ಕರಿಯ ವ್ಯಕ್ತಿಯ ಇಸ್ಲಾಂ ನಂಬಿಕೆಯನ್ನು ಅಣಕಿಸಿದ್ದ ಅಮೆರಿಕ ಪೊಲೀಸರು | ವೀಡಿಯೊ ಜಾಗತಿಕ ಮಟ್ಟದಲ್ಲಿ ವೈರಲ್ | ಜಾರ್ಜ್ ಫ್ಲಾಯ್ಡ್ ಹತ್ಯೆ ಮಾದರಿಯಲ್ಲೇ ನಡೆದಿತ್ತು ಮುಹಯ್ಮಿನ್ ಸಾವು

Prasthutha|

ವಾಷಿಂಗ್ಟನ್ : ಅಮೆರಿಕದ ಫೋನಿಕ್ಸ್ ಪೊಲೀಸರು 2017ರಲ್ಲಿ ಮುಹಮ್ಮದ್ ಮುಹಯ್ಮಿನ್ ಜೂನಿಯರ್ ಎಂಬ ಕರಿಯ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಅಂತಿಮ ಕ್ಷಣಗಳ ವೀಡಿಯೊವೊಂದು ಜಾಗತಿಕ ಮಟ್ಟದಲ್ಲಿ ಜನಾಂಗೀಯವಾದದ ವಿರುದ್ಧ ಮತ್ತೊಮ್ಮೆ ಭಾರಿ ಆಕ್ರೋಶವನ್ನು ಹುಟ್ಟುಹಾಕಿದೆ. ಪೊಲೀಸರು ಮುಹಯ್ಮೀನ್ ಜೂನಿಯರ್ ಹತ್ಯೆ ಮಾಡುವಾಗ ಅವರ ಇಸ್ಲಾಂ ಧರ್ಮದ ಧಾರ್ಮಿಕ ನಂಬಿಕೆಯ ಬಗ್ಗೆ ಅವಹೇಳನ ಮಾಡುತ್ತಿರುವುದೂ ಈ ವೀಡಿಯೊದಿಂದ ಬಹಿರಂಗವಾಗಿದೆ. ಹಲವು ಪೊಲೀಸ್ ಅಧಿಕಾರಿಗಳು ಮುಹಯ್ಮೀನ್ ಅವರ ಕತ್ತನ್ನು ಮೊಣಕಾಲಿನಿಂದ ಒತ್ತಿ ಹಿಡಿದಿರುವ ಮತ್ತು ಈ ವೇಳೆ ಅಧಿಕಾರಿಗಳು, ಅವರ ನಂಬಿಕೆಗೆ ಅವಹೇಳನ ಮಾಡುವುದು ಈ ವೀಡಿಯೊದಲ್ಲಿ ಕಂಡು ಬಂದಿದೆ.

- Advertisement -

ಮುಹಯ್ಮಿನ್ ರ ಸಾವು ಮಿನ್ನೆಪೊಲಿಸ್ ಪೊಲೀಸರಿಂದ ಜಾರ್ಜ್ ಫ್ಲಾಯ್ಡ್ ಹತ್ಯೆಯ ಮಾದರಿಯಲ್ಲೇ ನಡೆದಿತ್ತು. ಜಾಗತಿಕ ಮಟ್ಟದಲ್ಲಿ ಜನಾಂಗೀಯ ದ್ವೇಷದ ವಿರುದ್ಧ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ವೀಡಿಯೊ ಈಗ ವಿಶ್ವದಾದ್ಯಂತ ವೈರಲ್ ಆಗುತ್ತಿದೆ. ಮುಹಯ್ಮೀನ್ ರ ಸಾವು ಸಂಭವಿಸಿ ಮೂರು ವರ್ಷಗಳಾದರೂ, ಅವರ ಸಾವಿಗೆ ನ್ಯಾಯಕ್ಕಾಗಿ ಇನ್ನೂ ಕಾಯುತ್ತಿದ್ದೇವೆ ಎಂದು ಅವರ ಕುಟಂಬದ ನ್ಯಾಯವಾದಿಗಳು ತಿಳಿಸಿದ್ದಾರೆ.
ಮುಹಯ್ಮಿನ್ ಸಾವಿನ ಆರೋಪಿಗಳಾದ ಆಸ್ವಾಡ್ ಗ್ರೀನರ್, ಜಾಸೊನ್ ಹೊಬೆಲ್, ರೊನಾಲ್ಡೊ ಕ್ಯಾನಿಲೊ, ಡೇವಿಡ್ ಹೆಡ್, ಸುಸಾನ್ ಹೀಬಿಗ್ನರ್, ಕೆವಿನ್ ಮ್ಯಾಕ್ ಗೊವಾನ್, ಜೇಮ್ಸ್ ಕ್ಲಾರ್ಕ್, ಡೆನ್ನಿಸ್ ಲೆರಾಕ್ಸ್, ರ್ಯಾನ್ ನಿಲ್ಸನ್, ಸ್ಟೀವನ್ ವಾಂಗ್ ಮುಂತಾದವರಲ್ಲಿ ಯಾರೊಬ್ಬರ ವಿರುದ್ಧವೂ ಇಲ್ಲಿ ವರೆಗೆ ಯಾವುದೇ ದೋಷಾರೋಪ ದಾಖಲಾಗಿಲ್ಲ ಮತ್ತು ಬಂಧನವಾಗಿಲ್ಲ. ಎಲ್ಲ ಆರೋಪಿಗಳು ಇನ್ನೂ ಫೋನಿಕ್ಸ್ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿ ಮುಂದುವರಿದಿದ್ದಾರೆ.

