ಉತ್ತರ ಪ್ರದೇಶ | ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ, ಮೃತದೇಹ ಕೆಳಕ್ಕಿಳಿಸಿದ ಜಾತಿವಾದಿಗಳು

Prasthutha|

ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಅವಧಿಯಲ್ಲಿ, ರಾಜ್ಯದಲ್ಲಿ ಹಿಂಸಾಚಾರ, ದಲಿತ ದೌರ್ಜನ್ಯ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ಮಂದಿ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಇದೀಗ ರಾಜ್ಯದ ಗ್ರಾಮವೊಂದರಲ್ಲಿ ದಲಿತ ಮಹಿಳೆಯ ಮೃತದೇಹವನ್ನು ಮೇಲ್ಜಾತಿ ಜನರು ಚಿತೆಯಿಂದ ತೆರವುಗೊಳಿಸಿದ ಅಮಾನವೀಯ ಘಟನೆ ನಡೆದಿದೆ. ಆಗ್ರಾದ ಅಚ್ಛ್ ನೆರಾ ತಾಲೂಕಿನ ರಾಯಿಭಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

- Advertisement -

ಮಹಿಳೆಯೊಬ್ಬರು ಮೃತಪಟ್ಟಿದುದರಿಂದ ಗ್ರಾಮದ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಗ್ರಾಮಸ್ಥರು ಸಿದ್ಧತೆ ನಡೆಸಿದ್ದರು. ಇನ್ನೇನು, ಮೃತ ಮಹಿಳೆಯ ಆರು ವರ್ಷದ ಮಗು ಚಿತೆಗೆ ಬೆಂಕಿಯಿಡಬೇಕು ಎನ್ನುವ ವೇಳೆಗೆ ಗ್ರಾಮದ ಮೇಲ್ಜಾತಿಗರು ಎನಿಸಿಕೊಂಡವರ ಗುಂಪೊಂದು ಸ್ಥಳಕ್ಕಾಗಮಿಸಿತು. ಮೃತ ಮಹಿಳೆಯು ದಲಿತೆಯಾಗಿರುವುದರಿಂದ ಆಕೆಯ ಶವ ಸಂಸ್ಕಾರ ಇಲ್ಲಿ ನಡೆಸಕೂಡದೆಂದು ಗುಂಪು ಬೆದರಿಕೆಯೊಡ್ಡಿತು. ಅಲ್ಲದೆ, ಚಿತೆಯ ಮೇಲಿದ್ದ ಮೃತದೇಹವನ್ನು ಚಿತೆಯಿಂದ ತೆಗೆಸಿತು.

ವಿಷಯ ಆಗ್ರಾ ಪೊಲೀಸರ ಗಮನಕ್ಕೆ ತರಲಾಗಿ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಆದರೂ, ಮಹಿಳೆಯ ಶವ ಸಂಸ್ಕಾರ ಅದೇ ಸ್ಮಶಾನದಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳುವಲ್ಲಿಯೂ ಪೊಲೀಸರು ವಿಫಲರಾಗಿದ್ದಾರೆ.

Join Whatsapp