ತಿಳಿಯಲೇಬೇಕಾದ ಬಾಬ್ರಿ ಧ್ವಂಸದ ಕರಾಳ ಇತಿಹಾಸ

Prasthutha|

ಘಟನೆ ನಡೆದು 28 ವರ್ಷಗಳ ಬಳಿಕ ಬಾಬ್ರಿ ಮಸ್ಜಿದ್ ಧ್ವಂಸದ ತೀರ್ಪು ಬಂದಿದ್ದು, ನ್ಯಾಯಾಂಗವು ನ್ಯಾಯದ ಅಣಕ ಮಾಡಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಬಾಬ್ರಿ ಮಸ್ಜಿದ್ ಮತ್ತು ಅದರ ಧ್ವಂಸದ ಕರಾಳ ಇತಿಹಾಸವನ್ನು ಕಾಲಾನುಕ್ರಮಣಿಕೆಯೊಂದಿಗೆ ಇಲ್ಲಿ ನೀಡಲಾಗಿದೆ.

- Advertisement -

 ► 1528ರಲ್ಲಿ ಮೊಘಲ್ ಚಕ್ರವರ್ತಿ ಬಾಬರನಿಗಾಗಿ ಔದ್(ಅಯೋಧ್ಯೆ) ಗವರ್ನರ್ ಮೀರ್ ಬಾಖೀ ಬಾಬರಿ ಮಸೀದಿಯನ್ನು ನಿರ್ಮಿಸುತ್ತಾರೆ.

1885 ಜುಲೈ 19 : 16ನೇ ಶತಮಾನದಲ್ಲಿ ಬಾಬರೀ ಮಸೀದಿಯ ಮುಂದೆ ನಿರ್ಮಿಸಲಾದ ‘ರಾಮ್ ಛಬೂತ್ರ’ ದ ಮಾಲೀಕತ್ವವನ್ನು ಕೋರಿ ಸನ್ಯಾಸಿ ರಘುಬರ್ ದಾಸ್ ಫೈಝಾಬಾದ್ ನ್ಯಾಯಾಲಯದ ಮೆಟ್ಟಿಲೇರುತ್ತಾರೆ.

- Advertisement -

1949 ಡಿಸಂಬರ್ 22 : ಹಿಂದುತ್ವವಾದಿಗಳ ಒಂದು ಗುಂಪು ಬಾಬರಿ ಮಸೀದಿಯಲ್ಲಿ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತದೆ. ಇದರ ವಿರುದ್ಧದ ಪ್ರಕರಣ ನ್ಯಾಯಾಲಯ ತಲುಪುತ್ತದೆ. ಹಿಂದೂ ಮತ್ತು ಮುಸ್ಲಿಮರ ಪ್ರವೇಶವನ್ನು ನ್ಯಾಯಾಲಯ ನಿಷೇಧಿಸುತ್ತದೆ.

1950 ಜನವರಿ 16: ಭೂ ಮಾಲೀಕತ್ವದ ಪ್ರಕರಣ ನ್ಯಾಯಾಲಯ ತಲುಪುತ್ತದೆ. ಪೂಜೆಗೆ ಅನುಮತಿ ಕೋರಿ ಗೋಪಾಲ್ ಸಿಂಗ್ ವಿಶಾರದ್ ನ್ಯಾಯಾಲಯವನ್ನು ಸಂಪರ್ಕಿಸುತ್ತಾರೆ.

1950 ಡಿಸೆಂಬರ್ : ಪೂಜೆಗೆ ಅನುಮತಿ ಕೋರಿ ರಾಮ ಜನ್ಮ ಭೂಮಿ ನ್ಯಾಸ್ ಅಧ್ಯಕ್ಷ ನ್ಯಾಯಾಲಯಕ್ಕೆ. ಈ ಎರಡು ಅರ್ಜಿಗಳನ್ನು ಜೊತೆಯಾಗಿ ಪರಿಗಣಿಸಲು ಫೈಝಾಬಾದ್ ಸಿವಿಲ್ ಕೋರ್ಟು ನಿರ್ಧರಿಸುತ್ತದೆ.

