ಪಿಎಂ ಕೇರ್ಸ್ ಫಂಡ್ ವರ್ಗಾವಣೆ ಇಲ್ಲ | ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಪಿಎಂ ಕೇರ್ಸ್ ಫಂಡ್ ಕುರಿತ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಈ ನಿಧಿಯಡಿ ಸಂಗ್ರಹವಾದ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ ಡಿಆರ್ ಎಫ್ )ಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದಿದೆ. ಮಂಗಳವಾರ ಈ ಕುರಿತ ತೀರ್ಪು ಹೊರಬಿದ್ದಿದೆ.

- Advertisement -

ಪಿಎಂ ಕೇರ್ಸ್ ಫಂಡ್ ನಡಿ ಸಂಗ್ರಹವಾದ ಹಣ ಸಂಪೂರ್ಣವಾಗಿ ಚಾರಿಟೇಬಲ್ ಟ್ರಸ್ಟ್ ನ ಹಣ, ಇದಕ್ಕೂ ಎನ್ ಡಿಆರ್ ಎಫ್ ಗೂ ಸಂಬಂಧವಿಲ್ಲ ಎಂದು ಕೋರ್ಟ್ ತಿಳಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ಯಾರು ಬೇಕಾದಾರೂ, ಯಾವಾಗ ಬೇಕಾದರೂ ಸ್ವ ಇಚ್ಛೆಯಿಂದ ದಾನ ಮಾಡಬಹುದು. ಆದರೆ, ಪಿಎಂ ಕೇರ್ಸ್ ಫಂಡ್ ಕೇವಲ ಕೋವಿಡ್ 19 ನಿರ್ವಹಣೆಗೆ ಸೇರಿದ್ದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಪಿಎಂ ಕೇರ್ಸ್ ನಡಿ ಸಂಗ್ರಹವಾದ ಹಣ ಎನ್ ಡಿ ಆರ್ ಎಫ್ ಗೆ ವರ್ಗಾಯಿಸಬೇಕೆಂದು ಕೋರಿ ಸರಕಾರೇತರ ಸಂಘಟನೆಯೊಂದು ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿತ್ತು.

- Advertisement -

ಪಿಎಂ ಕೇರ್ಸ್ ಫಂಡ್ ಕುರಿತ ಆರ್ ಟಿಐ ಅರ್ಜಿಗೆ ಮಾಹಿತಿ ನೀಡಲು ಮತ್ತೊಮ್ಮೆ ಪಿಎಂಒ ತಡೆ

ಇನ್ನೊಂದೆಡೆ, ಕೋವಿಡ್-19 ನಿರ್ವಹಣೆಗಾಗಿ ಸ್ಥಾಪಿಸಲಾದ ಪಿಎಂ-ಕೇರ್ಸ್ ಫಂಡ್ ಕುರಿತ ಮಾಹಿತಿ ನೀಡಲು ಪ್ರಧಾನಿ ಸಚಿವಾಲಯ ಮತ್ತೊಮ್ಮೆ ತಡೆಯೊಡ್ಡಿದೆ. ಉದ್ದೇಶಿತ ನಿಧಿ ಕುರಿತ ಮಾಹಿತಿ ಪಡೆಯಲು ಆರ್ ಟಿಐ ಕಾರ್ಯಕರ್ತರೊಬ್ಬರ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಇಂತಹ ಮಾಹಿತಿ ನೀಡುವುದರಿಂದ ಪ್ರಧಾನಿ ಸಚಿವಾಲಯದ ಮಾಹಿತಿ ಅಸಮರ್ಪಕವಾಗಿ ನಿರ್ವಹಿಸಿದಂತಾಗುವುದು ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ಅಥವಾ ಕೆಂದ್ರ ಮಾಹಿತಿ ಆಯೋಗದ ಆದೇಶವಿಲ್ಲದೆ, ಆರ್ ಟಿಐ ಕಲಂ 7(9)ರಡಿ ಇಂತಹ ಮಾಹಿತಿ ನೀಡುವಂತಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಆರ್ ಟಿಐ ಕಾರ್ಯಕರ್ತ ಲೋಕೇಶ್ ಬಾತ್ರ ಎಂಬವರು ಸಲ್ಲಿಸಿದ್ದ ಅರ್ಜಿಗೆ ಈ ಪ್ರತಿಕ್ರಿಯೆ ನೀಡಲಾಗಿದೆ. ಈ ಹಿಂದೆಯೂ ಪಿಎಂ-ಕೇರ್ಸ್ ನಿಧಿ ಬಗ್ಗೆ ಕೇಳಲಾದ ಮಾಹಿತಿ ಬಗ್ಗೆ ಸಚಿವಾಲಯ ಉತ್ತರ ನೀಡಲು ನಿರಾಕರಿಸಿತ್ತು. ಕೊರೊನಾ ನಿರ್ವಹಣೆಗಾಗಿ ಸಾರ್ವಜನಿಕರಿಂದ ದೇಣಿಗೆ ಪಡೆಯುವ ಉದ್ದೇಶದಿಂದ ಈ ನಿಧಿ ಸ್ಥಾಪಿಸಲಾಗಿತ್ತು. ಸಾವಿರಾರು ಕೋಟಿ ರು. ದೇಣಿಗೆ ಈ ನಿಧಿಗೆ ಹರಿದು ಬಂದಿದೆ ಎನ್ನಲಾಗುತ್ತಿದೆ.

Join Whatsapp