕುರಿತು ನಿಷ್ಪಕ್ಷ ತನಿಖೆಯಾಗಬೇಕೆಂದು ಸಂಘಟನೆಯ ನಾಯಕರು ಒತ್ತಾಯಿಸಿದ್ದಾರೆ.

ಗುಂಪು ಚದುರಿಸಲು ಗುಂಡು ಹಾರಿಸಲಾಗಿತ್ತು ಎಂದು ಪೊಲೀಸರು ಸಮರ್ಥಿಸಿಕೊಳ್ಳುತ್ತಿದ್ದರೂ, ಇದೀಗ ನಾಲ್ಕನೇ ಸಾವಿನ ಕುರಿತು ಸಾರ್ವಜನಿಕ ವಲಯದಲ್ಲಿ ಸಂಶಯಗಳು ಎದ್ದಿವೆ.

Join Whatsapp