1959 ಡಿಸೆಂಬರ್: ಮುಸ್ಲಿಮರಿಂದ ಮಸೀದಿಯನ್ನು ಬಿಡುಗಡೆಗೊಳಿಸಿ ನೀಡುವಂತೆ ನಿರ್ಮೋಹಿ ಅಖಾಡ ನ್ಯಾಯಾಲಯಕ್ಕೆ.

1964 ಏಪ್ರಿಲ್ : ಮಾಲೀಕತ್ವಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳನ್ನು ಒಟ್ಟಾಗಿ ಪರಿಗಣಿಸಲು ನ್ಯಾಯಾಲಯ ನಿರ್ಧರಿಸುತ್ತದೆ.

1984 : ವಿಶ್ವ ಹಿಂದೂ ಪರಿಷತ್ ಪೂಜೆಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಆಂದೋಲನ ಪ್ರಾರಂಭಿಸುತ್ತದೆ. ರಾಮ ಮಂದಿರವನ್ನು ಧ್ವಂಸಗೊಳಿಸಿದ ನಂತರ ಮೊಘಲ್ ಚಕ್ರವರ್ತಿ ಬಾಬರ್ ಅವರು ಈ ಮಸೀದಿಯನ್ನು ನಿರ್ಮಿಸಿದ್ದಾರೆ ಎಂದು ವಿ.ಎಚ್.ಪಿ ಹೇಳುತ್ತದೆ.

1986 ಫೆಬ್ರವರಿ 1 : ಹಿಂದೂಗಳು ಪೂಜಿಸಬಹುದು ಎಂದು ಫೈಝಾಬಾದ್ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡುತ್ತದೆ. ಮುಚ್ಚಲ್ಪಟ್ಟ ಮಸೀದಿಯ ಕೆಳಭಾಗವನ್ನು ಪೂಜೆಗೆ ತೆರೆದುಕೊಡಲು ಆದೇಶ.

1986 ಫೆಬ್ರವರಿ 3 : ಫೈಝಾಬಾದ್ ನ್ಯಾಯಾಲಯದ  ತೀರ್ಪಿನ ವಿರುದ್ಧ ಅಲಹಾಬಾದ್ ಹೈಕೋರ್ಟಿನಲ್ಲಿ ಪ್ರಕರಣ ದಾಖಲಾಗುತ್ತದೆ.

1989 ನವೆಂಬರ್ 9 : ಅಂದಿನ ಪ್ರಧಾನಿ ರಾಜೀವ್ ಗಾಂಧಿ ವಿವಾದಿತ ಪ್ರದೇಶದಲ್ಲಿ ಶಿಲಾನ್ಯಾಸ ನೆರವೇರಿಸಲು ಅನುಮತಿ ನೀಡುತ್ತಾರೆ.

1990 ಸೆಪ್ಟೆಂಬರ್ 25 : ಅಂದಿನ ಬಿಜೆಪಿಯ ಅಧ್ಯಕ್ಷರಾಗಿದ್ದ ಎಲ್.ಕೆ ಅಡ್ವಾಣಿ ಗುಜರಾತ್ ನ ಸೋಮನಾಥ್ ನಿಂದ ಅಯೋಧ್ಯೆಯವರೆಗೆ ರಥಯಾತ್ರೆ ಕೈಗೊಳ್ಳುತ್ತಾರೆ.

