ದಿಲ್ಲಿ ಗಲಭೆಯ ವೇಳೆ ಸ್ಫೋಟದಲ್ಲಿ ಗಾಯ: ಅಪಘಾತವೆಂದು ಎಫ್.ಐ.ಆರ್ ದಾಖಲಿಸಿದ ಪೊಲೀಸರು

Prasthutha|

ಹೊಸದಿಲ್ಲಿ: ಹಳೆಯ ಮುಸ್ತಫಾಬಾದ್ ನ 22ರ ಹರೆಯದ ಬಟ್ಟೆ ಕಾರ್ಮಿಕನೊಬ್ಬ ಈ ವರ್ಷದ ಫೆಬ್ರವರಿಯಲ್ಲಿ ಸಂಭವಿಸಿದ ಈಶಾನ್ಯ ದಿಲ್ಲಿ ಗಲಭೆಯ ವೇಳೆ ಸ್ಫೋಟವೊಂದರಲ್ಲಿ ತನ್ನ ಬಲಗೈ ಮತ್ತು ಎಡಗೈ ಬೆರಳನ್ನು ಕಳೆದುಕೊಂಡಿದ್ದ. ಆದರೆ ಪೊಲೀಸರು ದಾಖಲಿಸಿದ ಎಫ್.ಐ.ಆರ್ ನಲ್ಲಿ ಆತ ‘ಅಪಘಾತ’ದಲ್ಲಿ ಗಾಯಗೊಂಡಿದ್ದ ಎಂದು ದಾಖಲಿಸಲಾಗಿದೆ.

- Advertisement -

ಫೆ.25ರಂದು ಅಂಗವಿಚ್ಛೇದನಗೊಂಡಿರುವ ಅಕ್ರಂ ಖಾನ್ ಗುರುತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾನೆ. ಎಫ್.ಐ.ಆರ್ ನಲ್ಲಿ ವಾಸ್ತವವನ್ನು ತಿರುಚಲಾಗಿದ್ದು, ಎಫ್.ಐ.ಆರ್ ಪ್ರತಿಯನ್ನು ಪೊಲೀಸರು ಇದುವರೆಗೆ ತನಗೆ ನೀಡಿಲ್ಲ ಎಂದು ಅಕ್ರಂ ಹೇಳಿದ್ದಾನೆ.

ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್.ಐ.ಆರ್ ನ್ಯೂಸ್ 18ಗೆ ದೊರೆತಿದೆ. ಘಟನೆಯು ಅಪಘಾತದಿಂದ ನಡೆದಿರುವುದಾಗಿ ಅದು ಬಣ್ಣಿಸುತ್ತದೆ. ಪೊಲೀಸರು ಭಾರತೀಯ ದಂಡಸಂಹಿತೆಯ 279 (ಅತಿ ವೇಗದ ಚಾಲನೆ) ಮತ್ತು 337ನೆ (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವುಂಟುಮಾಡುವ ಕಾರ್ಯದಲ್ಲಿ ಉಂಟಾದ ಗಾಯ) ವಿಧಿಯಡಿ ಪ್ರಕರಣ ದಾಖಲಿಸಿದ್ದಾರೆ.

- Advertisement -

ಫೆಬ್ರವರಿ 24ರ ಮಧ್ಯಾಹ್ನ 2 ಗಂಟೆಯ ವೇಳೆ ತಾನು ಕಸಬ್ಪುರದ ಇಜ್ತೆಮಾಗೆ ಹೊರಟಿದ್ದೆ. ಆದರೆ ತನಗೆ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ ಎಂದು ನ್ಯೂಸ್ 18ಗೆ ಅಕ್ರಂ ತಿಳಿಸಿದ್ದಾನೆ.

“ನಾನು ಭಜನ್ಪುರ ಮಝಾರ್ ಸಮೀಪ ತಲುಪಿದಾಗ ಹಿಂದೂ ಗುಂಪೊಂದು ನನ್ನ ಮೇಲೆ ದಾಳಿ ನಡೆಸಿತ್ತು. ನಾನು ಜೀವ ರಕ್ಷಣೆಗಾಗಿ ಓಡುವಾಗ ಮೋಹನ್ ನರ್ಸಿಂಗ್ ಹೋಂನ ಮೇಲಿಂದ ನನ್ನ ಮೇಲೆ ಬಾಂಬೊಂದನ್ನು ಎಸೆಯಲಾಯಿತು. ನಾನು ಅಪ್ರಜ್ನಾವಸ್ಥೆಯಲ್ಲಿ ಬಿದ್ದುಬಿಟ್ಟಿದ್ದೆ. ನಂತರ ಪ್ರಜ್ನೆ ಮರಳುವಾಗ  ಮೆಹರ್ ಆಸ್ಪತ್ರೆಯಲ್ಲಿದ್ದೆ” ಎಂದು ತಿಳಿಸಿದ್ದಾನೆ.

ಘಟನೆ ನಡೆದ ದಿನ ಶಾಸ್ತ್ರಿ ಪೊಲೀಸ್ ಠಾಣೆಗೆ ಅಪಘಾತದ ಕುರಿತು ಕರೆಯೊಂದು ಬಂದಿತ್ತು. ಆ ನಂತರ ಪೊಲೀಸನೋರ್ವನನ್ನು ಜಿಟಿಬಿಗೆ ಕಳುಹಿಸಲಾಗಿತ್ತು. ಆಗ ಖಾನ್ ಹೇಳಿಕೆ ನೀಡುವ ಸ್ಥಿತಿಯಲ್ಲಿರಲಿಲ್ಲ. ಎಂ.ಎಲ್.ಸಿ (ವೈದ್ಯಕೀಯ ಕಾನೂನು ಪ್ರಕರಣ) ಆಧಾರದ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಆದರೆ ತಾನು ಜಿಟಿಬಿಗೆ ದಾಖಲಾದ ಬಳಿಕ ಯಾವುದೇ ಪೊಲೀಸರು ತನ್ನನ್ನು ಭೇಟಿಯಾಗಲು ಬಂದಿಲ್ಲ ಎಂದು ಅಕ್ರಂ ಖಾನ್ ಹೇಳಿದ್ದಾನೆ.

ದಿಲ್ಲಿ ಗಲಭೆ ತನಿಖೆಯಲ್ಲಿ ಪೊಲೀಸರು ತಾರತಮ್ಯವೆಸಗುತ್ತಿದ್ದಾರೆ.  ಬದುಕುಳಿದ ಹಲವು ಸಂತ್ರಸ್ತರು ಆರೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ತಮ್ಮ ದೂರುಗಳನ್ನು ತನಿಖೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್  ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಿದವರನ್ನು ಗುರಿಪಡಿಸಿದೆ. ಅದೇವೇಳೆ ಗಲಭೆಗೆ ಪ್ರಚೋದನೆ ನೀಡಿ ಭಾಷಣ ಮಾಡಿದ ಕಪಿಲ್ ಮಿಶ್ರಾರಂತಹ ನಾಯಕರ ಹೆಸರನ್ನು ಸೇರಿಸಲಾಗಿಲ್ಲ.

Join Whatsapp