ಕಾಶ್ಮೀರ ನಕಲಿ ಎನ್ಕೌಂಟರ್: ಸಂತ್ರಸ್ತ ಯುವಕರ ಮೃತದೇಹ ಹೊರತೆಗೆದು ಗೌರವಯುತ ಅಂತ್ಯಸಂಸ್ಕಾರ

Prasthutha|

ಮೃತರಲ್ಲಿ ಓರ್ವ ಅಪ್ರಾಪ್ತ

- Advertisement -

ಗಂಟಮುಲ್ಲಾ, ಬಾರಮುಲ್ಲಾ: ಕಾಶ್ಮೀರಾದ ಬಾರಮುಲ್ಲಾ ಜಿಲ್ಲೆಯ ಗಂಟಮುಲ್ಲಾ ಗ್ರಾಮವು ಕಳೆದ ಶನಿವಾರದಂದು ಎಂದಿಗಿಂತ ಬೇಗನೇ ಎಚರಗೊಂಡಿತ್ತು. ಗ್ರಾಮದ ಪುರುಷರು ‘ಎನ್ಕೌಂಟರ್’ನಲ್ಲಿ ಮೃತಪಟ್ಟ ಓರ್ವ  ಅಪ್ರಾಪ್ತನನ್ನೊಳಗೊಂಡಂತೆ ಮೂವರು ಯುವಕರ ಮೃತದೇಹವನ್ನು ಹೊರತೆಗೆಯುವುದಕ್ಕಾಗಿ ಗೋರು ಸಲಿಕೆಗಳನ್ನು ಹಿಡಿದು ಬೆಟ್ಟದ ಇಳಿಜಾರಿನ ದಫನಭೂಮಿಯತ್ತ ತೆರಳಿದ್ದರು. ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅನುಮೋದಿಸಿದ ಮುಖ್ಯ ಸೇನಾ ಸಿಬ್ಬಂದಿಗಳ ‘ಮಾಡಬೇಕಾದ ಮತ್ತು ಮಾಡಬಾರದ ಕಾರ್ಯ’ಗಳ ಉಲ್ಲಂಘನೆಯಾಗಿದೆ ಎಂದು ಸೇನಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಶ್ರೀನಗರ-ಮುಝಫ್ಫರಬಾದ್ ರಸ್ತೆಯಲ್ಲಿರುವ ಈ ಗ್ರಾಮವು ಸಂಪೂರ್ಣವಾಗಿ ಸೆನಾವೃತಗೊಂಡ ಪ್ರದೇಶವಾಗಿದೆ. ಪೊಲೀಸರು, ಸೇನೆ ಮತ್ತು ಕೇಂದ್ರ ಮೀಸಲು ಪಡೆಯ ಅರೆಸೇನಾ ಪಡೆಗಳು ಇಲ್ಲಿ ಬೀಡುಬಿಟ್ಟಿವೆ. 200ಕ್ಕೂ ಹೆಚ್ಚು ಗುರುತು ಪತ್ತೆಯಾದ ಮತ್ತು ಪತ್ತೆಯಾಗದ ಉಗ್ರಗಾಮಿಗಳನ್ನು ದಫನಮಾಡಲಾಗಿರುವ ದಫನ ಭೂಮಿ ಇಲ್ಲಿದೆ. ಅವರಲ್ಲಿ ಶೋಪಿಯಾನಕ್ಕೆ ಕೆಲಸಕ್ಕಾಗಿ ಬಂದ ರಾಜೌರಿಯ ಮೂವರು ಯುವಕರ ಗೋರಿಯು ಒಳಗೊಂಡಿತ್ತು.

- Advertisement -

 ಜುಲೈ 17 ಮತ್ತು 18ರ ರಾತ್ರಿ ಈ ಮೂವರನ್ನು ಸೇನೆಯ ಶೋಪಿಯಾನದ ಅಮ್ಶಿಪುರದ 62 ರಾಷ್ಟ್ರೀಯ ರೈಫಲ್ ನ ಸೇನೆ ಹತ್ಯೆಮಾಡಿತ್ತು. ನಂತರ ಅವರನ್ನು ಗುರುತು ಪತ್ತೆಯಾಗದ ಉಗ್ರಗಾಮಿಗಳೆಂದು ಬಣ್ಣಿಸಲಾಗಿತ್ತು. ಅವರನ್ನು ತಮ್ಮ ತವರಿಗೆ 240 ಕಿ.ಮೀಟರ್ ದೂರವಿರುವ ಈ ಸ್ಮಶಾನದಲ್ಲಿ ಹೂಳಲಾಗಿತ್ತು.

