October 27, 2020

ಎನ್ ಡಿಎಯಲ್ಲಿ ಬಿರುಕು? | ಬಿಹಾರ ಚುನಾವಣೆಗೆ ಮೋದಿ, ನಿತೀಶ್ ಪ್ರತ್ಯೇಕ ಜಾಹೀರಾತು

ಪಾಟ್ನಾ : ಇತ್ತೀಚಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ನಿದಾನಕ್ಕೆ ಬೆಳಕಿಗೆ ಬರುತ್ತಿದೆ. ಕೆಲವೊಂದು ಪಕ್ಷಗಳು ಮೈತ್ರಿಕೂಟದಿಂದ ಹೊರಹೋಗುತ್ತಿದ್ದರೆ, ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದರೂ, ಮೈತ್ರಿಕೂಟದೊಳಗಿನ ಭಿನ್ನಮತಗಳು ಬೆಳಕಿಗೆ ಬರುತ್ತಿವೆ. ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಹೆಸರಿನಲ್ಲಿ ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ಜೊತೆಗೂಡಿ ಎದುರಿಸುತ್ತಿದ್ದರೂ, ಕರಪತ್ರ, ಭಿತ್ತಿಪತ್ರ ಹಾಗೂ ಜಾಹೀರಾತುಗಳಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿರುವ ರೀತಿ ಭಾಸವಾಗುತ್ತಿದೆ.

ಒಂದೆಡೆ ಬಿಜೆಪಿ ಭಿತ್ತಿಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತ್ರ ವಿರಾಜಮಾನರಾಗಿದ್ದಾರೆ. ಇನ್ನೊಂದೆಡೆ ಪತ್ರಿಕೆಗಳಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ನೀಡಿರುವ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯ ಉಲ್ಲೇಖವೇ ಇಲ್ಲ.
ಬಿಹಾರದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಜಾಹೀರಾತಿನಲ್ಲಿ ‘ಬಿಜೆಪಿ ಹೈ ತೋ ಭರೋಸಾ ಹೈ’ (ಬಿಜೆಪಿ ಇದ್ದೆಡೆ ಭರವಸೆಯಿರುತ್ತದೆ) ಎಂಬ ಸಾಲು ಪ್ರಕಟಿಸಲಾಗಿತ್ತು. ನರೇಂದ್ರ ಮೋದಿ ಚಿತ್ರ ಎದ್ದು ಕಾಣುತ್ತಿದ್ದ ಚಿತ್ರದಲ್ಲಿ ಬಿಜೆಪಿ ಚುನಾವಣಾ ಭರವಸೆಗಳು ಮಾತ್ರ ನಮೂದಾಗಿದ್ದವು.

ಪ್ರತಿಪಕ್ಷಗಳು ಇದನ್ನು ಟೀಕೆಗೆ ಬಳಸಿಕೊಂಡಿದ್ದು, ಬಿಹಾರದಲ್ಲಿ ನಿತೀಶ್ ಕುಮಾರ್ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಪ್ರತಿಪಕ್ಷಗಳ ಯುವ ಮುಖಂಡರುಗಳಾದ ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ. ಬಿಹಾರದಲ್ಲಿ ಅ.28 ಮತ್ತು ನ.7ರಂದು ಮತದಾನ ನಡೆಯಲಿದೆ.

ಟಾಪ್ ಸುದ್ದಿಗಳು