ಹಲವು ಪೊಲೀಸ್ ಅಧಿಕಾರಿಗಳು ತಮ್ಮನ್ನು ಕೆಳಗೆ ನೂಕಿ, ಕೈಕೋಳ ತೊಡಿಸುವಾಗ, ‘ನನಗೆ ಉಸಿರಾಡಲು ಆಗುತ್ತಿಲ್ಲ’ ಎಂದು ಮುಹಯ್ಮಿನ್ ಪದೇಪದೇ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳುತ್ತಿರುತ್ತದೆ. “ಓಹ್ ಅಲ್ಲಾಹನೇ’’ ಎಂದು ಮುಹಯ್ಮಿನ್ ಹೇಳುತ್ತಿರುತ್ತಾರೆ. ಆಗ, ಪೊಲೀಸ್ ಅಧಿಕಾರಿಗಳು, “ಅಲ್ಲಾ?, ಈಗ ನಿನಗೆ ಆತ ಸಹಾಯ ಮಾಡಲಾರ’’ ಎಂದು ಹೇಳುತ್ತಿರುವುದು ವೀಡಿಯೊದಲ್ಲಿದೆ.

- Advertisement -

“ದಯವಿಟ್ಟು ನನಗೆ ಸಹಾಯ ಮಾಡಿ’’ ಎಂದು ಮುಹಯ್ಮಿನ್ ಹಲವು ಬಾರಿ ಕೋರಿಕೊಳ್ಳುತ್ತಾರೆ. ಈ ಹಿಂದಿನ ವೀಡಿಯೊಗಳಲ್ಲಿ ಮುಹಯ್ಮಿನ್ ವಾಂತಿ ಮಾಡಿಕೊಳ್ಳುವ ದೃಶ್ಯಗಳು ಕಂಡುಬಂದಿದ್ದವು.

“ನನಗೆ ನಾಡಿಮಿಡಿತ ಕೇಳಿಸುತ್ತಿಲ್ಲ’’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ವೇಳೆ ಇನ್ನೊಬ್ಬ ಪೊಲೀಸ್ ಅಧಿಕಾರಿ, “ಓ.. ಈತ ಸತ್ತಿದ್ದಾನೆ’’ ಎಂದು ಹೇಳುತ್ತಾರೆ. ಅಷ್ಟರಲ್ಲಿ ವೀಡಿಯೊ ಆಫ್ ಆಗುತ್ತದೆ. ಇದೀಗ, ಮುಹಯ್ಮಿನ್ ರ ಧಾರ್ಮಿಕ ನಂಬಿಕೆಗೆ ಅವಹೇಳನ ಮಾಡುತ್ತಿರುವ ಪೊಲೀಸರ ಕುರಿತ ವೀಡಿಯೊ, ಜಾಗತಿಕ ಮಟ್ಟದಲ್ಲಿ ಜನಾಂಗೀಯವಾದದ ಕುರಿತ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ಫೋಟೊ ಕೃಪೆ : TRT / YouTube

ವೀಡಿಯೊ ಕೃಪೆ : YouTube

Join Whatsapp