ಉಡುಪಿಯ ಆಶಾ ಕಾರ್ಯಕರ್ತೆಯ ಸೇವೆಗೆ ವ್ಯಾಪಕ ಪ್ರಶಂಸೆ

Prasthutha|

ಉಡುಪಿ : ಕೊರೊನಾ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ದೊಡ್ಡ ಮಟ್ಟದಲ್ಲಿ ಪ್ರಶಂಸಿಸಲಾಗುತ್ತಿದೆ. ಇದೇ ವೇಳೆ ಉಡುಪಿ ಜಿಲ್ಲೆಯ ಆಶಾ ಕಾರ್ಯಕರ್ತೆಯೊಬ್ಬರು ತಮ್ಮ ಅನನ್ಯ ಸೇವೆಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಉಡುಪಿಯ ಆಶಾ ಕಾರ್ಯಕರ್ತೆ ರಾಜೀವಿ ಎಂಬವರು ರಾತ್ರಿ ಮೂರು ಗಂಟೆಗೆ ಗರ್ಭಿಣಿಯೊಬ್ಬರನ್ನು ಸ್ವತಃ ರಿಕ್ಷಾ ಚಲಾಯಿಸಿ, ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರಾಜೀವಿಯವರಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

ಬಿಡುವಿನ ವೇಳೆ ರಿಕ್ಷಾ ಚಲಾಯಿಸುವ ರಾಜೀವಿ, ಗರ್ಭಿಣಿಯರಿಗೆ ಉಚಿತವಾಗಿ ಕರೆದೊಯ್ಯುವ ಸೇವೆ ನೀಡುತ್ತಾರೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವೆಂಕಯ್ಯ ನಾಯ್ಡು, ಇದೊಂದು ಎಲ್ಲರಿಗೂ ಸ್ಫೂರ್ತಿದಾಯಕ ವಿಷಯ ಎಂದಿದ್ದಾರೆ.

ಗುರುವಾರ ರಾತ್ರಿ 3 ಗಂಟೆಗೆ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅವರು ರಾಜೀವಿ ಅವರಿಗೆ ಫೋನ್ ಮಾಡಿದ್ದಾರೆ. ತಕ್ಷಣ ಆಟೊ ಚಲಾಯಿಸಿಕೊಂಡು ಬಂದ ರಾಜೀವಿ ಗರ್ಭಿಣಿಯನ್ನು ಪೆರ್ಣಂಕಿಲ ಗ್ರಾಮದಿಂದ ಉಡುಪಿ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಂತರಾಗಿದ್ದಾರೆ.

- Advertisement -

20 ವರ್ಷಗಳಿಂದ ಆಟೊ ಓಡಿಸುತ್ತಿರುವ ರಾಜೀವಿ, ಸ್ಥಳೀಯ ಆಶಾ ಕಾರ್ಯಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮಧ್ಯಾಹ್ನದ ವರೆಗೆ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುವ ರಾಜೀವಿ ಮಧ್ಯಾಹ್ನ ನಂತರ ಈಗಲೂ ಆಟೊ ಓಡಿಸುತ್ತಿದ್ದಾರೆ. ಇಲ್ಲಿ ವರೆಗೆ 150ಕ್ಕೂ ಹೆಚ್ಚು ಗರ್ಭಿಣಿಯರನ್ನು ಉಚಿತವಾಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಕೊರೊನಾ ಸೋಂಕು ಹರಡಿದ ಬಳಿಕ ಆಶಾ ಕಾರ್ಯಕರ್ತೆಯಾಗಿ ಹೆಚ್ಚು ಕೆಲಸ ಮಾಡಬೇಕಾದುದರಿಂದ, ಆಟೊ ಓಡಿಸಲು ಸಮಯ ಸಿಗುತ್ತಿಲ್ಲ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಪತ್ರವನ್ನು ತಮ್ಮ ಆಟೊಗೆ ಅಂಟಿಸಿ ರಾಜೀವಿ ಎಲ್ಲರ ಗಮನ ಸೆಳೆದಿದ್ದರು. ಬಸ್ ಸೇವೆ ಇಲ್ಲದ ಪೆರ್ಣಂಕಿಲದಲ್ಲಿ ಅವರು ತಮ್ಮ ಆಟೊ ಸೇವೆಯನ್ನು ಒದಗಿಸಿಕೊಂಡು ಬರುತ್ತಿದ್ದಾರೆ. ಇಬ್ಬರು ಮಕ್ಕಳನ್ನು ಹೊಂದಿರುವ ರಾಜೀವಿ ಅವರ ಪುತ್ರಿಗೆ ಮದುವೆಯಾಗಿದ್ದು, ಪುತ್ರ ಉದ್ಯೋಗದಲ್ಲಿದ್ದಾನೆ. ಪತಿ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.   

Join Whatsapp