1990 ಅಕ್ಟೋಬರ್ 23 : ಅಡ್ವಾಣಿಯನ್ನು ಲಾಲು ಪ್ರಸಾದ್ ಸರಕಾರ ಬಿಹಾರದ ಸಮಸ್ತಿಪುರದಲ್ಲಿ ಬಂಧಿಸಿ ರಥಯಾತ್ರೆಯನ್ನು ತಡೆಯುತ್ತದೆ. ಅದರೊಂದಿಗೆ ಕೇಂದ್ರದಲ್ಲಿ ವಿ.ಪಿ ಸಿಂಗ್ ಗೆ ನೀಡಿದ ಬೆಂಬಲವನ್ನು ಬಿಜೆಪಿಯು ಹಿಂಪಡೆಯುತ್ತದೆ. ಸರಕಾರ ಉರುಳುತ್ತದೆ.

1990 ಅಕ್ಟೋಬರ್ 30 : ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭದ್ರತಾ ವ್ಯವಸ್ಥೆಯನ್ನು ಬೇಧಿಸಿ ಬಾಬರಿ ಮಸೀದಿಯ ಗುಮ್ಮಟಗಳ ಮೇಲೆ ಧ್ವಜ ಹಾರಿಸುತ್ತಾರೆ.

 ►ಡಿಸೆಂಬರ್ 6, 1992:  ಬಿಜೆಪಿಯ ರಾಷ್ಟ್ರವ್ಯಾಪಿ ಕರಸೇವಾ ಅಭಿಯಾನವು ಅಯೋಧ್ಯ ಸೇರುತ್ತದೆ.  ಹತ್ತು ಸಾವಿರಕ್ಕೂ ಮಿಕ್ಕ ಕರಸೇವಕರು ಬಾಬರೀ ಮಸೀದಿಯನ್ನು ಧ್ವಂಸಗೊಳಿಸಿ, ತಾತ್ಕಾಲಿಕವಾಗಿ ದೇವಾಲಯ ಸ್ಥಾಪಿಸುತ್ತಾರೆ. ಉತ್ತರಪ್ರದೇಶದ ಕಲ್ಯಾಣ್ ಸಿಂಗ್ ಸರಕಾರವನ್ನು ವಿಸರ್ಜಿಸಲಾಗುತ್ತದೆ. ರಾಷ್ಟ್ರವ್ಯಾಪಿ ಗಲಭೆಗಳು ನಡೆದು ನೂರಾರು ಜನರು ಕೊಲ್ಲಲ್ಪಡುತ್ತಾರೆ. ವಿವಾಧಿತ ಭೂಮಿಯನ್ನು ಕೇಂದ್ರ ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ.

1992 ಡಿಸೆಂಬರ್ 16 : ಬಾಬರೀ ಮಸೀದಿ ಧ್ವಂಸದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಕೇಂದ್ರವು ಎಂ.ಎಸ್. ಲಿಬರ್ಹಾನ್ ಅವರನ್ನು ಆಯುಕ್ತರನ್ನಾಗಿ ನೇಮಿಸುತ್ತದೆ.

2003 ಮಾರ್ಚ್ 12 : ದೇವಾಲಯದ ಸ್ಥಳದಲ್ಲೇ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ಕಂಡುಹಿಡಿಯಲು ಅಲಹಾಬಾದ್ ಹೈಕೋರ್ಟಿನ ನಿರ್ದೇಶನದಂತೆ ಭಾರತೀಯ ಪುರಾತತ್ವ ಅಧ್ಯಯನ ಇಲಾಖೆ (ಎಎಸ್ಐ) ಮಣ್ಣು ಅಗೆದು ಪರಿಶೋಧನೆ ನಡೆಸುತ್ತದೆ.

2009 ಜೂನ್ 30:  ಹದಿನೇಳು ವರ್ಷಗಳ ನಂತರ ಲಿಬರ್ಹಾನ್ ಆಯೋಗವು ತನ್ನ ವರದಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸುತ್ತದೆ.

2010 ಸೆಪ್ಟೆಂಬರ್ 30: ರಾಮ ಮಂದಿರವನ್ನು ನೆಲಸಮಗೊಳಿಸಿ ಬಾಬರೀ ಮಸ್ಜಿದ್ ನಿರ್ಮಿಸಿದ್ದರಿಂದ ಮಸೀದಿಯ ಭೂಮಿಯನ್ನು ಹಿಂದೂಗಳಿಗೆ ಪೂಜೆಗೆ ನೀಡಬೇಕು. ವಿವಾದಿತ ಭೂಮಿಯನ್ನು ಮೂರು ವಿಭಾಗಗಳ ನಡುವೆ ಸಮಾನವಾಗಿ ವಿಂಗಡಿಸಬೇಕು ಎಂದು ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠವು ತೀರ್ಪು ನೀಡುತ್ತದೆ. ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿರುವುದರಿಂದ ಧ್ವಂಸಗೊಂಡ ಬಾಬರೀ ಮಸೀದಿಯನ್ನು ಮಸೀದಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡುತ್ತದೆ.

2011 ಮೇ 09 : ಬಾಬರೀ ಮಸೀದಿ ಭೂಮಿಯನ್ನು ಮೂರು ಭಾಗವಾಗಿ ವಿಂಗಡಿಸುವ ಅಲಹಾಬಾದ್  ಹೈ ಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟು ತಡೆಹಿಡಿಯುತ್ತದೆ.

2017 ಏಪ್ರಿಲ್ 19: ಬಾಬರೀ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರ ವಿರುದ್ಧ ಕ್ರಿಮಿನಲ್ ಸಂಚು ಆರೋಪಗಳನ್ನು ಸುಪ್ರೀಂ ಕೋರ್ಟು ಮರುಸ್ಥಾಪಿಸುತ್ತದೆ.

2017 ಆಗಸ್ಟ್ 08 : ಬಾಬರೀ ಮಸೀದಿ ಇರುವ ಭೂಮಿಯಲ್ಲಿ ರಾಮ ಮಂದಿರವನ್ನು ನಿರ್ಮಿಸಬಹುದು ಮತ್ತು ಕರಸೇವಕರು ಧ್ವಂಸಗೊಳಿಸಿದ ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ನಾವು ಸಿದ್ಧರಿದ್ದೇವೆ ಎಂದು ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ಸುಪ್ರೀಂ ಕೋರ್ಟಿಗೆ ತಿಳಿಸುತ್ತದೆ.

2017 ಸೆಪ್ಟೆಂಬರ್ 11 : ಅಯೋಧ್ಯೆಯ ಬಾಬರೀ ಮಸ್ಜಿದ್, ರಾಮ ಜನ್ಮ ಭೂಮಿಯ ರಕ್ಷಣೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಇಬ್ಬರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಅಥವಾ ವಿಶೇಷ ನ್ಯಾಯಾಧೀಶರನ್ನು10 ದಿನಗಳೊಳಗೆ ನಾಮನಿರ್ದೇಶನ ಮಾಡುವಂತೆ ಅಲಹಾಬಾದ್ ಹೈಕೋರ್ಟಿಗೆ ಸುಪ್ರೀಂ ಕೋರ್ಟು ನಿರ್ದೇಶನ ಮಾಡುತ್ತದೆ.

2017 ಡಿಸೆಂಬರ್ 02 : ಬಾಬರೀ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡದೆ ಭೂ ಮಾಲೀಕತ್ವದ ಮೇಲ್ಮನವಿಯನ್ನು ಆಲಿಸದಂತೆ ಮಾಜಿ ನ್ಯಾಯಾಧೀಶ ಲಿಬರ್ಹಾನ್ ಸುಪ್ರೀಂ ಕೋರ್ಟಿಗೆ ಮನವಿ ಮಾಡುತ್ತಾರೆ.

2018 ಫೆಬ್ರವರಿ 8 : ಸುಪ್ರೀಂ ಕೋರ್ಟಿನಲ್ಲಿರುವ ಬಾಬರಿ ಪ್ರಕರಣವನ್ನು ಭೂ ವಿವಾದವೆಂದು ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿಕೆ.

