ಅಪ್ರಮಾಣಿಕ ಕ್ಷಮೆ ಯಾಚನೆ ನನ್ನ ಆತ್ಮಸಾಕ್ಷಿಗೆ ವಿರುದ್ಧವಾದುದು | ಸುಪ್ರೀಂ ಆಫರ್ ನಿರಾಕರಿಸಿದ ಪ್ರಶಾಂತ್ ಭೂಷಣ್

Prasthutha|

ನವದೆಹಲಿ : ಸಿಜೆಐ ಎಸ್.ಎ. ಬೊಬ್ಡೆ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಟೀಕಿಸಿದ ಟ್ವೀಟ್ ಮಾಡಿದ್ದುದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿರುವ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ. ಕ್ಷಮೆ ಯಾಚಿಸಿದಲ್ಲಿ ತಮ್ಮ ಆತ್ಮಸಾಕ್ಷಿಗೆ ತಾವೇ ವಂಚಿಸಿದಂತೆ ಎಂದು ಅವರು ಹೇಳಿದ್ದಾರೆ. ತಮ್ಮ ವಿವಾದಾತ್ಮಕ ಟ್ವೀಟ್ ಗಳಿಗಾಗಿ ಕ್ಷಮೆ ಯಾಚಿಸಲು ಸುಪ್ರೀಂ ಕೋರ್ಟ್ ನೀಡಿದ್ದ ಮೂರು ದಿನಗಳ ಗಡುವು ಇಂದಿಗೆ ಮುಗಿದಿದೆ.

- Advertisement -

ಕೋರ್ಟ್ ನೀಡಿರುವ ಪ್ರಸ್ತಾಪಕ್ಕೆ ನಾನು ಪ್ರತಿಕ್ರಿಯಿಸಿ ಕ್ಷಮೆ ಯಾಚಿಸಿದರೆ, ಹೇಳಿಕೆ ಹಿಂಪಡೆದರೆ ನಾನು ಅಪ್ರಮಾಣಿಕವಾದ ಕ್ಷಮೆ ಯಾಚಿಸಿದಂತಾಗುತ್ತದೆ. ಅದು ನನ್ನ ಆತ್ಮಸಾಕ್ಷಿಗೆ ಮತ್ತು ನಾನು ಅತ್ಯಂತ ಗೌರವದಿಂದ ಕಾಣುವ ಸಂಸ್ಥೆಗೆ ವಂಚಿಸಿದಂತೆ ಎಂದು ಭೂಷಣ್ ತಮ್ಮ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಬೇಷರತ್ ಕ್ಷಮೆ ಯಾಚಿಸುವಂತೆ ನ್ಯಾಯಾಲಯ ಗುರುವಾರ ಭೂಷಣ್ ಗೆ ಸೂಚಿಸಿತ್ತು. ಅಲ್ಲದೆ, ಅದಕ್ಕಾಗಿ ಅವರಿಗೆ ಮೂರು ದಿನಗಳ ಕಾಲಾವಕಾಶ ನೀಡಿತ್ತು. ಸಿಜೆಐ ಅವರು ಬಿಜೆಪಿ ನಾಯಕರೊಬ್ಬರ ದುಬಾರಿ ಬೈಕ್ ಸವಾರಿ ನಡೆಸಿದ್ದುದಕ್ಕೆ ಮತ್ತು ನ್ಯಾಯಾಂಗದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಟೀಕೆ ಮಾಡಿ ಲಾಕ್ ಡೌನ್ ಅವಧಿಯಲ್ಲಿ ಭೂಷಣ್ ಎರಡು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಸಂಬಂಧಿಸಿ ಅವರು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದಾರೆ. ಪ್ರಕರಣದಲ್ಲಿ ಭೂಷಣ್ ದೋಷಿ ಎಂದು ಕೋರ್ಟ್ ಪರಿಗಣಿಸಿದೆ, ಆದರೆ ಶಿಕ್ಷೆಯ ಪ್ರಮಾಣ ಇನ್ನಷ್ಟೇ ಘೋಷಣೆಯಾಗಬೇಕಿದೆ.

- Advertisement -

Join Whatsapp