ತಬ್ಲೀಗಿ ಜಮಾತ್ ಸಭೆಗಳಲ್ಲಿ ಭಾಗವಹಿಸಿದ್ದ ವಿದೇಶಿ ಮುಸ್ಲಿಮರ ವಿರುದ್ಧದ ಎಫ್ ಐಆರ್ ರದ್ದು | ಬಾಂಬೆ ಹೈಕೋರ್ಟ್ ತೀರ್ಪು

Prasthutha|

ಮುಂಬಯಿ : ದೆಹಲಿಯ ನಿಜಾಮುದ್ದೀನ್ ನ ತಬ್ಲೀಗ್ ಜಮಾಅತ್ ಸಭೆಗಳಲ್ಲಿ ಭಾಗವಹಿಸಿದ್ದ ವಿದೇಶಿಯರ ವಿರುದ್ಧದ ಎಫ್ ಐಆರ್ ಗಳನ್ನು ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ನ್ಯಾಯಪೀಠ ರದ್ದುಪಡಿಸಿದೆ. ಐಪಿಸಿ, ಸಾಂಕ್ರಾಮಿಕ ಸೋಂಕುಗಳ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ 29 ವಿದೇಶಿ ಪ್ರಜೆಗಳು ದಾಖಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ತೀರ್ಪು ನೀಡಿದೆ. ಸಭೆಯಲ್ಲಿ ಭಾಗವಹಿಸುವ ಮೂಲಕ ಪ್ರವಾಸಿ ವೀಸಾದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆಂದು ವಿದೇಶಿ ಪ್ರಜೆಗಳ ವಿರುದ್ಧ ದೂರು ದಾಖಲಾಗಿತ್ತು.

- Advertisement -

“ಸರಕಾರ ರಾಜಕೀಯ ಒತ್ತಡದಿಂದ ಈ ಕ್ರಮ ಕೈಗೊಂಡಿರುವಂತೆ ಕಾಣುತ್ತಿದೆ. ಪೊಲೀಸರು ತಮ್ಮ ವ್ಯಾಪ್ತಿಯ ಅಧಿಕಾರವನ್ನು ಜಾರಿಗೊಳಿಸುವಲ್ಲಿ ಧೈರ್ಯ ತೋರಿಲ್ಲ. ಒಂದು ರಾಜಕೀಯ ಸರಕಾರವು ವಿಪತ್ತು ಅಥವಾ ಪಿಡುಗುಗಳಿದ್ದಾಗ ಹರಕೆಯ ಕುರಿಗಳನ್ನು ಹುಡುಕಲು ಬಯಸುತ್ತದೆ. ಪರಿಸ್ಥಿತಿಗಳನ್ನು ಗಮನಿಸಿದಾಗ, ಈ ವಿದೇಶಿ ಪ್ರಜೆಗಳನ್ನು ಹರಕೆಯ ಕುರಿ ಮಾಡಿರುವಂತೆ ಕಂಡುಬರುತ್ತಿದೆ’’ ಎಂದು ನ್ಯಾಯಮೂರ್ತಿ ಟಿ.ವಿ. ನಲವಾಡೆ ಮತ್ತು ನ್ಯಾಯಮೂರ್ತಿ ಎಂ.ಜಿ. ಸೆವ್ಲಿಕಾರ್ ರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
“ಆರೋಪಗಳು ತುಂಬಾ ಅಸ್ಪಷ್ಟವಾಗಿವೆ. ಈ ಆರೋಪಗಳಿಂದ ಅವರು ಇಸ್ಲಾಮ್ ಅನ್ನು ಪ್ರಚಾರ ಮಾಡುತ್ತಿದ್ದರು ಮತ್ತು ಮತಾಂತರದ ಉದ್ದೇಶ ಹೊಂದಿದ್ದರು ಎಂಬುದಕ್ಕೆ ಯಾವುದೇ ಹಂತದಲ್ಲಿ ಅನುಮಾನ ಮೂಡುವುದಿಲ್ಲ. ಸರಕಾರ ವಿಭಿನ್ನ ದೇಶಗಳ, ವಿಭಿನ್ನ ಧರ್ಮಗಳ, ವಿಭಿನ್ನ ನಾಗರಿಕರನ್ನು ಭಿನ್ನವಾಗಿ ನಡೆಸಿಕೊಳ್ಳಲಾಗದು’’ ಎಂದು ಕೋರ್ಟ್ ತಿಳಿಸಿದೆ.

ಎನ್.ಆರ್.ಸಿ ಮತ್ತು ಸಿಎಎ ಪ್ರತಿಭಟನೆ :
ಕಳೆದ ಜನವರಿಯಿಂದ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ, ಧರಣಿಗಳು ನಡೆಯುತ್ತಿವೆ. ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವವರಲ್ಲಿ ಬಹುತೇಕರು ಮುಸ್ಲಿಮರು. ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಮರಿಗೆ ತಾರತಮ್ಯ ಮಾಡುತ್ತದೆ ಎಂಬುದು ಅವರ ಭಾವನೆಯಾಗಿದೆ. ಮುಸ್ಲಿಮ್ ಆಶ್ರಿತರಿಗೆ ಮತ್ತು ವಲಸೆಗಾರರಿಗೆ ಪೌರತ್ವ ಲಭಿಸುವುದಿಲ್ಲ ಎಂಬ ಭಾವನೆ ಅವರಲ್ಲಿದೆ. ಅವರು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧವೂ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರಸ್ತುತ ಕ್ರಮ ಕೈಗೊಂಡರೆ, ಅದು ಮುಸ್ಲಿಮರ ಮನದಲ್ಲಿ ಭಯವನ್ನು ಸೃಷ್ಟಿಸುತ್ತದೆ ಎಂದು ಹೇಳಬಹುದು. ಮುಸ್ಲಿಮರ ವಿರುದ್ಧ ಯಾವುದೇ ರೀತಿಯ, ಯಾವುದೇ ವಿಷಯಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳಬಹುದು ಎಂಬ ಎಚ್ಚರಿಕೆ ಮುಸ್ಲಿಮರ ನಡುವೆ ಪರೋಕ್ಷವಾಗಿ ಹರಡಬಹುದು. ಬೇರೆ ದೇಶಗಳ ಮುಸ್ಲಿಮರ ಜೊತೆ ಸಂಪರ್ಕವಿಟ್ಟುಕೊಂಡಿರುವುದಕ್ಕೂ ತಮ್ಮ ಮೇಲೆ ಕ್ರಮ ಕೈಗೊಳ್ಳಬಹುದು ಎಂಬ ಭಾವನೆ ಬರಬಹುದು. ಹೀಗಾಗಿ, ಈ ವಿದೇಶಿಯರ ವಿರುದ್ಧದ ಕ್ರಮದಲ್ಲಿ ದುರುದ್ದೇಶವಿದ್ದಂತೆ ಕಂಡುಬರುತ್ತಿದೆ. ಎಫ್ ಐಆರ್ ರದ್ದತಿ ವಿಚಾರ ಕೋರಿದಾಗ, ಅದನ್ನು ಮಾನ್ಯ ಮಾಡಲು ದುರುದ್ದೇಶ ಪ್ರಮುಖ ಆಧಾರವಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

Join Whatsapp