22 ದಿನಗಳ ತನಕ ಯುವಕರನ್ನು ಸಂಪರ್ಕಿಸುವುದು ಅಸಾಧ್ಯವಾದಾಗ ಕುಟುಂಬಸ್ಥರು ರಾಜೌರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಅಮ್ಶಿಪುರದಲ್ಲಿ ಸಾವನ್ನಪ್ಪಿದ ಮೂವರು ತಮ್ಮ ಮಕ್ಕಳೆಂದು ಅವರು ಪ್ರತಿಪಾದಿಸಿದ್ದರು. ಸೇನೆ ಮತ್ತು ಪೊಲೀಸ್ ಪ್ರತ್ಯೇಕವಾದ ತನಿಖಾದೇಶವನ್ನು ಹೊರಡಿಸಿದ್ದವು. ಡಿ.ಎನ್.ಎ ಪರೀಕ್ಷೆ ಕೂಡ ಮೃತದೇಹ ಹೂಳಲ್ಪಟ್ಟ ಮೂವರು ರಾಜೌರಿ ಯುವಕರದ್ದೆಂದು ಖಚಿತಪಡಿಸಿತ್ತು.

ಶನಿವಾರದಂದು ಬೆಳಗಿನ ಜಾವ 5:30ಕ್ಕೆ ಸ್ಮಶಾನದಲ್ಲಿ ಆವರಿಸಿದ್ದ ಮೌನವು ಗೋರುಸಲಿಕೆ ಗಳ ಶಬ್ದಕ್ಕೆ  ಬೇಧಿಸಲ್ಪಟ್ಟಿತ್ತು. ತಮ್ಮ ಪ್ರೀತಿ ಪಾತ್ರರ ಮೃತದೇಹವನ್ನು ಪಡೆಯುವುದಕ್ಕಾಗಿ ಕುಟುಂಬವು ಮಾಡಿದ ಹೋರಾಟದ ಫಲವಾಗಿ ಅಬ್ರಾರ್ (16), ಇಮ್ತಿಯಾಝ್ (22) ಮತ್ತು ಇಬ್ರಾರ್ (25) ರ ದೇಹವನ್ನು ಹೊರತೆಗೆಯುವುದು ಸಾಧ್ಯವಾಗಿತ್ತು.

ದೇಹಗಳು ಹೊರತೆಗೆಯುತ್ತಿದ್ದಂತೆ ತಲ್ಲಣಗೊಂಡ ಹೆತ್ತವರು ಮತ್ತು ಸಂಬಂಧಿಕರು ಮೃತ ಯುವಕರ ದೇಹವನ್ನು ನೋಡುವ ಧೈರ್ಯವನ್ನು ಹೊಂದಿರಲಿಲ್ಲ. “ಜುಲೈ 18ರಂದು ಗೋರಿ ಅಗೆಯುವವರು ತೆಗೆದ ಮೃತದೇಹಗಳ ಚಿತ್ರದ ಮೂಲಕ ಅವರು ತಮ್ಮ ಮಕ್ಕಳನ್ನು ಗುರುತಿಸಿದ್ದರು” ಎಂದು ರಾಜೌರಿಯ ಸಾಮಾಜಿಕ ಕಾರ್ಯಕರ್ತ ಚೌದರಿ ಗುಫ್ತಾರ್ ಹೇಳುತ್ತಾರೆ.

“ದೇಹವನ್ನು ಚಿತ್ರದ ಮೂಲಕ ನೋಡಿದಾಗ ಇಮ್ತಿಯಾಝ್ ನ ಮುಖವು ಸಂಪೂರ್ಣವಾಗಿ ಗುರುತಿಸಲಾಗದಷ್ಟು ಸುಟ್ಟುಹೋಗಿತ್ತು. ಅಬ್ರಾರ್ ನ ಎದೆಯನ್ನು ಬುಲೆಟ್ ಗಳು ಸೀಳಿದ್ದವು. ಇಬ್ರಾರ್ ನ ಮುಖ ಕೂಡ ಬಾಗಶ: ವಿರೂಪಗೊಂಡಿತ್ತು” ಎಂದು ಅವರು ಹೇಳಿದರು. ಸ್ಮಶಾನದಲ್ಲಿ ಮಾಧ್ಯಮಗಳು ಮತ್ತು ದೊಡ್ಡ ಸಂಖ್ಯೆಯ ಪೊಲೀಸರು, ಅರೆಸೇನೆ ನಿಯೋಜಿಸಲಾಗಿತ್ತು. ಮೃತದೇಹಗಳನ್ನು ಹೊರತೆಗೆದ ನಂತರ ಆಂಬ್ಯುಲೆನ್ಸ್ ಮೂಲಕ ರಾಜೌರಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮೃತದೇಹದ ಗೌರವಯುತ ದಫನವನ್ನು ಮಾಡಲಾಗುವುದು.ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp