ಬೆಂಗಳೂರು | ಬೋರ್ವೆಲ್ ಕೊರೆಯುವ ಘಟಕದಲ್ಲಿ ಶೋಷಣೆ | ಐವರು ಜೀತ ಕಾರ್ಮಿಕರ ರಕ್ಷಣೆ

Prasthutha|

ಬೆಂಗಳೂರು : ದೇಶ 74ನೇ ಸ್ವಾತಂತ್ರ್ಯ ದಿನಾಚರಣೆಯ ದಿನ ಸಂಭ್ರಮಿಸಲು ಕೆಲವೇ ದಿನಗಳು ಬಾಕಿಯುಳಿದಿವೆ. ಇಂತಹ ಸುಸಂದರ್ಭದಲ್ಲಿ, ದೇಶದಲ್ಲಿ ಇನ್ನೂ ಜೀತಗಾರಿಕೆ ಜೀವಂತವಿರುವುದು ವಿಪರ್ಯಾಸ. ಸಹಕಾರ ನಗರದಲ್ಲಿನ ಬೋರ್ ವೆಲ್ ಕೊರೆಯುವ ಘಟಕದ ಕಚೇರಿಯಲ್ಲಿ ಮಾಲೀಕನಿಂದ ಶೋಷಣೆಗೊಳಪಟ್ಟಿದ್ದ 5 ಮಂದಿ ಜೀತ ಕಾರ್ಮಿಕರನ್ನು ರಕ್ಷಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾಡಳಿತ, ಕೊಡಿಗೆಹಳ್ಳಿ ಪೊಲೀಸ್ ಠಾಣೆ ಹಾಗೂ ಕಾರ್ಮಿಕ ಇಲಾಖೆಗಳ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಡಿ ಮಧ್ಯಪ್ರದೇಶದ ಬೇತುಲ್ ಜಿಲ್ಲೆಗೆ ಸೇರಿದ ಐವರು ಜೀತದಾಳುಗಳನ್ನು ರಕ್ಷಿಸಲಾಗಿದೆ.

- Advertisement -

ಬೋರ್ ವೆಲ್ ಕಾರ್ಮಿಕರಿಗೆ ತಿಂಗಳಿಗೆ 10 ಸಾವಿರ ರೂ. ವೇತನ ನೀಡುವ ಭರವಸೆಯಿಂದ ಕರೆದುಕೊಳ್ಳಲಾಗಿತ್ತು. ಇದನ್ನು ನಂಬಿ ಕೆಲಸಕ್ಕೆ ಸೇರಿಕೊಂಡರೆ, ಈ ಕಾರ್ಮಿಕರಿಗೆ 200ರಿಂದ 1000 ರು. ವರೆಗೆ ಮಾತ್ರ ನೀಡಿ ಬೆದರಿಕೆ ಹಾಕಲಾಗುತಿತ್ತು. ದಿನಸಿ ಸಾಮಗ್ರಿಗಳ ಕೊರತೆಯ ನೆಪವೊಡ್ಡಿ ದಿನಕ್ಕೆ ಎರಡು ಹೊತ್ತು ಮಾತ್ರ ಊಟ ನೀಡಲಾಗುತಿತ್ತು. ಬೆಳಗ್ಗೆ 6 ಗಂಟೆಗೆ ಕೆಲಸ ಆರಂಭಿಸಿ, ತಡ ರಾತ್ರಿ ವರೆಗೂ ಕೆಲಸ ಮಾಡಿಸಿಕೊಳ್ಳಲಾಗುತಿತ್ತು. ವೇತನ ಕೇಳಿದರೆ, ಬ್ಯಾಂಕ್ ಖಾತೆಗೆ ಹಾಕುತ್ತೇನೆ ಎಂದು ಮಾಲೀಕ ಹೇಳುತ್ತಿದ್ದ ಎನ್ನಲಾಗಿದೆ. ಮನೆಗೆ ಹೋಗುತ್ತೇವೆ ಎಂದು ಹೇಳಿದಾಗಲೂ, ಹೋಗಲು ಬಿಡದೆ, ನಿರಂತರವಾಗಿ ಶೋಷಣೆ ಮಾಡಲಾಗಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ. ಬೋರ್ವೆಲ್ ಮಾಲಿಕರ ವಿರುದ್ಧ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

Join Whatsapp