ಕೊರೋನಗೆ ಮದ್ದು ಸಂಶೋಧಿಸಿದ್ದೇನೆಂದ ಆಯುರ್ವೇದ ಡಾಕ್ಟರ್ ಗೆ ಸುಕೋರ್ಟ್ ನಿಂದ ರೂ.10,000 ದಂಡ

Prasthutha|

ನವದೆಹಲಿ : ಕೊರೋನಗೆ ಔಷಧಿ ಕಂಡು ಹಿಡಿದಿದ್ದೇನೆ ಎಂದ ಆಯುರ್ವೇದ ವೈದ್ಯರೊಬ್ಬರಿಗೆ ಸುಪ್ರೀಂ ಕೋರ್ಟ್ ರೂ. 10,000 ದಂಡ ವಿಧಿಸಿದೆ. ಹರ್ಯಾಣ ಮೂಲದ ಆಯುರ್ವೇದ ವೈದ್ಯ ಓಂಪ್ರಕಾಶ್ ವೈದ್ ಗ್ಯಾಂತರ ಎಂಬವರ ವಿರುದ್ಧ ಕೋರ್ಟ್ ದಂಡ ವಿಧಿಸಿದೆ.
ಕೋವಿಡ್ 19ಗೆ ಚಿಕಿತ್ಸೆ ನೀಡಲು ತಾವು ಸಂಶೋಧಿಸಿದ ಔಷಧಿ ಬಳಸುವಂತೆ ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗೆ ಆದೇಶಿಸುವಂತೆ ಓಂಪ್ರಕಾಶ್ ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಿದ್ದರು. ತಮ್ಮ ದೇಸಿ ಔಷಧಿಯಿಂದ ರೋಗಿಗಳು ಮಾರಣಾಂತಿಕ ಕಾಯಿಲೆಯಿಂದ ಗುಣಮುಖರಾಗಿದ್ದರು ಎಂದು ಅವರು ಪ್ರತಿಪಾದಿಸಿದ್ದರು. ಬಿಎಎಂಎಸ್ ಪದವೀಧರರಾದ ವೈದ್ಯ ಓಂಪ್ರಕಾಶ್ ರ ಉತ್ಸಾಹಕ್ಕೆ ತಣ್ಣೀರೆರಚಿದ ನ್ಯಾಯಮೂರ್ತಿ ಸಂಜಯ್ ಕೆ. ಕೌಲ್ ನೇತೃತ್ವದ ನ್ಯಾಯಪೀಠ, ಪಿಐಎಲ್ ಆಧಾರ ರಹಿತ ಅಂಶ ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.
ಓಂಪ್ರಕಾಶ್ ಅವರ ಪಿಐಎಲ್ ಸಂಪೂರ್ಣ ತಪ್ಪು ಗ್ರಹಿಕೆಯಿಂದ ಕೂಡಿದೆ. ಇಂತಹ ಉದ್ದೇಶದಿಂದ ಕೋರ್ಟ್ ಗೆ ಬರಬಾರದು ಎಂಬ ಸಂದೇಶವನ್ನು ರವಾನಿಸಬೇಕಾಗಿದೆ. ಸಾರ್ವಜನಿಕರ ಗಮನ ಸೆಳೆಯುವ ಮತ್ತು ಪ್ರಚಾರದ ಉದ್ದೇಶದಿಂದ ಇಂತಹ ಅರ್ಜಿ ದಾಖಲಿಸಿರುವುದು ಕಂಡುಬರುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

Join Whatsapp