2018 ಅಕ್ಟೋಬರ್ 30 : “ಮಸೀದಿ ಇಸ್ಲಾಂ ಧರ್ಮದ ಆರಾಧನೆಯ ಅವಿಭಾಜ್ಯ ಅಂಗವಲ್ಲ” ಎಂಬ ಸುಪ್ರೀಂ ಕೋರ್ಟಿನ 1994ರ ವಿವಾದಿತ ತೀರ್ಪನ್ನು ಮರುಪರಿಶೀಲಿಸಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ತಿಳಿಸುತ್ತದೆ.

2019 ಜುಲೈ 19 : ಎಲ್ ಕೆ ಅಡ್ವಾಣಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಆರೋಪಿಗಳಾಗಿರುವ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಂಬತ್ತು ತಿಂಗಳೊಳಗೆ ತೀರ್ಪು ನೀಡಲು ಸುಪ್ರೀಂ ಕೋರ್ಟು ಆದೇಶಿಸುತ್ತದೆ. ಇದಕ್ಕಾಗಿ ಸೆಪ್ಟಂಬರ್ 30ರಂದು ನಿವೃತ್ತರಾಗಬೇಕಿದ್ದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಅವಧಿಯನ್ನು ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ನ್ಯಾಯಪೀಠವು ವಿಸ್ತರಿಸುತ್ತದೆ.

2019 ಸೆಪ್ಟೆಂಬರ್ 21 : ಬಾಬರೀ ಮಸೀದಿ ಧ್ವಂಸ ಪ್ರಕರಣದಲ್ಲಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಕಳುಹಿಸುತ್ತದೆ.

2019 ನವೆಂಬರ್ 09 : ‘400 ವರ್ಷಗಳಿಗೂ ಹೆಚ್ಚು ಕಾಲ ಮುಸ್ಲಿಮರು ಆರಾಧನೆ ನಡೆಸುತ್ತಿದ್ದ ಬಾಬರೀ ಮಸೀದಿಯ 2.77 ಭೂಮಿಯನ್ನು ರಾಮಜನ್ಮಭೂಮಿಯಾಗಿದೆ. ಆದ್ದರಿಂದ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿಯನ್ನು ಹಸ್ತಾಂತರಿಸಬೇಕು. ಅದರ ಜೊತೆಗೆ ಮಸೀದಿ ನಿರ್ಮಿಸಲು ಸುನ್ನೀ ವಕ್ಫ್ ಮಂಡಳಿಗೆ ಐದು ಎಕರೆ ಭೂಮಿಯನ್ನು ಸರಕಾರ ನೀಡಬೇಕು’, ಎಂದು ಸುಪ್ರೀಂ ಕೋರ್ಟು ವಿವಾದಿತ ತೀರ್ಪು ನೀಡುತ್ತದೆ.

2020 ಜನವರಿ 6 : ಬಾಬರೀ ಮಸೀದಿ ಧ್ವಂಸಗೊಳಿಸಿದ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸಲು ಕೇಂದ್ರ ಸರಕಾರವು 15 ಸದಸ್ಯರ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ನ್ನು ರಚಿಸುತ್ತದೆ.

2020 ಜುಲೈ 29  : ಬಾಬರೀ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಹೇಳಿಕೆ ಕೊಡುವ ಕಾರ್ಯ ಪೂರ್ಣಗೊಳ್ಳುತ್ತದೆ. 

2020 ಆಗಸ್ಟ್ 5: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸುತ್ತಾರೆ.

2020 ಸೆಪ್ಟೆಂಬರ್ 30 : ಬಾಬರೀ ಮಸೀದಿ ಧ್ವಂಸದ ಎಲ್ಲಾ ಆರೋಪಿಗಳನ್ನು ಲಕ್ನೋ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದೆ.

Join Whatsapp