ಬಾಬರಿ ಮಸೀದಿ ಧ್ವಂಸ ಪ್ರಕರಣ | ಮುಕ್ತಾಯಗೊಳಿಸಿ, ಸೆ.30ರೊಳಗೆ ತೀರ್ಪು ಪ್ರಕಟಿಸಿ | ಸುಪ್ರೀಂ ಕೋರ್ಟ್ ಆದೇಶ

Prasthutha|

ನವದೆಹಲಿ : ಹಿರಿಯ ಬಿಜೆಪಿ ನಾಯಕರುಗಳಾದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಮತ್ತು ಕಲ್ಯಾಣ್ ಸಿಂಗ್ ರಂತಹ ಪ್ರಮುಖರು ಆರೋಪಿತರಾಗಿರುವ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿ ಎಂದು ಸಿಬಿಐ ಕೋರ್ಟ್ ಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಪ್ರಕರಣದ ವಿಚಾರಣೆ ತ್ವರಿತಗೊಳಿಸಿ, ಸೆ.30ರೊಳಗೆ ತೀರ್ಪು ಪ್ರಕಟಿಸುವಂತೆಯೂ ಅದು ಸೂಚಿಸಿದೆ.

- Advertisement -

ವಿಚಾರಣೆ ಸಮಾಪ್ತಿಗೊಳಿಸಲು ಅನುಮತಿ ಕೋರಿ ಸಿಬಿಐ ವಿಶೇಷ ನ್ಯಾಯಮೂರ್ತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ, ನ್ಯಾ. ರೋಹಿಂಟನ್ ಎಫ್. ನಾರಿಮನ್, ನ್ಯಾ. ನವೀನ್ ಸಿನ್ಹಾ, ನ್ಯಾ. ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ವಿಶೇಷ ನ್ಯಾಯಮೂರ್ತಿ ಸುರೇಂದ್ರ ಕುಮಾರ್ ಯಾದವ್ ಅವರ ವರದಿಯನ್ನು ಓದಿದ ಬಳಿಕ, ಪ್ರಕ್ರಿಯೆಯು ಬಹುತೇಕ ಅಂತಿಮ ಹಂತದಲ್ಲಿದೆ. ಹೀಗಾಗಿ, ನಾವು ಒಂದು ತಿಂಗಳ ಅವಧಿ ವಿಸ್ತರಿಸುತ್ತಿದ್ದು, ಅಂದರೆ ಸೆ.30ರೊಳಗೆ ತೀರ್ಪು ಪ್ರಕಟನೆ ಸೇರಿದಂತೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸುತ್ತಿದ್ದೇವೆ ಎಂದು ನ್ಯಾಯಪೀಠ ತಿಳಿಸಿದೆ.

ಉತ್ತರ ಪ್ರದೇಶದ ಅಯೋಧ್ಯೆಯ ಬಾಬರಿ ಮಸೀದಿಯನ್ನು 1992ರಲ್ಲಿ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ವಿಚಾರಣೆ ಎದುರಿಸುತ್ತಿದ್ದಾರೆ. ಐಪಿಸಿಯ ವಿವಿಧ ಕಲಂಗಳಡಿ ಅವರು ಆರೋಪ ಎದುರಿಸುತ್ತಿದ್ದಾರೆ. ಐಪಿಸಿ ಕಲಂ 153ಎ (ಎರಡು ಸಮುದಾಯಗಳ ನಡುವೆ ದ್ವೇಷ ಹರಡುವುದು), ಕಲಂ 153(ಬಿ) (ರಾಷ್ಟ್ರೀಯ ಸಮಗ್ರತೆಗೆ ಧಕ್ಕೆಯುಂಟು ಮಾಡುವ ಹೇಳಿಕೆ), ಕಲಂ 505 (ಸಾರ್ವಜನಿಕ ಶಾಂತಿ ಕದಡುವುದು) ಮುಂತಾದ ವಿವಿಧ ಕಲಂಗಳಡಿ ಈ ನಾಯಕರು ವಿಚಾರಣೆ ಎದುರಿಸುತ್ತಿದ್ದಾರೆ. ಆ.31ರೊಳಗೆ ತೀರ್ಪು ಪ್ರಕಟಿಸುವಂತೆ ಈ ಹಿಂದೆ ಕೋರ್ಟ್ ಕಾಲಮಿತಿ ನಿಗದಿ ಪಡಿಸಿತ್ತು.

Join Whatsapp